ಜಿಲ್ಲೆ

ಹಸುಗಳಾಯ್ತು ಈಗ ಕರಡಿ ಸರದಿ

ಚಾಮರಾಜನಗರ: ಸಿಡಿಮದ್ದು ಅಡಗಿಸಿಟ್ಟಿರುವ ಆಹಾರವನ್ನು ಮೇವು ಮೇಯುವ ವೇಳೆ ತಿಂದು ಬಾಯಿ ವಿಕಾರವಾಗಿ ಸ್ಫೋಟಗೊಂಡು ಅಮಾನವೀಯವಾಗಿ ಸಾಯುತ್ತಿರುವ ಹಸುಗಳ ಸಾಲಿಗೆ ಇದೀಗ ಕರಡಿ ಸೇರ್ಪಡೆಯಾಗಿದೆ. ಮುಂದೆ ಮತ್ಯಾವ ಪ್ರಾಣಿ ಭೀಕರವಾಗಿ ಸಾಯುತ್ತದೆಯೋ ಗೊತ್ತಿಲ್ಲ.

ಜಿಲ್ಲೆಯಲ್ಲಿ ಅದರಲ್ಲೂ ಗಡಿ ತಾಲೂಕಾಗಿರುವ ಹನೂರಿನಂತಹ ಮಳೆಯಾಶ್ರಿತ ಪ್ರದೇಶದಲ್ಲಿ ಕೃಷಿ ಮಾಡಲಾಗದ ರೈತರು ಹಸುಗಳಿಗೆ ಮೇವು ಒದಗಿಸಲಾಗುತ್ತಿಲ್ಲ. ಬಯಲು ಪ್ರದೇಶಗಳು, ಖಾಲಿ ಜಮೀನುಗಳಲ್ಲಿ ಹಸುಗಳನ್ನು ಬಿಟ್ಟು ಮೇಯಿಸಿ ಅವುಗಳ ಹೊಟ್ಟೆ ತುಂಬಿಸುತ್ತಿದ್ದಾರೆ. ಹಾಲು ಕರೆದು ಡೇರಿಗೆ ಹಾಕಿ ಹೊಟ್ಟೆಪಾಡು ನೋಡಿಕೊಳ್ಳುತ್ತಿದ್ದಾರೆ. ಇಂತವರ ಹೊಟ್ಟೆ ಮೇಲೆ ಪದೇ ಪದೇ ಪೆಟ್ಟು ಬೀಳುತ್ತಲೇ ಇದೆ.

ಕಾಡುಹಂದಿ ಅಥವಾ ಇನ್ನಿತರೆ ಕಾಡುಪ್ರಾಣಿಗಳ ಬೇಟೆಗಾಗಿ ಕಳ್ಳಬೇಟೆಗಾರರು ಮೆಕ್ಕೆಜೋಳದ ಹಿಟ್ಟಿನೊಳಗೆ ಸಿಡಿಮದ್ದು ಅಡಗಿಸಿ ಇಡುತ್ತಿದ್ದಾರೆ. ಮೇವು ಮೇಯಲು ಬರುವ ಹಸುಗಳು ಆಹಾರ ರೂಪದಲ್ಲಿರುವ ಸಿಡಿಮದ್ದನ್ನು ತಿಂದ ಕೂಡಲೇ ಬಾಯಿ ವಿಕಾರವಾಗಿ ಛಿದ್ರಗೊಂಡು ರಕ್ತಕಾರಿ, ನರಳುತ್ತಾ ಸಾಯುತ್ತಿವೆ. ಇದರ ನಡುವೆ ಕಾವೇರಿ ವನ್ಯಜೀವಿ ಧಾಮ ವ್ಯಾಪ್ತಿಯ ಕೊಳ್ಳೇಗಾಲದ ತೆಳ್ಳನೂರು ಗ್ರಾಮದ ಕಾಡಂಚಿನಲ್ಲಿ ಬುಧವಾರ ರಾತ್ರಿ ಕರಡಿಯೊಂದು ಆಹಾರದಲ್ಲಿ ಅಡಗಿಸಿಟ್ಟಿದ್ದ ಸಿಡಿಮದ್ದು ತಿಂದು ಮೃತಪಟ್ಟಿದೆ. ಸಿಡಿಮದ್ದು ತುಂಬಿದ್ದ ಆಹಾರವನ್ನು ತಿಂದಿರುವ ಕರಡಿಯ ಹೊಟ್ಟೆ ಭಾಗದಲ್ಲಿ ಗಾಯವಾಗಿದೆ. ನೋವು ಸಹಿಸಲಾಗದ ಕರಡಿ ಪ್ರಾಣಬಿಟ್ಟಿದೆ. ಸಿಡಿಮದ್ದು ತಿಂದಿರುವುದರಿಂದಲೇ ಕರಡಿ ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಖಚಿತ ಪಡಿಸಿದೆ.

ಕರಡಿ ಸತ್ತಿದ್ದ ಜಾಗಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನು ಚಪ್ಪರದಟ್ಟಿ ಕ್ಯಾಂಪ್‌ಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಿ ಕಳೇಬರವನ್ನು ತೆರವುಗೊಳಿಸಲಾಯಿತು.

