ಜಿಲ್ಲೆ

ಹಾಡಹಗಲೇ ಉದ್ಯಮಿ ಕೃಷ್ಣೇಗೌಡ ಬರ್ಬರ ಹತ್ಯೆ

ಹಾಸನ: ನಗರದ ಹೊರವಲಯದಲ್ಲಿ ಹಾಡಹಗಲೇ ಗ್ರಾನೈಟ್ ಉದ್ಯಮಿ ಹಾಗೂ ಜೆಡಿಎಸ್ ಮುಖಂಡನನ್ನು ಅವರ ಗ್ರಾನೈಟ್ ಕಾರ್ಖಾನೆ ಎದುರೇ ದುಷ್ಕರ್ಮಿಗಳು ಬುಧವಾರ ಮಧ್ಯಾಹ್ನ ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ.

ನಗರದ ಕುವೆಂಪುನಗರದ ವಾಸಿ ಕೃಷ್ಣೇಗೌಡ (56) ಕೊಲೆಯಾದ ಉದ್ಯಮಿ. ಹೊಳೆರನರಸೀಪುರ ರಸ್ತೆಯ ಕೈಗಾರಿಕಾ ಪ್ರದೇಶವಾದ ನಾಗತವಳ್ಳಿ ಗ್ರಾಮದ ಬಳಿ ಕೃಷ್ಣೇಗೌಡರ ಗ್ರಾನೈಟ್ ಫ್ಯಾಕ್ಟರಿ ಎದುರು ನಿರ್ಜನ ಪ್ರದೇಶದಲ್ಲಿ ಸುಮಾರು ಮಧ್ಯಾಹ್ನ 1.15 ರಿಂದ 1.45ರ ಒಳಗೆ ಹತ್ಯೆ ಮಾಡಲಾಗಿದೆ. ಇನ್ನೋವಾ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮನಬಂದಂತೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಹಂತಕರ ಮಚ್ಚೇಟಿನಿಂದ ಕಾಲು, ಭುಜ, ತಲೆ, ಕುತ್ತಿಗೆಗೆ ತೀವ್ರ ಪೆಟ್ಟುಗಳಾಗಿ ರಕ್ತಸ್ರಾವವಾಗಿ ಕೃಷ್ಣೇಗೌಡರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಭೇಟಿ ನೀಡಿ, ಪರಿಶೀಲಿಸಿದ್ದಾರೆ.

