ಜಿಲ್ಲೆ

ಹಸಿರುಕ್ರಾಂತಿ ಹರಿಕಾರ ಬಾಬು ಜಗಜೀವನರಾಮ್ ; ಶಾಸಕ ಜಿ.ಬಿ.ಜ್ಯೋತಿಗಣೇಶ್ ಬಣ್ಣನೆ

ತುಮಕೂರು : ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಧ್ವನಿಯಾಗಿದ್ದ ಬಾಬು ಜಗಜೀವನರಾಮ್ ಅವರ ಆದರ್ಶ ಗುಣಗಳು ಇಂದಿನ ನಾಯಕರಿಗೆ ಮಾರ್ಗದರ್ಶಿ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಭಿಪ್ರಾಯಪಟ್ಟರು.

ನಗರದ ಟೌನ್‌ಹಾಲ್ ಶಾಸಕರ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಬಾಬು ಜಗಜೀವನರಾಮ್ ಜಯಂತಿಯಲ್ಲಿ ಮಾತನಾಡಿದ ಅವರು, ಯುವಕರಾಗಿದ್ದಾಗ ಸ್ವಾತಂತ್ರ್ಯಕ್ಕಾಗಿ, ಸ್ವಾತಂತ್ರ್ಯ ಬಂದ ನಂತರ ಸಂಸದರಾಗಿ, ಸಚಿವರಾಗಿ ಸಂವಿಧಾನವನ್ನು ಅಚ್ಚುಕಟ್ಟಾಗಿ ಜಾರಿಗೊಳಿಸುವಲ್ಲಿ ಬಾಬು ಜಗಜೀವನರಾಮ್ ಪಾತ್ರ ಮಹತ್ವದ್ದು ಎಂದರು.

ಬಾಬುಜೀ ಎಂದೇ ಖ್ಯಾತರಾಗಿದ್ದ ಅವರು ಹಸಿರು ಕ್ರಾಂತಿ ಮಾಡುವ ಮೂಲಕ ಆಹಾರದಲ್ಲಿ ದೇಶ ಸ್ವಾಯತ್ತೆ ಸಾಧಿಸಲು ಅವರ ಮುಂದಾಲೋಚನೆಯೇ ಕಾರಣ ಎಂದರು. ನಿವೃತ್ತ ಡಿಡಿಪಿಯು ಕೆ.ದೊರೈರಾಜು ಮಾತನಾಡಿ, ಬಾಬು ಜಗಜೀವನರಾಮ್ ಅವರು ಮಹಾತ್ಮಗಾಂಧಿ ಅವರೊಂದಿಗೆ ಸ್ವಾತಂತ್ರ್ಯಕ್ಕಾಗಿ ಜೈಲುವಾಸ ಅನುಭವಿಸಿದ್ದ ಮಹಾನ್ ನಾಯಕ, ಆದರೆ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸಲಾಗಿದೆ. ಯಾವುದೇ ಖಾತೆ ನೀಡಿದರೂ ಅದನ್ನು ಸಮರ್ಥವಾಗಿ ನಿಭಾಯಿಸಿದ ಅವರ ನಾಯಕತ್ವಕ್ಕಾಗಿ ಉಪಪ್ರಧಾನಿ ಹುದ್ದೆ ದೊರೆಯಿತೆ ಹೊರತು ಜಾತಿ ಕಾರಣಕ್ಕೆ ಅಲ್ಲ ಎಂದರು.

ತುಳಿತಕ್ಕೆ ಒಳಗಾದವರ ಧ್ವನಿಯಾಗಿದ್ದ ಬಾಬು ಜಗಜೀವನರಾಮ್ ಅವರು ಅಸಮಾನತೆ ವಿರುದ್ಧ ಮಾನವೀಯ ನೆಲೆಯಲ್ಲಿ ಹೋರಾಟ ಮಾಡಿದರು. ಜಾತಿಯನ್ನು ಮೀರಿ ಬೆಳೆದಿದ್ದ ಅವರು ಸಮತಾ ಸಂಘಟನೆಯ ಮೂಲಕ ಅಸ್ಪೃಶ್ಯತೆ ನಿವಾರಣೆಗಾಗಿ ಮಾನವೀಯ ನೆಲೆಯಲ್ಲಿ ಹೋರಾಟ ಮಾಡಿದ್ದಕ್ಕೆ ಅವರಿಗೆ ಗಾಂಧೀಜಿಯವರ ಸ್ಫೂರ್ತಿ ಕಾರಣ ಎಂದರು. ಸ್ಲಂ ಜನಾಂದೋಲನದ ಅಧ್ಯಕ್ಷ ನರಸಿಂಹಮೂರ್ತಿ, ಕಿರಣ್‌ಕುಮಾರ್, ಜಯಣ್ಣ, ನರಸಿಂಹಮೂರ್ತಿ, ಎನ್.ರಾಜಣ್ಣ, ಲೋಕೇಶ್, ಗಂಗಾಧರ್ ಇದ್ದರು.