ಚಾಮರಾಜನಗರ: ತಾಲೂಕಿನ ಉಮ್ಮತ್ತೂರು ಗ್ರಾಮದ ಸಮೀಪದಲ್ಲಿರುವ ಅಡವಿಯಲ್ಲಿ 4 ಹಸುಗಳ ಮೇಲೆ ಚಿರತೆ ಸೋಮವಾರ ಮಧ್ಯಾಹ್ನದ ವೇಳೆಯಲ್ಲಿ ದಾಳಿಮಾಡಿದ್ದು, ಹಸುಗಳಿಗೆ ತೀವ್ರವಾದ ಗಾಯಗಳಾಗಿವೆ.
ದಾಸನೂರು ಗ್ರಾಮದ ನಿವಾಸಿ ಗುರು ಅವರಿಗೆ ಸೇರಿದ 4 ಹಸುಗಳನ್ನು ತಮ್ಮ ತೋಟದಲ್ಲಿರುವ ಬಾವಿಯ ಸಮೀಪ ಮೇಯಿಸುತ್ತಿದ್ದರು. ಮಧ್ಯಾಹ್ನ ವಿಶ್ರಾಂತಿ ಪಡೆಯುವ ವೇಳೆಯಲ್ಲಿ 2 ಚಿರತೆಗಳು ಮೊದಲು ಎರಡು ಹಸುಗಳ ಮೇಲೆ ದಾಳಿ ನಡೆಸಿ, ಹಿಂದಿನ ಕಾಲುಗಳಿಗೆ ತೀವ್ರವಾದ ಗಾಯಗಳಾಗಿವೆ. ಮತ್ತೆರಡು ಹಸುಗಳಿಗೆ ದಾಳಿ ಮಾಡಲು ಮುಂದಾಗಿದ್ದು, ಅವು ಗ್ರಾಮದತ್ತ ಓಡಿಹೋಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯವರು ಪರಿಶೀಲನೆ ನಡೆಸಿದರು.
ಈ ವೇಳೆ ಗುರು ಮಾತನಾಡಿ, ಸುಮಾರು 2 ಲಕ್ಷ ಬೆಲೆಬಾಳುವ ನಾಲ್ಕೂ ಹಸುಗಳ ಮೇಲೆ ಚಿರತೆಗಳು ದಾಳಿ ಮಾಡಿದೆ. ಎರಡು ಹಸುಗಳ ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿದೆ. ಆಗಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಸೂಕ್ತ ಪರಿಹಾರವನ್ನು ಕೊಡುವಂತೆ ಒತ್ತಾಯಿಸಿದರು. ಹಸುಗಳು ಸಾಯದೇ ಇಲಾಖೆಯ ನಿಯಮದ ಪ್ರಕಾರ ಪರಿಹಾರ ಕೊಡಲು ಬರುವುದಿಲ್ಲ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದರು. ರೈತ ಗುರು ಇದರಿಂದ ಕಾಂಗಾಲಾಗಿದ್ದು, ಪರಿಹಾರಕ್ಕೆ ಆಗ್ರಹಿಸಿದ್ದಾರೆ.