ಶ್ರೀರಾಮ ಮಾರ್ಬಲ್ಸ್ ಹೆಸರಿನಲ್ಲಿ ಗ್ರಾನೈಟ್ ವ್ಯವಹಾರ ಮಾಡುತ್ತಿದ್ದ ಕೃಷ್ಣೇಗೌಡರು ಜೆಡಿಎಸ್ ಮುಖಂಡರಾಗಿ, ಮಾಜಿ ಸಚಿವ ರೇವಣ್ಣ ಕುಟುಂಬಕ್ಕೆ ಆಪ್ತರಾಗಿದ್ದರು. 2013ರಲ್ಲಿ ಜೆಡಿಎಸ್ ಪಕ್ಷದಿಂದ ನಗರಸಭೆಯ ಮೂರನೇ ವಾರ್ಡ್ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿ ಪರಾಭವಗೊಂಡಿದ್ದರು. ಗ್ರಾನೈಟ್ ಉದ್ಯಮಿಯಾಗಿರುವ ಕೃಷ್ಣೇಗೌಡರು ಕಳೆದ ನಾಲ್ಕು ವರ್ಷಗಳ ಹಿಂದೆ ಅವರ ಶ್ರೀರಾಮ್ ಮಾರ್ಬಲ್ಸ್ ಕಾರ್ಖಾನೆಯನ್ನು ಸ್ಥಗಿತಗೊಳಿಸಿದ್ದರು. ಆದರೆ ಅವರು ಕೆಲವು ಸಂದರ್ಭದಲ್ಲಿ ಕಾರ್ಖಾನೆ ಹತ್ತಿರ ಹೋಗಿ ಬರುವ ಅಭ್ಯಾಸ ಇಟ್ಟುಕೊಂಡಿದ್ದರು. ಬುಧವಾರ ಕೃಷ್ಣೇಗೌಡ ಅವರು ತಮ್ಮ ಇನ್ನೋವಾ ಕಾರಿನಲ್ಲಿ ಕಾರ್ಖಾನೆ ಬಳಿಗೆ ತೆರಳಿದ್ದಾರೆ. ಇದನ್ನು ತಿಳಿದಿದ್ದ ಹಂತಕರು ಹೊಂಚು ಹಾಕಿ ಅವರನ್ನು ಹಿಂಬಾಲಿಸಿಕೊಂಡು ಬೇರೊಂದು ಕಾರಿನಲ್ಲಿ ಬಂದಿದ್ದಾರೆ. ಏಕಾಏಕಿ ಕೃಷ್ಣೇಗೌಡರ ಮೇಲೆ ಮುಗಿಬಿದ್ದಾಗ ತಪ್ಪಿಸಿಕೊಂಡು ಓಡಲು ಮುಂದಾಗಿದ್ದಾರೆ. ಆದರೆ, ಹಿಂಬಾಲಿಸಿಕೊಂಡು ಬಂದ ಹಂತಕರು ತಲೆ ಮತ್ತು ಕುತ್ತಿಗೆ ಭಾಗಕ್ಕೆ ಕೊಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಮೃತರಿಗೆ ಪತ್ನಿ, ಇಬ್ಬರು ಪುತ್ರಿ ಹಾಗೂ ಓರ್ವ ಪುತ್ರ ಇದ್ದಾರೆ. ಮೂಲತಃ ಮಂಡ್ಯ ಜಿಲ್ಲೆ, ಮೇಲುಕೋಟೆ ಸಮೀಪದ ಜಟ್ಟನಹಳ್ಳಿ ಗ್ರಾಮದವರಾದ ಕೃಷ್ಣೇಗೌಡರ ತಂದೆಗೆ ಹಾಸನದಲ್ಲಿ ಕೆಲಸ ಸಿಕ್ಕಿದ್ದಾಗ ಕುಟುಂಬಸಮೇತವಾಗಿ ಹಾಸನಕ್ಕೆ ಬಂದು ವಾಸವಾಗಿದ್ದರು. ಗುರುವಾರ ಅಂತ್ಯಕ್ರಿಯೆ ನಡೆಯಲಿದೆ.

ಹಂತಕರನ್ನು ಶೀಘ್ರ ಬಂಧಿಸಿ: ಶಾಸಕ ಸ್ವರೂಪ್

ಉದ್ಯಮಿ ಕೃಷ್ಣೇಗೌಡ ಕೊಲೆಯಾಗಿರುವ ಸುದ್ದಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಶಾಸಕ ಎಚ್.ಪಿ. ಸ್ವರೂಪ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವಂತೆ ಪೊಲೀಸ್ ಇಲಾಖೆಗೆ ಒತ್ತಾಯಿಸಿದರು. ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಬಹಳ ಮೃಧು ಸ್ವಭಾವದ ಕೃಷ್ಣೇಗೌಡರನ್ನು ಭೀಕರವಾಗಿ ಹತ್ಯೆ ಮಾಡಿರುವುದು ಬಹಳ ನೋವಿನ ಸಂಗತಿಯಾಗಿದೆ. ಯಾರೊಂದಿಗೆ ವೈಮನಸ್ಸು ಹೊಂದಿದವರಲ್ಲ. ಅಂತಹವರ ಕೊಲೆ ಮಾಡಿದ ಹಂತಕರನ್ನು ಪೊಲೀಸರು ಶೀಘ್ರದಲ್ಲೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು. ಅವರ ಕುಟುಂಬಕ್ಕೆ ಈ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಹೇಳಿದರು.

