ಕೈಲಾಂಚ: ಕವಣಾಪುರ ಬೋಳಾರೆ ಕೆರೆಯಲ್ಲಿ ಜೊಂಡು ಬೆಳೆದು ನೀರು ಪಾಚಿ ಕಟ್ಟಿ ಹಸಿರು ಬಣ್ಣಕ್ಕೆ ತಿರುಗಿದೆ. ಗ್ರಾಪಂ ಅಧಿಕಾರಿಗಳು ಕೆರೆ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ರೇವಣಸಿದ್ದೇಶ್ವರ ಬೆಟ್ಟದ ರಸ್ತೆಯಲ್ಲಿರುವ ಕೆರೆ ಬಂಡೆಗಳ ಮಧ್ಯೆ ವಿಶಾಲವಾಗಿದ್ದು ವರ್ಷಪೂರ್ತಿ ನೀರು ಇರುತ್ತದೆ. ಬಹಳ ವರ್ಷಗಳ ಹಿಂದೆ ಕವಣಾಪುರ, ಸಾಹುಕಾರ್‌ದೊಡ್ಡಿ, ಕುರುಬಳ್ಳಿದೊಡ್ಡಿ ಗ್ರಾಮಸ್ಥರು ಬಟ್ಟೆ, ಪಾತ್ರೆ ತೊಳೆಯಲು, ಬೆಟ್ಟಕ್ಕೆ ಹೋಗುವ ಭಕ್ತರು ಸ್ನಾನಕ್ಕೆ ಬಳಸುತ್ತಿದ್ದರು. ಕಾಲಕ್ರಮೇಣ ಕೆರೆ ನೀರು ಜಾನುವಾರುಗಳಿಗೆ, ಕಾಡು ಪ್ರಾಣಿಗಳಿಗೆ ಸೀಮಿತವಾಗಿದೆ.
ಸ್ವಚ್ಛವಾಗಿದ್ದ ಕೆರೆ ಕಾಲಕ್ರಮೇಣ ಕಲುಷಿತಗೊಂಡಿದೆ. ನೀರಿನಲ್ಲಿ ಜೊಂಡು ಬೆಳೆದಿರುವುದರಿಂದ ದುರ್ವಾಸನೆ ಬರುತ್ತಿದ್ದು, ಜಾನುವಾರುಗಳೂ ಇತ್ತ ಮುಖಮಾಡುತ್ತಿಲ್ಲ.
ಕೆರೆ ಪಕ್ಕದಲ್ಲಿಯೇ ಬೆಟ್ಟ-ಗುಡ್ಡಗಳಿದ್ದು, ಕರಡಿ, ಚಿರತೆ, ನವಿಲು, ಮೊಲ, ಕಾಡುಹಂದಿ ಸೇರಿ ಹಲವು ಕಾಡುಪ್ರಾಣಿಗಳು ನೆಲೆ ಕಂಡುಕೊಂಡಿವೆ. ಸುತ್ತಲೂ ಕೆರೆ-ಕುಂಟೆಗಳು ಇಲ್ಲದ ಕಾರಣ ಕಾಡುಪ್ರಾಣಿಗಳಿಗೆ ಕುಡಿಯುವ ನೀರಿನ ದಾಹ ತಣಿಸಲು ಕವಣಾಪುರದ ಬೋಳಾರೆ ಕೆರೆಯೇ ಆಶ್ರಯವಾಗಿದೆ. ಗ್ರಾಪಂ ಅಧಿಕಾರಿಗಳು ಕೂಡಲೇ ಕೆರೆ ಸ್ವಚ್ಛತೆ ಕೈಗೊಂಡು ಕೆರೆ ಉಳಿಸಲು ಮುಂದಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಜಾನುವಾರು, ಕಾಡುಪ್ರಾಣಿಗಳಿಗೆ ಕುಡಿಯುವ ನೀರಿನ ಆಶ್ರಯವಾಗಿದ್ದ ಕೆರೆ, ಹಿಂದೆ ಗ್ರಾಮದ ಜನರು ಪಾತ್ರೆ ತೊಳೆಯಲು, ಬಟ್ಟೆ ಒಗೆಯಲು ಬಳಸುತ್ತಿದ್ದರು. ಇದೀಗ ಕೆರೆ ಕಲುಷಿತಗೊಂಡಿದ್ದು, ಕೆರೆಯ ಸ್ವಚ್ಛತೆಗೆ ಗ್ರಾಮ ಪಂಚಾಯಿತಿ ಮುಂದಾಗಬೇಕು. ಅಶ್ವಥ್‌ಕುಮಾರ್, ಕವಣಾಪುರ ಗ್ರಾಮಸ್ಥ ********* ಕೆರೆ ಪಾಚಿ ಕಟ್ಟಿ ವಾಸನೆ ಬರುತ್ತಿದೆ. ಜಾನುವಾರು, ಕಾಡು ಪ್ರಾಣಿಗಳ ಕುಡಿಯುವ ನೀರಿಗೆ ತೊಂದರೆ ಉಂಟಾಗಿದೆ. ಕೆರೆ ಸ್ವಚ್ಛ ಮಾಡಿಕೊಡುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ. ಕೆರೆ ಸ್ಥಳ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಎಸ್.ಸತೀಶ್, ಪಿಡಿಒ, ಕೈಲಾಂಚ ಗ್ರಾಪಂ