?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????? 
ಜಿಲ್ಲೆ

ಹಸಿರು ಹೊದ್ದ ಅರಣ್ಯ ಪ್ರದೇಶಗಳು

ಹನೂರು: ಕಳೆದ ವಾರದಿಂದ ಆಗಾಗ್ಗೆ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕು ವ್ಯಾಪ್ತಿಯ ಕಾವೇರಿ, ಮಲೆಮಹದೇಶ್ವರ ಹಾಗೂ ಬಿಆರ್‌ಟಿ ಹುಲಿ ಸಂರಕ್ಷಿತಾ ಅರಣ್ಯ ಪ್ರದೇಶಗಳು ಹಸಿರಿನತ್ತ ಸಾಗಿದ್ದು, ಸಂಭವಿಸುತ್ತಿದ್ದ ಬೆಂಕಿ ಅವಘಡದಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೊಂಚ ನಿಟ್ಟುಸಿರು ಬಿಟ್ಟಂತಾಗಿದೆ.

ಜಿಲ್ಲೆಯಲ್ಲಿಯೇ ಹೆಚ್ಚು ಅರಣ್ಯ ಪ್ರದೇಶದಿಂದ ಕೂಡಿರುವ ಹನೂರು ತಾಲೂಕಿನಲ್ಲಿ ಕಾವೇರಿ ಹಾಗೂ ಮಲೆಮಹದೇಶ್ವರ ವನ್ಯಜೀವಿ ಧಾಮವು ಬಹುತೇಕ ಅರಣ್ಯ ಪ್ರದೇಶವನ್ನು ಆವರಿಸಿದ್ದರೆ, ಬಿಆರ್‌ಟಿ ಹುಲಿ ಸಂರಕ್ಷಿತಾ ಅರಣ್ಯ ಪ್ರದೇಶ ಬೈಲೂರು, ಪಿ.ಜಿ.ಪಾಳ್ಯ ಹಾಗೂ ಗುಂಡಾಲ್ ಜಲಾಶಯದ ಭಾಗವನ್ನು ಒಳಗೊಂಡಿದೆ. ಇಲ್ಲಿ ಹುಲಿ, ಚಿರತೆ, ಜಿಂಕೆ ಹಾಗೂ ಇನ್ನಿತರ ಕಾಡು ಪ್ರಾಣಿಗಳು ವಾಸಿಸುತ್ತವೆ. ಔಷಧ ಗಿಡಮೂಲಿಕೆಗಳು ಹಾಗೂ ಅಸಂಖ್ಯಾತ ಸಂಖ್ಯೆಯಲ್ಲಿ ಬೆಲೆಬಾಳುವ ಮರಗಳಿವೆ. ಈ ಅರಣ್ಯ ಪ್ರದೇಶಗಳು ಮಳೆಗಾಲದ ವೇಳೆ ಹಚ್ಚ ಹಸಿರಿನಿಂದ ಕಂಗೊಳಿಸುವುದರ ಮೂಲಕ ಸಮೃದ್ಧಿಯಿಂದ ಕೂಡಿರುತ್ತದೆ. ಹಾಗಾಗಿ ಈ ಧಾಮಗಳು ವನ್ಯ ಸಂಕುಲಗಳ ವಾಸಸ್ಥಾನದ ಬೀಡಾಗಿವೆ. ಆದರೆ ಬೇಸಿಗೆ ವೇಳೆ ಅರಣ್ಯ ಪ್ರದೇಶ ಒಣಗುವುದರಿಂದ ವನ್ಯ ಪ್ರಾಣಿಗಳಿಗೆ ನೀರಿನ ಸಮಸ್ಯೆ ಎದುರಾಗುತ್ತಿದ್ದು, ಗ್ರಾಮದತ್ತ ಆಗಮಿಸುತ್ತವೆ. ಈ ವೇಳೆ ಪ್ರಾಣಿಗಳಿಗೆ ನೀರಿನ ಕೊರತೆ ನೀಗಿಸುವುದು ಒಂದೆಡೆಯಾದರೆ, ಬೆಂಕಿ ಅವಘಡಗಳನ್ನು ತಡೆಗಟ್ಟುವುದೇ ಅರಣ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗೆ ಸವಾಲಿನ ಕೆಲಸವಾಗಿ ಪರಿಣಮಿಸುತ್ತದೆ.

