ಜಿಲ್ಲೆ

ಹಸಿರು ಬೆಳೆಗೆ ಕೆಂಪು ಹೊದಿಕೆ

ಡಿ.ವಿ. ಕಮ್ಮಾರ ಧಾರವಾಡ

ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿಯಲ್ಲಿನ ಹಾರೋಬೆಳವಡಿ ಗ್ರಾಮದ ಬಳಿಯ ಸೇತುವೆ ಮಳೆಗೆ ಕೊಚ್ಚಿ ಹೋಗಿ ಐದು ತಿಂಗಳ ಮೇಲಾಯಿತು. ಸೇತುವೆಯ ಆ ಕಡೆ ತುದಿ ಬೆಳಗಾವಿ, ಈ ತುದಿ ಧಾರವಾಡ ಜಿಲ್ಲಾಡಳಿತಕ್ಕೆ ಬರುವ ಕಾರಣಕ್ಕೆ ಅವರಿಗೂ ಕಾಳಜಿ ಇಲ್ಲ ಇವರಿಗೂ ಕಾಳಜಿ ಇಲ್ಲದಂತಹ ಸ್ಥಿತಿ ನಿರ್ವಣವಾಗಿದೆ. ಇದೀಗ ತಾತ್ಕಾಲಿಕ ಸೇತುವೆ ರೈತರ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ.

ಹೌದು, ಧಾರವಾಡ ಜಿಲ್ಲೆಯ ಹಾರೋಬೆಳವಡಿ ಬಳಿಯ ತುಪ್ಪರಿ ಹಳ್ಳದ ಸೇತುವೆ ಕಳೆದ ಆಗಸ್ಟ್​ನಲ್ಲಿ ಸುರಿದ ಮಳೆಗೆ ಕೊಚ್ಚಿ ಹೋಗಿ ಸಂಪರ್ಕ ಕಡಿತಗೊಂಡಿತ್ತು. ಆಗ ಹಳ್ಳದ ಮೇಲ್ಭಾಗದ ಜಮೀನಿನಲ್ಲಿದ್ದ ಮುಂಗಾರು ಬೆಳೆ ನೀರು ಪಾಲಾಗಿತ್ತು. ಕೆಳಭಾಗದ ಜಮೀನುಗಳಲ್ಲಿನ ಹೆಸರು ಮತ್ತು ಈರುಳ್ಳಿ ಬೆಳೆಯನ್ನು ಸೇತುವೆಯ ಅವಶೇಷದ ಮರಳು ಹಾಗೂ ಮಣ್ಣು ಆಪೋಷನ ತೆಗೆದು ಕೊಂಡಿತ್ತು. ರೈತರು ಸ್ವಂತ ಹಣದಲ್ಲಿ ಜೆಸಿಬಿಗಳ ಮೂಲಕ ಗದ್ದೆಗಳಲ್ಲಿನ ಅವಶೇಷಗಳನ್ನು ತೆರವುಗೊಳಿಸಿ, ಸಜ್ಜು ಮಾಡಿ ಹಿಂಗಾರು ಬಿತ್ತನೆ ಮಾಡಿದ್ದರು. ಈಗ ಹಿಂಗಾರು ಬೆಳೆಯ ಫಸಲು ಕೈಗೆ ಬರುವ ಹೊತ್ತಿನಲ್ಲಿ ಇದೇ ಸೇತುವೆ ಮತ್ತೇ ರೈತರ ಪಾಲಿಕೆ ಕಂಟಕವಾಗಿದೆ.

ಸದ್ಯ ಕೊಚ್ಚಿಹೋದ ಭಾಗದಲ್ಲಿಯೇ ತಾತ್ಕಾಲಿಕವಾಗಿ ಕೆಂಪು ಮಣ್ಣು ಹಾಕಿ ಸೇತುವೆ ನಿರ್ವಿುಸಲಾಗಿದೆ. ಮೂರು ಜಿಲ್ಲೆಗಳ ಮಧ್ಯ ಸಂಪರ್ಕ ಕಲ್ಪಿಸುವ ಸೇತುವೆಯಾಗಿದ್ದರಿಂದ ಸಹಜವಾಗಿ ವಾಹನಗಳ ದಟ್ಟಣೆ ಹೆಚ್ಚಾಗಿದೆ. ಹೀಗಾಗಿ ವಾಹನಗಳ ಓಡಾಟದಿಂದ ಏಳುವ ಧೂಳು ಬೆಳೆಯನ್ನೆಲ್ಲ ಆವರಿಸುತ್ತಿದೆ. ಹೀಗಾಗಿ ಹಸಿರಿನಿಂದ ಕಂಗೊಳಿಸಬೇಕಾದ ಗದ್ದೆ ಗಳೆಲ್ಲ ಕೆಂಪು ಧೂಳಿನಲ್ಲಿ ಮುಚ್ಚಿ ಹೋಗಿವೆ. ಈಗ ಬಿಳಿಜೋಳ, ಕಡಲೆ, ಕುಸುಬಿ ಮತ್ತು ಗೋಧಿ ಬೆಳೆ ರೈತರ ಕೈಗೆ ಬರುವ ಹೊತ್ತು. ಬಿಳಿ ಜೋಳದ ದಂಟನ್ನೇ ರೈತರು ತಮ್ಮ ಜಾನುವಾರುಗಳಿಗೆ ಹಸಿ ಮೇವನ್ನಾಗಿ ಬಳಸುತ್ತಿದ್ದರು. ಧೂಳು ಹಿಡಿದಿರುವ ಕಾರಣಕ್ಕೆ, ದನಗಳು ಕೂಡ ಇದನ್ನು ಮೂಸಿ ನೋಡುತ್ತಿಲ್ಲ.