ಅಮಾನವೀಯ ಸಾವುಗಳು:

ಕೆಲವು ವರ್ಷಗಳ ಹಿಂದೆ ಕೇರಳದ ಮಲ್ಲಪ್ಪುರಂನ ನದಿ ಪಾತ್ರದಲ್ಲಿ ಸ್ಫೋಟಕ ತುಂಬಿದ್ದ ಅನಾನಸ್ ಅನ್ನು ಇಡಲಾಗಿತ್ತು. ಇದನ್ನು ತಿಂದಿದ್ದ ಆನೆ ಸ್ಪೋಟದ ನೋವು ತಡೆಯಲಾಗದೆ ನೀರಿಗಿಳಿದು ನಿಂತಲ್ಲೇ ನಿಂತಂತೆ ಉಸಿರುಚೆಲ್ಲಿತ್ತು. ಈ ಘಟನೆಯನ್ನು ಮಲ್ಲಪ್ಪುರಂ ಅರಣ್ಯ ಇಲಾಖೆ ಅಧಿಕಾರಿ ಮೋಹನ್ ಕೃಷ್ಣನ್ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಆನೆಯ ಶವ ಪರೀಕ್ಷೆ ವೇಳೆ ಅದರ ಹೊಟ್ಟೆಯಲ್ಲಿ ಮಗು ಇತ್ತು ಎನ್ನುವುದು ಗೊತ್ತಾಯಿತು. ಈ ಹೃದಯವಿದ್ರಾವಕ ಘಟನೆ ಇಡೀ ದೇಶವನ್ನೇ ಮರುಗುವಂತೆ ಮಾಡಿತ್ತು. ಅನಾನಸ್‌ನಲ್ಲಿ ಸ್ಪೋಟಕವಿಟ್ಟಿದ್ದವರಿಗೆ ಶಾಪ ಹಾಕುವಂತೆ ಮಾಡಿತ್ತು. ಈ ರೀತಿಯದ್ದೇ ಅಮಾನವೀಯ ಸಾವುಗಳು ಜಿಲ್ಲೆಯಲ್ಲಿ ನಡೆಯುತ್ತಲೇ ಇವೆ. ಇತ್ತೀಚೆಗೆ ಚಾಮರಾಜನಗರ, ಹನೂರು ತಾಲೂಕುಗಳಲ್ಲಿ ಸಿಡಿಮದ್ದು ತಿಂದು ಹಸುಗಳು ಮೃತಪಟ್ಟಿದ್ದವು. ಎಚ್ಚೆತ್ತ ಪೊಲೀಸ್ ಇಲಾಖೆ 2024ರ ಆ.20ರಂದು ಕೌದಳ್ಳಿ ಗ್ರಾಮದ ರಸ್ತೆ ಬದಿ ಇಟ್ಟಿದ್ದ ಆಹಾರ ರೂಪದಲ್ಲಿದ್ದ ಸಿಡಿಮದ್ದನ್ನುಎರಡು ಹಸುಗಳು ಮೃತಪಟ್ಟಿದ್ದ ಪ್ರಕರಣದಲ್ಲಿ

ಚಿಕ್ಕಾಲತ್ತೂರು ಗ್ರಾಮದ ಜಡೆಯಪ್ಪನನ್ನು(58) ಬಂಧಿಸಿದ್ದರು. ಈತನ ಮಗ ರುದ್ರ(30) ಪರಾರಿಯಾಗಿದ್ದ. ಇವರ ಮನೆಯಲ್ಲಿ ಇಟ್ಟಿದ್ದ ಸಿಡಿಮದ್ದುಗಳನ್ನು ವಶ ಪಡಿಸಿಕೊಂಡಿದ್ದರು. ಇದು ಕಳ್ಳಬೇಟೆಗಾರರಿಗೆ ಎಚ್ಚರಿಕೆಯ ಗಂಟೆಯಾಗುತ್ತದೆ ಎಂದು ಭಾವಿಸಿದ್ದೇ ತಪ್ಪಾಯಿತು. ಏಕೆಂದರೆ ಹನೂರು ಭಾಗದಲ್ಲಿ ಸಿಡಿಮದ್ದು ಸ್ಪೋಟಗೊಂಡು ಹಸುಗಳು ಸಾಯುವ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಕೃತ್ಯ ನಡೆದ ಸ್ಥಳಕ್ಕೆ ಖುದ್ದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಅವರೇ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಪ್ರಕರಣ ಗಳಿಗೆ ಕಡಿವಾಣ ಹಾಕಲು ಹನೂರು ತಹಸೀಲ್ದಾರ್ ಗುರುಪ್ರಸಾದ್ ಕೌದಳ್ಳಿಯಲ್ಲಿ ಬುಧವಾರ ಸಭೆ ನಡೆಸಿ ಗ್ರಾಮಸ್ಥರ ಸಹಕಾರವನ್ನು ಕೋರಿದ್ದಾರೆ.

