ಜಿಲ್ಲೆ

ಹಸು ಸಾಗಿಸುತ್ತಿದ್ದ ಕ್ಯಾಂಟರ್‌ಗೆ ತಡೆ: ಅಕ್ರಮ ಸಾಗಾಟದ ಸಂಶಯ ನಿಯಮ ಉಲ್ಲಂಘನೆಗೆ ಪೊಲೀಸರ ದಂಡ

ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ
ಚಿಂತಾಮಣಿಯಿಂದ ಮಹಾರಾಷ್ಟ್ರಕ್ಕೆ ಸೋಮವಾರ ಇನ್ನೂರಕ್ಕೂ ಹೆಚ್ಚು ಹಸುಗಳನ್ನು ಸಾಗಿಸುತ್ತಿದ್ದ ಕ್ಯಾಂಟರ್‌ಗಳನ್ನು ದೊಡ್ಡಬಳ್ಳಾಪುರದ ಎಪಿಎಂಸಿ ಮಾರುಕಟ್ಟೆ ಎದುರು ಸ್ಥಳೀಯರು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಹಿಂಭಾಗವನ್ನು ಮುಚ್ಚಿದ್ದ 20ಕ್ಕೂ ಹೆಚ್ಚು ಕ್ಯಾಂಟರ್‌ಗಳು ಚಿಂತಾಮಣಿಯಿಂದ ದೊಡ್ಡಬಳ್ಳಾಪುರ ಮಾರ್ಗದಲ್ಲಿ ಸಂಚರಿಸುತ್ತಿರುವುದನ್ನು ಗಮನಿಸಿದ ಸ್ಥಳೀಯರು, ಸಂಶಯದಿಂದ ಕ್ಯಾಂಟರ್‌ಗಳನ್ನ ತಡೆದು ಪರಿಶೀಲಿಸಿದಾಗ ಪತ್ತೆಯಾಗಿದೆ. ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದಾರೆಂಬ ಸಂಶಯದ ಮೇಲೆ ಪೊಲೀಸರ ವಶಕ್ಕೆ ನೀಡಿದರು.
ಬಿಟ್ಟು ಕಳುಹಿಸಿದ ಪೊಲೀಸರು: ಕ್ಯಾಂಟರ್‌ಗಳನ್ನು ಪರಿಶೀಲಿಸಿ ವಿಚಾರಿಸಿದ ಪೊಲೀಸರಿಗೆ ಮಹಾರಾಷ್ಟ್ರ ಮತ್ತು ಬೆಳಗಾವಿಯ ರೈತರು ಪಶುಸಂಗೋಪನೆ ಮಾಡಲು ಚಿಂತಾಮಣಿ ಸಂತೆಯಲ್ಲಿ ಹಸುಗಳನ್ನು ಖರೀದಿ ಮಾಡಿರುವುದು ಗೊತ್ತಾಗಿದೆ. ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ತೋರಿಸಿದ ನಂತರ ವಾಹನಗಳನ್ನು ಬಿಟ್ಟು ಕಳುಹಿಸಲಾಗಿದೆ.
20 ಕ್ಯಾಂಟರ್‌ಗಳಲ್ಲಿ 200ಕ್ಕೂ ಹೆಚ್ಚು ಹಸುಗಳನ್ನು ಸಾಗಿಸಲಾಗುತ್ತಿದ್ದು, ವಾಹನಗಳಲ್ಲಿ ಹಸುಗಳು ಉಸಿರಾಡಲೂ ಕಷ್ಟವಾಗುವಂತೆ ಟಾರ್ಪಲ್ನಿಂದ ಮುಚ್ಚಲಾಗಿತ್ತು. ಮೂಕಜೀವಿಗಳಿಗೆ ಹಿಂಸೆಯಾಗುವ ಸ್ಥಿತಿಯಲ್ಲಿ ಸಾಗಣೆ ಮಾಡುತ್ತಿರುವುದು ಅಕ್ರಮ ಎಂದು ಸ್ಥಳೀಯ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು. ಇದನ್ನು ಗಮನಿಸಿದ ಬಜರಂಗದಳ ಕಾರ್ಯಕರ್ತರು ಪೊಲೀಸರಿಗೆ ದೂರು ನೀಡಿದ್ದರು. ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಪೊಲೀಸರು ದಂಡ ವಿಧಿಸಿದ್ದಾರೆ.