4 ತಂಡಗಳ ರಚನೆ: ಎಸ್‌ಪಿ ಹರಿರಾಂ ಶಂಕರ್

ಘಟನೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಮಾಧ್ಯಮದೊಂದಿಗೆ ಮಾತನಾಡಿ, ಬುಧವಾರ ಮಧ್ಯಾಹ್ನ ಕೃಷ್ಣೇಗೌಡ ಅವರು ತಮ್ಮ ಕಾರ್ಖಾನೆ ಬಳಿ ಬಂದು ಗೇಟ್ ತೆರೆಯುವಾಗ 4ರಿಂದ 5 ಜನ ತಲ್ವಾರ್‌ನಿಂದ ದಾಳಿ ನಡೆಸಿ ಕೊಲೆ ಮಾಡಿರುವುದಾಗಿ ಮಾಹಿತಿ ಸಿಕ್ಕಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ವೈಯಕ್ತಿಕ ಕಾರಣಗಳಿಗಾಗಿ ಕೊಲೆ ನಡೆದಿರಬಹುದು. ಈಗಾಗಲೇ ನಾಲ್ಕು ತಂಡಗಳನ್ನು ರಚನೆ ಮಾಡಲಾಗಿದ್ದು, ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ಆರಂಭಿಸಲಾಗಿದೆ. ಘಟನೆ ಸಂಬಂಧ ಸಾರ್ವಜನಿಕರಲ್ಲಿ ಯಾವುದಾದರೂ ಮಾಹಿತಿ, ಸಾಕ್ಷೃ ಸಿಕ್ಕರೆ ನನ್ನನ್ನು ಅಥವಾ ಡಿವೈಎಸ್‌ಪಿ ಅವರಿಗೆ ಕರೆ ಮಾಡಿ ಮಾಹಿತಿ ಹಂಚಿಕೊಳ್ಳಿ ಎಂದು ಹೇಳಿದರು.

ಹಣಕಾಸು ವಿಚಾರದಲ್ಲಿ ಕೊಲೆ ಶಂಕೆ?

ಸರಳ ವ್ಯಕ್ತಿತ್ವದ ಕೃಷ್ಣೇಗೌಡರು ಎಲ್ಲರೊಂದಿಗೂ ವಿಶ್ವಾಸದಿಂದ ಇದ್ದವರು. ಹಣಕಾಸು ವಿಚಾರದಲ್ಲಿ ಕೆಲವರ ಜತೆ ಭಿನ್ನಾಭಿಪ್ರಾಯಗಳಿದ್ದವು ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕೆ ಹತ್ಯೆಯಾಗಿರಬಹುದು ಎಂದು ಅವರ ಆಪ್ತ ಸ್ನೇಹಿತ ಬಳಗ ಶಂಕೆ ವ್ಯಕ್ತಪಡಿಸುತ್ತಿದೆ.

ಕೇವಲ 5-10 ನಿಮಿಷದಲ್ಲಿ ಕೃತ್ಯ

ಕೃಷ್ಣೇಗೌಡರನ್ನು ಕೊಲೆ ಮಾಡಲು ಹೊಂಚು ಹಾಕಿ ಕುಳಿತಿದ್ದ ನಾಲ್ಕರಿಂದ ಐದು ಜನರ ಹಂತಕರ ತಂಡ ಕೇವಲ 5ರಿಂದ 10 ನಿಮಿಷದಲ್ಲಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಪೊಲೀಸರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ತಪಾಸಣೆ ಆರಂಭಿಸಿದ್ದು ಆರೋಪಿಗಳನ್ನು ಬಂಧಿಸುವ ನಿಟ್ಟಿನಲ್ಲಿ ಮುಂದಾಗಿದ್ದಾರೆ. ಪೊಲೀಸರ ತನಿಖೆ ನಂತರ ಎಷ್ಟು ಜನ ಆರೋಪಿಗಳು ಭಾಗಿಯಾಗಿದ್ದರೂ? ಯಾವ ಕಾರಣಕ್ಕಾಗಿ ಹತ್ಯೆ ಮಾಡಲಾಗಿದೆ ಎಂಬ ಸತ್ಯ ಹೊರಬರಬೇಕಾಗಿದೆ.