ಜಿಲ್ಲೆ

ಹಾಜರಿ ಪುಸ್ತಕಕ್ಕೆ ಅಡ್ವಾನ್ಸ ರುಜು !

ಪರಶುರಾಮ ಭಾಸಗಿ ವಿಜಯಪುರ

ಮಹಾಮಾರಿ ಕರೊನಾ ಜಗತ್ತಿಗೆ ಶಾಪವಾಗಿ ಪರಿಣಮಿಸಿದ್ದರೂ ಕೆಲವರಿಗೆ ಮಾತ್ರ ವರವಾಗಿ ಪರಿಣಮಿಸಿದೆ ಎಂಬುದಕ್ಕೆ ಬಬಲೇಶ್ವರ ಬಿಸಿಎಂ ವಸತಿ ನಿಲಯವೇ ಸಾಕ್ಷಿ !
ಇಲ್ಲಿನ ಮೆಟ್ರಿಕ್ ನಂತರದ ಮಹಿಳಾ ವಸತಿ ನಿಲಯದಲ್ಲಿ ಕರೊನಾ ನೆಪದಲ್ಲಿ ಬಯೋಮೆಟ್ರಿಕ್ ಹಾಜರಾತಿಗೆ ಸಿಬ್ಬಂದಿ ಎಳ್ಳು ನೀರು ಬಿಟ್ಟಿದ್ದಾರೆ. ಅದಕ್ಕೆ ಪರ್ಯಾಯವಾಗಿ ಹಾಜರಿ ಪುಸ್ತಕ ಇರಿಸಿದ್ದು, ಮುಂಚಿತವಾಗಿಯೇ ರುಜು ಹಾಕಿ ಕರ್ತವ್ಯ ಲೋಪ ಎಸಗಿದ್ದಾರೆ.
ಈ ಬಗ್ಗೆ ತೀವ್ರ ಆಕ್ಷೇಪ ಹೊರಬೀಳುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿ ನೋಟಿಸ್ ನೀಡುವ ಪ್ರಹಸನಕ್ಕೆ ಮೇಲಾಧಿಕಾರಿಗಳು ಮುನ್ನುಡಿ ಬರೆದಿದ್ದಾರೆ. ಆದರೆ, ಈವರೆಗೂ ಕ್ರಮ ಮಾತ್ರ ಕೈಗೊಂಡಿಲ್ಲ.

ಪ್ರಕರಣದ ವಿವರ

ವಸತಿ ನಿಲಯದ ಮೇಲ್ವಿಚಾರಕಿ ರೇಖಾ ಗುಂಡಳ್ಳಿ ವಸತಿ ನಿಲಯಕ್ಕೆ ಬರುವುದೇ ಅಪರೂಪ ಎಂಬುದು ಸ್ಥಳೀಯರ ಆರೋಪ. ವಾರ- ಹದಿನೈದು ದಿನಕ್ಕೊಮ್ಮೆ ಬರುವ ಇವರು ವಸತಿ ನಿಲಯದ ಬಗ್ಗೆ ಕಾಳಜಿ ವಹಿಸುತ್ತಿಲ್ಲ, ಶುಚಿತ್ವಕ್ಕೆ ಆದ್ಯತೆ ನೀಡುತ್ತಿಲ್ಲ, ಸಿಬ್ಬಂದಿ ಮೇಲೆ ನಿಯಂತ್ರಣವಿಲ್ಲ ಎಂಬಿತ್ಯಾದಿ ಆರೋಪಗಳನ್ನು ಎದುರಿಸುತ್ತಿದ್ದಾರೆ.
ಕೇಂದ್ರ ಸ್ಥಾನದಲ್ಲೇ ಮನೆ ಮಾಡಬೇಕೆಂಬ ನಿಯಮವಿದ್ದರೂ ಸದರಿ ಮೇಲ್ವಿಚಾರಕಿ ಕರೊನಾ ನೆಪದಲ್ಲಿ ಗ್ರಾಮದಲ್ಲಿ ಮನೆ ಮಾಡಿಲ್ಲ. ನಿತ್ಯ ಹೋಗಿ ಬಂದು ಮಾಡುವುದಾಗಿ ಸಮಜಾಯಿಷಿ ನೀಡುತ್ತ್ತರಾದರೂ ಅಸಲಿಗೆ ವಸತಿ ನಿಲಯಕ್ಕೆ ಬಂದಿದ್ದೇ ಅಪರೂಪ ಎಂಬ ಪ್ರಬಲ ಆರೋಪವಿದೆ. ಈ ಎಲ್ಲ ಆರೋಪಗಳು ಮೇಲಾಧಿಕಾರಿಗಳ ಭೇಟಿ ಸಂದರ್ಭದಲ್ಲೂ ರುಜುವಾತಾಗಿವೆ.

ನೋಟಿಸ್ ಜಾರಿ

ಮೇಲ್ವಿಚಾರಕಿ ರೇಖಾ ಗುಂಡಳ್ಳಿ ಅಧಿಕಾರಿಗಳ ಭೇಟಿ ಸಂದರ್ಭ ಅನಧಿಕೃತವಾಗಿ ಗೈರಾಗಿದ್ದು ಕಂಡು ಬಂದಿದೆ. ಮಾತ್ರವಲ್ಲ, ಅಡುಗೆ ಸಿಬ್ಬಂದಿ ವಿದ್ಯಾ ಹಿರೇಕುರುಬರ, ಶಿವಮ್ಮಾ ಹಿರೇಮಠ ಅವರಿಂದ ಮುಂಚಿತವಾಗಿ ಹಾಜರಿ ಪುಸ್ತಕಕ್ಕೆ ರುಜು ಹಾಕಿಸಿಕೊಂಡಿದ್ದು ಬೆಳಕಿಗೆ ಬಂದಿದೆ. ಸ್ವತಃ ಮೇಲ್ವಿಚಾರಕಿ ಯಾವುದೇ ರಜೆ ಪತ್ರ ನೀಡದೆ ಗೈರಾಗಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದ್ದು, 2020 ಆ.11 ರಂದು ನೋಟಿಸ್ ಕೂಡ ನೀಡಿದ್ದಾರೆ.
ಮೇಲ್ವಿಚಾರಕಿ ಸಹಿತ ಅಡುಗೆ ಸಿಬ್ಬಂದಿ ಕೇಂದ್ರ ಸ್ಥಾನದಲ್ಲಿ ಮನೆ ಮಾಡದಿರುವುದು, ಸಿಬ್ಬಂದಿ ಮೇಲೆ ಮೇಲ್ವಿಚಾರಕಿ ನಿಯಂತ್ರಣ ಸಾಧಿಸದೆ ಇರುವುದು, ವಸತಿ ನಿಲಯದಲ್ಲಿ ಶುಚಿತ್ವ ಕಾಯ್ದುಕೊಳ್ಳದೆ ಇರುವುದು ಸೇರಿ ಹಲವು ಕಾರಣಗಳನ್ನಿಟ್ಟುಕೊಂಡು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯೆ ತಾಲೂಕು ವಿಸ್ತರಣಾಧಿಕಾರಿ ನೋಟಿಸ್ ನೀಡಿದ್ದಾರೆ.
ಆದರೆ, ನೋಟಿಸ್ ಹೊರತಾಗಿ ಈವರೆಗೂ ಕರ್ತವ್ಯಲೋಪ ಎಸಗಿದ ಮೇಲ್ವಿಚಾರಕಿ ಹಾಗೂ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳದಿರುವ ಹಿರಿಯ ಅಧಿಕಾರಿಗಳ ನಡೆಗೆ ಗ್ರಾಮಸ್ಥರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳ ಭೇಟಿ ಸಂದರ್ಭ ಅನಾರೋಗ್ಯ ಹಿನ್ನೆಲೆ ರಜೆ ಹಾಕಿದ್ದೆ. ಆ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ. ಇನ್ನು ಸಿಬ್ಬಂದಿ ನಾನಿಲ್ಲದಾಗ ಮುಂಚಿತವಾಗಿ ರುಜು ಹಾಕಿದ್ದು ಆ ಬಗ್ಗೆ ನೋಟಿಸ್ ನೀಡಲಾಗಿದೆ. ಕರೊನಾ ಹಿನ್ನೆಲೆ ವಿಜಯಪುರದಲ್ಲಿ ಮನೆ ಮಾಡಿದ್ದು, ಹೋಗಿ-ಬಂದು ಮಾಡುತ್ತಿದ್ದೇನೆ. ಸ್ವಚ್ಛತೆಗೆ ಸಂಬಂಧಿಸಿದಂತೆ ಸಮಜಾಯಿಷಿ ನೀಡಲಾಗಿದೆ.
ರೇಖಾ ಗುಂಡಳ್ಳಿ, ಮೇಲ್ವಿಚಾರಕಿ

ವಿದ್ಯಾರ್ಥಿಗಳ ದೂರು ಆಧರಿಸಿ ವಸತಿ ನಿಲಯಕ್ಕೆ ಭೇಟಿ ನೀಡಿದಾಗ ಸಾಕಷ್ಟು ಲೋಪದೋಷ ಕೇಳಿ ಬಂದಿವೆ. ಹಾಜರಾತಿಗೆ ಮುಂಚಿತವಾಗಿ ಸಹಿ ಹಾಕಿದ್ದು ಕಂಡು ಬಂತು. ವಾರಕ್ಕೊಮ್ಮೆ- ಹದಿನೈದು ದಿನಕ್ಕೊಮ್ಮೆ ಮೇಲ್ವಿಚಾರಕಿ ಬರುತ್ತಾರೆ. ಸಿಬ್ಬಂದಿಗೆ ಮತ್ತು ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕುತ್ತಾರೆ. ಅಲ್ಲದೆ, ಜನಪ್ರತಿನಿಧಿಯಾದ ನನಗೂ ಸರಿಯಾಗಿ ಸ್ಪಂದನೆ ನೀಡಿಲ್ಲ. ಹೆಚ್ಚಿಗೆ ವಿಚಾರಿಸಲು ಹೋದರೆ ಗದರಿಸುತ್ತಾರೆ. ಕಳಪೆ ಆಹಾರ ನೀಡುತ್ತಾರೆ. ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ.
ಬೀರಪ್ಪ ಸೊಡ್ಡಿ, ತಾ.ಪಂ. ಸದಸ್ಯ ಬಬಲೇಶ್ವರ

ಪ್ರಕರಣ ಗಮನಕ್ಕೆ ಬಂದಿದೆ. ಅಧಿಕಾರ ವಹಿಸಿಕೊಂಡು ವಾರವಾಗಿದ್ದು ಹಿಂದಿನ ಸಂಪೂರ್ಣ ವಿವರ ಗೊತ್ತಿಲ್ಲ. ನೋಟಿಸ್ ನೀಡಿದ ಅಧಿಕಾರಿಯೂ ವರ್ಗವಾಗಿದ್ದಾರೆ. ಹೀಗಾಗಿ ಇನ್ನೊಮ್ಮೆ ಪರಿಶೀಲನೆ ನಡೆಸಿ ತಪ್ಪು ಕಂಡು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು.
ಈರಣ್ಣ ಆಶಾಪುರ, ಬಿಎಸಿಎಂ ಜಿಲ್ಲಾಧಿಕಾರಿ