ವಾಹನ ತೆರಳಲು ಅನುಮತಿಗೆ ಆಕ್ರೋಶ
ದೇವನಹಳ್ಳಿ: ತಾಲೂಕಿನ ಬಿದಲೂರು ಬಳಿ ವಾಹನಗಳನ್ನು ತಡೆದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಈ ವೇಳೆ ದೇವನಹಳ್ಳಿ ಕೃಷ್ಣಪ್ಪ ಮತ್ತು ಸಂಗಡಿಗರು ಘಟನಾ ಸ್ಥಳಕ್ಕೆ ಆಗಮಿಸಿ ನಾವೇ ರಾಸುಗಳನ್ನು ನೀಡಿದ್ದೇವೆ, ಸಂಘಟನೆಗಳ ಹೆಸರು ಹೇಳಿಕೊಂಡು ವಸೂಲಿಗೆ ಬಂದಿದ್ದಾರೆ ಎಂದು ಆರೋಪಿಸಿ ಲಾರಿಗಳನ್ನು ತಡೆದಿದ್ದ ಗ್ರಾಮಸ್ಥರ ವಿರುದ್ಧವೇ ತಿರುಗಿ ಬಿದ್ದ ಪ್ರಸಂಗ ನಡೆದಿದೆ. ಈ ವೇಳೆ ಎರಡು ತಂಡಗಳ ನಡುವೆ ವಾಗ್ವಾದ ನಡೆದು ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಈ ವೇಳೆ ಸ್ಥಳಕ್ಕಾಗಮಿಸಿದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರು, ಯಾವ ಕಾನೂನಿನ ಅಡಿಯಲ್ಲಿ ಈ ರೀತಿ ಹಸುಗಳ ಸಾಗಣೆಗೆ ಅವಕಾಶವಿದೆ. ಯಾವ ಸೆಕ್ಷನ್‌ನಡಿ ದಂಡ ವಿಧಿಸುತ್ತಿದ್ದೀರಾ ಎಂದು ಪೊಲೀಸರ ಬಳಿ ವಾಗ್ವಾದ ನಡೆಸಿದರು. ಲಾರಿಯಲ್ಲಿ ಮಲಗಿದ್ದ ಹಸುವನ್ನು ದೊಣ್ಣೆಯಿಂದ ಹೊಡೆದು ಹಿಂಸೆ ಮಾಡುತ್ತಿರುವುದನ್ನು ಗಮನಿಸಿದ್ದೆವು. ಲಾರಿ ತಡೆದು ವಿಚಾರಿಸಿದಾಗ ಪರವಾನಗಿ ಇರಲಿಲ್ಲವೆಂದು ತಿಳಿದಿದೆ. ಈ ಬಗ್ಗೆ ಪೊಲೀಸರಿಗೆ ತಿಳಿಸಿದರೂ ಕ್ರಮ ಕೈಗೊಳ್ಳಲಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಚಿಂತಾಮಣಿ ಸಂತೆಯಿಂದ ಪ್ರತಿ ಭಾನುವಾರ ನೂರಾರು ಹಸುಗಳನ್ನು ಸಾಗಿಸುತ್ತಿರುವ ಕುರಿತು ಮಾಹಿತಿ ಬರುತ್ತಿದೆ, ಪ್ರತಿ ಭಾನುವಾರ ವಾಹನ ತಪಾಸಣೆ ನಡೆಸಿ ಪರಿಶೀಲಿಸಲು ತೀರ್ಮಾನಿಸಿದ್ದೇವೆ. ಅಕ್ರಮ ಎಂದು ತಿಳಿದು ಬಂದರೆ ಕ್ರಮ ಕೈಗೊಳ್ಳಲಾಗುವುದು.
ನಾಗರಾಜ್ ಡಿವೈಎಸ್‌ಪಿ ದೊಡ್ಡಬಳ್ಳಾಪುರ