ಜಿಲ್ಲೆ

ಹಸಿರು ವಾಹನ ಉದ್ಯಮಿಗಳಿಗೆ ಸಿಗಲಿ ಪ್ರೋತ್ಸಾಹ, ಆರ್ಟ್ ಆಫ್ ಲಿವಿಂಗ್‌ನ ರವಿಶಂಕರ್ ಗುರೂಜಿ ಅಭಿಮತ*ಬಿಐಇಸಿಯಲ್ಲಿ 3 ದಿನಗಳ ಎಕ್ಸ್‌ಪೋಗೆ ಚಾಲನೆ

ನೆಲಮಂಗಲ: ಪರಿಸರಸ್ನೇಹಿ ಹಸಿರು ವಾಹನಗಳ ಬಳಕೆಯಿಂದ ಮಾಲಿನ್ಯ ನಿಯಂತ್ರಣದ ಜತೆಗೆ, ಇಂಧನ ಬೆಲೆ ತಗ್ಗಿಸಬಹುದು ಎಂದು ಆರ್ಟ್ ಆಫ್ ಲಿವಿಂಗ್‌ನ ರವಿಶಂಕರ್ ಗುರೂಜಿ ಅಭಿಪ್ರಾಯಪಟ್ಟರು.

ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ (ಬಿಐಇಸಿ) ಕೇಂದ್ರದಲ್ಲಿ ಭಾರತ ಮತ್ತು ಕರ್ನಾಟಕ ಸರ್ಕಾರ, ಎಫ್‌ಕೆಸಿಸಿಐ, ಕೆ.ಎಸ್.ಎಸ್.ಐ.ಎ., ಬೆಂಗಳೂರು ಹುಬ್ಬಳ್ಳಿ ಆಟೋ ಡೀಲರ್ಸ್‌ ಅಸೋಸಿಯೇಷನ್ಸ್ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ 3 ದಿನಗಳ ಗ್ರೀನ್ ವೆಹಿಕಲ್ (ಹಸಿರುವಾಹನ ವಸ್ತು ಪ್ರದರ್ಶನ) ಎಕ್ಸ್‌ಪೋಗೆ ಚಾಲನೆ ನೀಡಿ ಮಾತನಾಡಿದರು.

ದೇಶವೊಂದರ ಭವಿಷ್ಯ ಆ ದೇಶದ ವಿಜ್ಞಾನ, ತಂತ್ರಜ್ಞಾನದ ಮೇಲೆ ಅವಲಂಬಿತವಾಗಿರುತ್ತದೆ. ಭೂ ಗರ್ಭದಲ್ಲಿ ದೊರೆಯುತ್ತಿರುವ ತೈಲೋತ್ಪನ್ನಗಳಿಂದ ಪರಿಸರದ ಮೇಲೆ ಆಗುತ್ತಿರುವ ಕೆಟ್ಟ ಪರಿಣಾಮ ಮನಗಂಡಿರುವ ಸರ್ಕಾರ, ಪರಿಸರಸ್ನೇಹಿ ಹಸಿರು ವಾಹನಗಳ ಉತ್ಪಾದನೆಗೆ ಮುಂದಾಗಿರುವುದು ಸಂತಸದ ಸಂಗತಿ ಎಂದರು.

ಸೋಲಾರ್, ವಿಂಡ್ ಎನರ್ಜಿ, ವಿದ್ಯುತ್ ಶಕ್ತಿಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕಿದೆ. ಜನಸಾಮಾನ್ಯರಲ್ಲೂ ಹಸಿರು ವಾಹನಗಳ ಕುರಿತಾಗಿ ಹೆಚ್ಚಿನ ಅರಿವು ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರಗಳು ಹಸಿರು ವಾಹನ ಉದ್ಯಮಿಗಳನ್ನು ಪ್ರೋತ್ಸಾಹಿಸಬೇಕು ಎಂದರು.

ಎಫ್‌ಕೆಸಿಸಿಐ ಅಧ್ಯಕ್ಷ ಐ.ಎಸ್.ಪ್ರಸಾದ್ ಮಾತನಾಡಿ, ಮಾಲಿನ್ಯ ನಿಯಂತ್ರಿಸಿ ಆರೋಗ್ಯ ಕಾಪಾಡುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಹಕಾರದಲ್ಲಿ ಹಸಿರು ವಾಹನಗಳ ವಸ್ತು ಪ್ರದರ್ಶನ ಆಯೋಜಿಸಲಾಗಿದೆ. ಪ್ರಧಾನ ಮಂತ್ರಿಗಳ ಆಶಯದಂತೆ ವಾಹನ ಬಳಕೆ ಕುರಿತಾಗಿ ಕ್ರಾಂತಿಯಾಗಬೇಕಿದೆ ಎಂದರು.

