ಬೀದರ್: ರೈತರು ಅರಣ್ಯ ಇಲಾಖೆಯಿಂದ ಸಸಿ ಪಡೆದು ತಮ್ಮ ಹೊಲಗಳಲ್ಲಿ ನೆಡುವ ಮೂಲಕ ಬೀದರ್ ಹಸಿರು ಜಿಲ್ಲೆಯಾಗಿಸಲು ಕೈಜೋಡಿಸಬೇಕು ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್ ಕುಮಾರ್ ದೀಕ್ಷಿತ್ ಮನವಿ ಮಾಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವನಮಹೋತ್ಸವ ನಿಮಿತ್ತ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ, ಶಾಲಾ-ಕಾಲೇಜು, ಅಂಗನವಾಡಿ ಕೇಂದ್ರ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಸಸಿಗಳನ್ನು ನೆಡಬೇಕು ಎಂದು ಸಲಹೆ ನೀಡಿದರು.
ವನಮಹೋತ್ಸವ ಅಂಗವಾಗಿ ಜಿಲ್ಲೆಯಲ್ಲಿ ಐದು ಲಕ್ಷ ಸಸಿ ನೆಡುವ ಗುರಿ ಹೊಂದಲಾಗಿದೆ. ಅವುಗಳ ಸಂರಕ್ಷಣೆ ಮಾಡಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ. ಸರಾಸರಿ ಅರಣ್ಯ ಪ್ರದೇಶ ಶೇ.33 ಇರಬೇಕು. ಆದರೆ ರಾಜ್ಯದಲ್ಲಿ ಶೇ.20 ಇದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೇವಲ ಶೇ.3.4 ಇದೆ. ಹೀಗಾಗಿ ಈ ಭಾಗದಲ್ಲಿ ಹೆಚ್ಚಿನ ಸಸಿ ನೆಡಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಅರಣ್ಯ ಇಲಾಖೆಯಲ್ಲಿ ಶ್ರೀಗಂಧ ಸೇರಿ ಹಲವಾರು ಸಸಿಗಳಿದ್ದು, ಅವುಗಳನ್ನು ಪಡೆದು ಸಾರ್ವಜನಿಕರು ಹೊಲ, ಮನೆ ಎದುರು, ಕಚೇರಿ, ಶಾಲಾ-ಕಾಲೇಜು ಆವರಣದಲ್ಲಿ ನೆಡಬೇಕು. ಸಸಿ ನೆಡುವುದು ಎಷ್ಟು ಮುಖ್ಯವೋ, ಸಂರಕ್ಷಿಸುವುದು ಅಷ್ಟೇ ಮುಖ್ಯ. ಈ ವರ್ಷ ನೆಟ್ಟ ಸಸಿಗಳಲ್ಲಿ ಮುಂದಿನ ವರ್ಷ ಎಷ್ಟು ಉಳಿದಿವೆ ಎಂಬ ಮಾಹಿತಿ ಸಂಗ್ರಹಿಸಲಾಗುವುದು ಮತ್ತು ಹೆಚ್ಚು ಸಸಿಗಳನ್ನು ನೆಟ್ಟ ಮಾದರಿ ಶಾಲಾ-ಕಾಲೇಜು, ಗ್ರಾಪಂ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.
ಜಿಲ್ಲಾಧಿಕಾರಿ ಗೋವಿಂದರಡ್ಡಿ ಮಾತನಾಡಿ, ಶಾಲಾ-ಕಾಲೇಜುಗಳಲ್ಲಿ ಸಸಿ ನೆಟ್ಟ ನಂತರ ಪೋಷಣೆಗಾಗಿ ವಿದ್ಯಾರ್ಥಿಗಳಿಗೆ ತಲಾ ಒಂದು ಸಸಿ ನೀಡಬೇಕು. ದತ್ತು ಪಡೆದ ಮಕ್ಕಳು ಕಾಳಜಿಯಿಂದ ಬೆಳೆಸುವ ಜತೆಗೆ ಕಾಲೇಜು ಬಿಟ್ಟು ಹೊದ ನಂತರ ಮತ್ತೆ ಅಲ್ಲಿಗೆ ಬಂದಾಗ ಇದು ನಾನು ಬೆಳೆಸಿದ ಗಿಡ ಎಂಬ ನೆನಪು ಅವರಿಗೆ ಇರುತ್ತದೆ. ವನಮಹೋತ್ಸವ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಶ್ವಜೀತ್ ಮಿಶ್ರಾ, ಜಿಪಂ ಸಿಇಒ ಶಿಲ್ಪಾ ಎಂ., ಎಸ್ಪಿ ