ಬಾಗಲಕೋಟೆ: ಮಾನವನಿಗೆ ಮಾನಸಿಕ ಸ್ಥೈರ್ಯ ತುಂಬುವಶಕ್ತಿ ಭಾರತೀಯ ಶಾಸ್ತ್ರಗಳಲ್ಲಿದ್ದು, ಹಸ್ತಪ್ರತಿಶಾಸ್ತ್ರ ಭಾರತದ ಅಸ್ಮೀತೆ ಪ್ರತಿಕವಾಗಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ವೀರೇಶ ಬಡಿಗೇರ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ವಿಭಾಗ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಕಾಲೇಜಿನ ಸಭಾಭವನದಲ್ಲಿ ಶನಿವಾರ ನಡೆದ ಹಸ್ತಪ್ರತಿಶಾಸ್ತ್ರ ಮತ್ತು ಗ್ರಂಥ ಸಂಪಾದನೆ ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.
ತಾಳೆಗರಿ ಹಸ್ತಪ್ರತಿಗಳು ರಚಿಸಲ್ಪಡಬೇಕಾದರೆ ೧೩ ತಳ ಸಮುದಾಯಗಳ ಶ್ರಮದ ಅವಶ್ಯಕತೆ ಇತ್ತು, ಅಂದು ಬರವಣೆಗೆ ತಳ ಸಮುದಾಯದಲ್ಲಿತ್ತು ಎಂಬುದನ್ನು ಇಲ್ಲಿ ಗಮನಿಸಬಹುದಾಗಿದೆ, ದೇಶದಲ್ಲಿ ಮುದ್ರಣೋಧ್ಯಮ ಬಂದುದ್ದು ಕ್ರೀ.ಶ ೧೧೬೦ರಲ್ಲಿ, ಆದರೆ ಸ್ವಾತಂತ್ರ‍್ಯ ಪೂರ್ವದಲ್ಲಿ ಮುದ್ರಣ ತಂತ್ರಜ್ಞಾನ ಬರುವ ಮುಂಚೆ ನಮ್ಮಲ್ಲಿ ಬರವಣಿಗೆ ಪರಮಂಪರೆ, ಸಾಹಿತ್ಯ ಪರಂಪರೆ, ಸಮುದಾಯ ಪರಂಪರೆಗಳು ಹೆಗಿದ್ದವು ಎಂಬುದನ್ನು ಆಯಾ ಕಾಲದ ಹಸ್ತಪ್ರತಿಗಳು ಒತ್ತಿ ಹೇಳುತ್ತವೆ ಎಂದು ಹೇಳಿದರು.
ಜೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಶಾಸನ ಶಾಸ್ತ್ರ ಸೇರಿದಂತೆ ಎಲ್ಲ ಶಾಸ್ತ್ರಗಳು ಮನುಷ್ಯನನ್ನು ಶೋಷಣೆ ಮಾಡುವ ಶಾಸ್ತ್ರಗಳಾಗಿದ್ದಿಲ್ಲಿ, ನಮ್ಮೇಲ್ಲಾ ಶಾಸ್ತ್ರಗಳು ಮನುಷ್ಯನಿಗೆ ಮಾನಸಿಕ ಸ್ಥೆರ್ಯ ತುಂಬುವ ಶಾಸ್ತ್ರಗಳಾಗಿದ್ದವು ಒರತು ಮನುಷ್ಯನನ್ನು ಸುಲಿದು ತಿನ್ನುವ ಶಾಸ್ತ್ರಗಳಾಗಿದ್ದಿಲ್ಲಾ, ಹಸ್ತ ಪ್ರತಿಶಾಸ್ತ್ರದಿಂದ ನಮ್ಮ ದೇಶದ ಪರಂಪರೆ ಮತ್ತು ಸಂಸ್ಕೃತಿಯನ್ನು ತಿಳಿಯಬಹುದಾಗಿದೆ. ಹಸ್ತಪ್ರತಿಗಳು ಈ ದೇಶದ ಅಸ್ಮೀತೆಯ ದಾಖಲೆಗಳಾಗಿವೆ ಎಂದು ತಿಳಿಸಿದರು.
ಬಾಗಲಕೋಟೆಯಲ್ಲಿರುವ ಟೀಕಿನಮಠ ವಚನಗಳಿಗೆ ಟೀಕುಗಳ ಮೂಲಕ ವಾಖ್ಯಾನ ಬರೆಯುವ ಮಠವಾಗಿತ್ತು, ಜಮಖಂಡಿಯಲ್ಲಿರುವ ಓಲೆಮಠ, ಓಲೇಗರಿ ಹಾಗೂ ತಾಳೆಗರಿಗಳನ್ನು ಸಂಗ್ರಹಿಸುವ ಮಠವಾಗಿತ್ತು, ಬೇಲಿಮಠ, ಓದಿಸುವ ಮಠ ಸೇರಿದಂತೆ ನಾಡಿನ ಮಠಗಳು ಜನರಿಗೆ ಶಿಕ್ಷಣ ಮತ್ತು ಸಂಸ್ಕಾರವನ್ನು ಕೊಟ್ಟಿದ್ದವು, ಹಿಂದಿನ ಪೂರ್ವಜರಿಗೆ ಆರೋಗ್ಯ, ರಕ್ಷಣೆ ಜೀವನ ನಡೆಸುವದರ ಆಳವಾದ ಜ್ಞಾನವಿತ್ತು. ವಿದ್ಯಾರ್ಥಿಗಳು ಗುರು ಹಿರಿಯರನ್ನು ಗೌರವಿಸಿ ಅವರಲ್ಲಿರುವ ಜ್ಞಾನ ಸಂಪತ್ತನ್ನು ಪಡೆದುಕೊಳ್ಳಿ ಎಂದರು.
ಪ್ರಾಚಾರ್ಯ ಎಸ್.ಎನ್.ಪಟ್ಟಣಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಹಸ್ತಪ್ರತಿಗಳಲ್ಲಿ ಜ್ಞಾನ ಸಂಸ್ಕೃತಿಯನ್ನು ಅರಿತು ಉತ್ತಮ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ತಿಳಿಸಿದರು.
ಕನ್ನಡ ವಿಭಾಗದ ಉಪನ್ಯಾಸ ಸಂಗಮೇಶ ಬ್ಯಾಳಿ ಪ್ರಸ್ತಾವಿಕ ಮಾತನಾಡಿದರು, ವೇದಿಕೆ ಮೇಲೆ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ.ಚಂದ್ರಶೇಖರ ಕಾಳನ್ನವರ, ಐಕ್ಯೂಎಸಿ ಸಂಚಾಲಕ ಡಾ.ಬಿ.ಎಂ.ಬಡಿಗೇರ, ಸಾಂಸ್ಕೃತಿಕ ಸಂಚಾಲಕ ಸುನೀಲ ನಡಕಟ್ಟಿ, ಗ್ರಂಥಪಾಲಕ ಪತಂಗಿ, ಬಿ.ಪಿ.ನಾಯಕ, ಡಾ.ನಂದಾ ಇಟಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಮುತ್ತು ಬಡಿಗೇರ ಸ್ವಾಗತಿಸಿ, ನಿರೂಪಿಸಿದರು.