ಬೆಂಕಿಗೆ ಆಹುತಿಯಾಗಿದ್ದ ಪ್ರದೇಶ: ಪ್ರತಿ ವರ್ಷ ಬೇಸಿಗೆ ಬಂತೆಂದರೆ ಈ ಭಾಗದ ಅರಣ್ಯ ಪ್ರದೇಶದ ಅಲ್ಲಲ್ಲಿ ಬೆಂಕಿ ಕಾಣಿಸಿಕೊಳ್ಳುವುದು ಸಾಮಾನ್ಯ. ಕಳೆದ ಮೂರ‌್ನಾಲ್ಕು ತಿಂಗಳಿನಿಂದ ಈ 3 ವನ್ಯಜೀವಿ ಧಾಮದ ಅರಣ್ಯ ಪ್ರದೇಶ ಬಿಸಿಲಿನ ತಾಪಕ್ಕೆ ಬಹುತೇಕ ಒಣಗಿತ್ತು. ಕೆಲ ಕಿಡಿಗೇಡಿಗಳ ಕೃತ್ಯ ಹಾಗೂ ಆಕಸ್ಮಿಕ ಬೆಂಕಿಗೆ ಆಗಾಗ್ಗೆ ಅರಣ್ಯ ಪ್ರದೇಶ ಆಹುತಿಯಾಗುತ್ತಲೇ ಇತ್ತು. ಬಿಆರ್‌ಟಿ ಹುಲಿ ಸಂರಕ್ಷಿತಾ ಅರಣ್ಯ ಪ್ರದೇಶದ ದೊಡ್ಡಮಾಲಾಪುರ, ಕಂಡಯ್ಯಪಾಳ್ಯ, ಸೇಬಿನಕೋಬೆ ಸಮೀಪದ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಮಲೆಮಹದೇಶ್ವರ ವನ್ಯಜೀವಿ ವಿಭಾಗದ ನಾಲ್‌ರೋಡ್ ಕೂಡಲೂರು, ಹೂಗ್ಯಂ ಭಾಗ, ಅಜ್ಜೀಪುರ ಮಾರ್ಗದ ಎಬಿಆರ್ ಗುಡ್ಡ, ಮಹಾಲಿಂಗನಕಟ್ಟೆ ಹಾಗೂ ಕಾವೇರಿ ವನ್ಯಜೀವಿ ಧಾಮದ ಪಾಲಾರ್ ಭಾಗದಲ್ಲಿ ಬೆಂಕಿ ಅವಘಡ ಸಂಭವಿಸಿ ನೂರಾರು ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿತ್ತು. ಬೆಂಕಿಯನ್ನು ನಂದಿಸಲು ಅರಣ್ಯ ಇಲಾಖೆ ಹರಸಾಹಸ ಪಡಬೇಕಾಯಿತು. ಕೆಲವು ಕಡೆಗಳಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಸಹಾಯ ಪಡೆಯಬೇಕಾಯಿತು. ಸದ್ಯ ಇದೀಗ ಮಳೆಯಾಗುತ್ತಿರುವುದರಿಂದ ಅರಣ್ಯ ಪ್ರದೇಶ ಚಿಗುರೊಡೆಯಲು ಆರಂಭಿಸಿದೆ. ಹಾಗಾಗಿ ಬೆಂಕಿ ಕಾಣಿಸಿಕೊಳ್ಳುವುದಕ್ಕೆ ನಾಂದಿ ಹಾಡಿದಂತಾಗಿದೆ.

ಹಸಿರಿನತ್ತ ಅರಣ್ಯ ಪ್ರದೇಶ: ಕಳೆದ 2-3 ತಿಂಗಳಿನಿಂದ ಅರಣ್ಯ ಪ್ರದೇಶದಲ್ಲಿ ಆಗಾಗ್ಗೆ ಬೆಂಕಿ ಕಾಣಿಸಿಕೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ಹೆಚ್ಚಿನ ಶ್ರಮ ವಹಿಸಿದ್ದು, ಎಲ್ಲಿ ಬೆಂಕಿ ಅವಘಡಗಳು ಸಂಭವಿಸುತ್ತದೆಯೋ ಎಂಬುವುದೇ ಒಂದು ದೊಡ್ಡ ಚಿಂತೆಯಾಗಿದ್ದು, ತಲೆನೋವಾಗಿ ಪರಿಣಮಿತ್ತು. ಆದರೆ ಇದೀಗ ತಾಲೂಕಿನಲ್ಲಿ ಕಳೆದ ವಾರದಿಂದ ಆಗಾಗ್ಗೆ ಮಳೆಯಾಗುತ್ತಿರುವುದರಿಂದ ಹಳ್ಳಕೊಳ್ಳಗಳಲ್ಲಿ ಕೊಂಚ ನೀರು ಹರಿಯಲು ಆರಂಭಿಸಿದೆ. ಜತೆಗೆ ಅರಣ್ಯ ಪ್ರದೇಶದ ಕೆರೆ-ಕಟ್ಟೆಗಳಲ್ಲಿ ನೀರು ಸಂಗ್ರಹಣೆಯಾಗುವುದರತ್ತ ಸಾಗಿದೆ. ಇದರಿಂದ ಒಣಗಿದ್ದ ಮರಗಿಡಗಳು ಚಿಗುರುತ್ತಿವೆ. ನೆಲಮಟ್ಟದ ಕುರುಚಲು ಸಸ್ಯಗಳು ಬೆಳೆಯುತ್ತಿದ್ದು, ಅರಣ್ಯ ಪ್ರದೇಶ ಹಸಿರಿನತ್ತ ಸಾಗುತ್ತಿದೆ. ಬೆಂಕಿ ಅವಘಡದಿಂದ ಬೇಸತ್ತಿದ್ದ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕೊಂಚ ರಿಲೀಪ್ ಸಿಕ್ಕಿದಂತಾಗಿದೆ. ಮುಂದಿನ ದಿನಗಳಲ್ಲಿ ಮಳೆಯಾಗುವುದರಿಂದ ಅರಣ್ಯ ಪ್ರದೇಶ ಯಥಾಸ್ಥಿತಿಯತ್ತ ಸಾಗಲಿದೆ.