ಸದ್ಯ ಹಸಿ ಕಡಲೆ ಗಿಡಕ್ಕೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ. ಆದರೆ, ಸಾಕಷ್ಟು ಧೂಳು ಮೆತ್ತಿಕೊಂಡಿರುವ ಕಾರಣಕ್ಕೆ, ಕಡಲೆಯನ್ನು ತೊಳದು ಮಾರುಕಟ್ಟೆಗೆ ಸಾಗಿಸಬೇಕಿದೆ. ಆದರೆ ಲೋಡುಗಟ್ಟಲೇ ಕಡಲೆ ಗಿಡದ ದಾಸ್ತಾನನ್ನು ಹೇಗೆ ತೊಳೆಯುವುದು ಎನ್ನುವುದೇ ರೈತರ ಚಿಂತೆ. ಇನ್ನು ಕಡಲೆ ಗಿಡಗಳಿಗೆ ಧೂಳು ಮೆತ್ತಿದ್ದರಿಂದ ಕೀಳಲು ಆಳುಗಳು ಸಹ ಹಿಂಜರಿಯುತ್ತಿದ್ದಾರೆ. ಮುಖ್ಯವಾಗಿ ಸದ್ಯ ಬಿಳಿ ಜೋಳ ತೆನೆ ಹಿಡಿಯುವ ಹಂತದಲ್ಲಿ ಉತ್ತಮ ವಾತಾವರಣ ಇರಬೇಕು. ಆದರೆ ಇಡೀ ಗದ್ದೆಗೆ ಗದ್ದೆಯೇ ಧೂಳಿನಲ್ಲಿ ಮುಚ್ಚಿ ಹೋಗಿರುವುದರಿಂದ ಜೋಳದ ತೆನೆಯ ಮೇಲೆಯೂ ಪರಿಣಾಮ ಬೀರಿದೆ.

ಇದೇ ಮಾರ್ಗವಾಗಿ ಧಾರವಾಡ ಭಾಗದ ರೈತರು ಬೆಳಗಾವಿ ಜಿಲ್ಲೆಯ ಕಾರ್ಖಾನೆಗಳಿಗೆ ಕಬ್ಬು ಸಾಗಿಸುತ್ತಾರೆ. ಆದರೆ ವಾರದಲ್ಲಿ ಒಂದಾದರೂ ಟ್ರಾ್ಯಕ್ಟರ್ ಇಲ್ಲವೆ ಲಾರಿ ಕಬ್ಬು ತುಂಬಿಕೊಂಡು ಹೋಗುವಾಗ ಈ ತಾತ್ಕಾಲಿಕ ಸೇತುವೆ ಬಳಿ ಪಲ್ಟಿಯಾಗುತ್ತಲೇ ಇವೆ. ಇಷ್ಟೆಲ್ಲ ಆದರೂ ಆಡಳಿತ ವ್ಯವಸ್ಥೆ ಮಾತ್ರ ಕಣ್ತೆರೆದು ನೋಡುತ್ತಿಲ್ಲ ಎಂಬುದು ಸ್ಥಳೀಯ ರೈತರ ಆಕ್ರೋಶವಾಗಿದೆ.

ಸೇತುವೆ ಪಕ್ಕದ ರೈತರೆಲ್ಲ ಈ ಧೂಳಿನಿಂದ ದಿವಾಳಿಯಾಗಿ ಹೋಗಿದ್ದೇವೆ. ಅಧಿಕಾರಿಗಳಿಗೆ ರೈತರ ಬಗ್ಗೆ ಕಾಳಜಿಯೇ ಇಲ್ಲವೇ? ಕೆಂಪು ಮಣ್ಣು ಹಾಕಿದ್ದರಿಂದ ಸೇತುವೆ ಸುತ್ತ 1 ಕಿ.ಮೀ.ವರೆಗೂ ಗಾಳಿ ಬಿಟ್ಟ ಕಡೆ ಧೂಳು ವ್ಯಾಪಿಸಿಕೊಳ್ಳುತ್ತಿದೆ. ಶಾಲೆ ಮಕ್ಕಳು ಧೂಳಿನ ಮಜ್ಜನದಲ್ಲಿಯೇ ಶಾಲೆಗೆ ಹೋಗಬೇಕಾಗಿದೆ. ಈ ಧೂಳಿನಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮವಾದರೆ ಅದಕ್ಕೆ ಯಾರು ಹೊಣೆ? ಈ ಧೂಳಿನಿಂದ ದಯಮಾಡಿ ನಮಗೆ ಮುಕ್ತಿ ದೊರಕಿಸಿಕೊಡಿ. |ಮಲ್ಲಿಕಾರ್ಜುನಗೌಡ ಬಾಳನಗೌಡರ ರೈತ
ಈ ಹಿಂದೆ ಬೆಂಗಳೂರಿನಲ್ಲಿ ಸಭೆ ನಡೆದಾಗಲೇ ಸೇತುವೆಯ ಬಗ್ಗೆ ಅಧಿಕಾರಿಗಳನ್ನು ಕೇಳಿದಾಗ, ಶೀಘ್ರವೇ ಸೇತುವೆ ನಿರ್ಮಾಣ ಕಾರ್ಯ ಆರಂಭಿಸುತ್ತೇವೆ ಎಂದು ಹೇಳಿದ್ದರು. ಆದರೆ ಇನ್ನೂ ಕಾಮಗಾರಿ ಆರಂಭಿಸದಿರುವ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ವಹಿಸುತ್ತೇವೆ. | ಜಗದೀಶ ಶೆಟ್ಟರ್, ಜಿಲ್ಲಾ ಉಸ್ತುವಾರಿ ಸಚಿವ