ಕರಡಿಗಳ ಕಾಡು:

ಜಿಲ್ಲೆಯ ಕಾಡುಗಳು ಕರಡಿಗಳ ಆವಾಸ ಸ್ಥಳಗಳಾಗಿವೆ. ಬಂಡೀಪುರು ಮತ್ತು ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶಗಳು, ಮಲೆ ಮಹದೇಶ್ವರ ಹಾಗೂ ಕಾವೇರಿ ವನ್ಯಜೀವಿಧಾಮಗಳು ಕರಡಿಗಳ ತಾಣಗಳಾಗಿವೆ. ಇಲ್ಲಿಗೆ ಸಾರಿಗೆ ಬರುವ ಪ್ರವಾಸಿಗರಿಗೆ ಕರಡಿಗಳೂ ಸಹ ದರ್ಶನ ನೀಡಿ ಖುಷಿ ಕೊಡುತ್ತವೆ. ಬೆನ್ನಿನ ಮೇಲೆ ಜೋತುಬಿದ್ದ ಮರಿಗಳನ್ನು ಎತ್ತುಕೊಂಡ ಸಾಗುವ ತಾಯಿ ಕರಡಿಗಳು ಅಚ್ಚರಿ ಮೂಡಿಸಿವೆ. ಹುಲಿಗಳನ್ನು ನೋಡಿ ಜನರು ಎಷ್ಟು ಪುಳಕಿತರಾಗುತ್ತಾರೋ ಕರಡಿಗಳನ್ನು ನೋಡಿಯೂ ಅಷ್ಟೇ ಸಂತೋಷ ಪಡುತ್ತಾರೆ.

ಮಾನವ ಮತ್ತು ಕರಡಿ ಸಂಘರ್ಷ: ಜಿಲ್ಲೆಯ ಕಾಡುಗಳಲ್ಲಿ ಮಾನವ-ಕರಡಿ ಸಂಘರ್ಷ ನಡೆಯುತ್ತಲೇ ಇರುತ್ತದೆ. 2022ರಲ್ಲಿ ಗುಂಡ್ಲುಪೇಟೆ ತಾಲೂಕಿನ ಹಿರಿಕಾಟಿ ಗ್ರಾಮದ ಮಹೇಂದ್ರ ಅವರ ಜಮೀನಿನಲ್ಲಿ ಕರಡಿ ಕಾಣಿಸಿಕೊಂಡಿತ್ತು. ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಕರಡಿ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಎದುರು ಬಂದ ನಾಗಯ್ಯ ಮೇಲೆ ಕರಡಿ ದಾಳಿ ಮಾಡಿತ್ತು. 2023ರಲ್ಲಿ ಹನೂರು ತಾಲೂಕಿನ ಸಂದನಪಾಳ್ಯ ಗ್ರಾಮದ ಸಂತ ಆಂಥೋಣಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಶಿಕ್ಷಕರ ವಿಶ್ರಾಂತಿ ಕೊಠಡಿಗೆ ಕರಡಿ ನುಗ್ಗಿತ್ತು. ಇದೇ ವರ್ಷ ಗುಂಡ್ಲುಪೇಟೆ ತಾಲೂಕಿನ ಕೋಡಳ್ಳಿ ಗ್ರಾಮಕ್ಕೆ ನುಗ್ಗಿದ್ದ ಕರಡಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು. 2024ರ ನವೆಂಬರ್‌ನಲ್ಲಿ ಅಜ್ಜೀಪುರ ಅರಣ್ಯ ಪ್ರದೇಶದಲ್ಲಿ ತಾಯಿಂದ ಬೇರ್ಪಟ್ಟು ಅಲೆಯುತ್ತಿದ್ದ ಕರಡಿ ಮೃತಪಟ್ಟಿತ್ತು. ಇದೀಗ ಸಿಡಿಮದ್ದು ತಿಂದು ಕರಡಿ ಮೃತಪಟ್ಟ ಪ್ರಕರಣವೂ ನಡೆದು ಹೋಯ್ತು.

ಕಾಡುಹಂದಿಗಳನ್ನು ಬೇಟೆಯಾಡಲು ಸಿಡಿಮದ್ದು ಇಡುತ್ತಿದ್ದಾರೆ. ಈ ಪ್ರಕರಣವನ್ನು ತನಿಖೆ ನಡೆಸಲಾಗುತ್ತಿದ್ದು, ಸಿಡಿಮದ್ದು ಇಡುತ್ತಿದ್ದ ಮತ್ತೊಂದು ತಂಡವನ್ನು ಶೀಘ್ರದಲ್ಲೇ ಬಂಧಿಸಲಾಗುವುದು. ಡಾ.ಬಿ.ಟಿ.ಕವಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚಾಮರಾಜನಗರ ಸಿಡಿಮದ್ದು ತಿಂದು ಕರಡಿ ಮೃತಪಟ್ಟಿದೆ. ಕಿಡಿಗೇಡಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪೊಲೀಸರಿಗೂ ತಿಳಿಸಲಾಗಿದೆ. ಸುರೇಂದ್ರ, ಡಿಸಿಎ್, ಕಾವೇರಿ ವನ್ಯಜೀವಿಧಾಮ