ಹಸಿರು ವಾಹನಗಳ ಕುರಿತಾಗಿ ಇನ್ನೂ ಹೆಚ್ಚಿನ ಸಂಶೋಧನೆ ನಡೆದು ಸ್ವಾವಲಂಬನೆ ಸಾಧಿಸಬೇಕಿದೆ. ಮಾಲಿನ್ಯಮುಕ್ತ ರಾಜ್ಯ ಹಾಗೂ ದೇಶ ನಿರ್ಮಾಣಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದರು.

ಜಾಗತಿಕ ಹವಾಮಾನ ವೈಪರೀತ್ಯಗಳನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರಗಳು ಪರಿಸರಸ್ನೇಹಿ ವಾಹನಗಳ ಉತ್ಪಾದನೆ ಕುರಿತಾಗಿ ಚಿಂತನೆ ನಡೆಸುತ್ತಿವೆ. ಹಸಿರು ವಾಹನಗಳಿಂದ ಮಾತ್ರ ಪರಿಸರ ಮಾಲಿನ್ಯ ತಗ್ಗಿಸಲು ಸಾಧ್ಯ. ಇಲ್ಲವಾದಲ್ಲಿ ಮುಂದಿನ ಪೀಳಿಗೆಗೆ ಭಾರಿ ತೊಂದರೆಯಾಗಲಿದೆ ಎಂದು ಬೆಂಗಳೂರು ಆಟೋ ಡೀಲರ್ಸ್‌ ಅಸೋಸಿಯೇಷನ್ ಅಧ್ಯಕ್ಷ ರಹಮತ್ ಉಲ್ಲಾ ತಿಳಿಸಿದರು.

ಇದು ಮೊದಲ ಹೆಜ್ಜೆಯಾಗಿದ್ದು, ಪೂರ್ಣ ಬದಲಾವಣೆಗೆ ಸಾಕಷ್ಟು ಸಮಯ ಬೇಕಾಗಲಿದೆ. ಜನರು ಹಸಿರು ವಾಹನಗಳ ಕುರಿತು ಜ್ಞಾನ ಪಡೆದುಕೊಳ್ಳಬೇಕು ಎಂದರು.

ಬೆಂಗಳೂರು ಆಟೋಡೀಲರ್ಸ್‌ ಅಸೋಸಿಯೇಷನ್ ಕಾರ್ಯದರ್ಶಿ ಕೆ.ವಿ.ವೆಂಕಟೇಶನ್, ಎಂ.ಡಿ.ಎಂ ಕಂಪನಿ ನಿರ್ದೇಶಕ ಮೊಹಮ್ಮದ್ ಮುದ್ದಸ್ಸಿರ್, ರಾಮಸೌಂದಲ್ಕರ್, ಕಾಶಿಫ್‌ರಝಾ ಮತ್ತಿತರರು ಇದ್ದರು.

ನೂರಕ್ಕೂ ಹೆಚ್ಚು ಪ್ರದರ್ಶಕರು ಭಾಗಿ: ನ.27ರಿಂದ 29ರವರೆಗೆ ನಡೆಯಲಿರುವ ವಸ್ತು ಪ್ರದರ್ಶನದಲ್ಲಿ 100ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸಿದ್ದು, 400ಕ್ಕೂ ಹೆಚ್ಚಿನ ಉತ್ಪನ್ನಗಳನ್ನು ಪ್ರದರ್ಶನಕ್ಕಿಡಲಾಗಿದೆ. ದೇಶದ ಸಣ್ಣ ಹಾಗೂ ಮಧ್ಯಮ ಪ್ರಮಾಣದ ಸ್ವಯಂ ಸಂಬಂಧಿತ ಕಂಪನಿಗಳು ಸೇರಿ ಚೀನಾ, ತೈವಾನ್, ದಕ್ಷಿಣ ಕೊರಿಯಾ ಮತ್ತು ಯುಎಸ್‌ಎನ ಕಂಪನಿಗಳಿಗೂ ವೇದಿಕೆ ಒದಗಿಸಲಾಗಿದೆ.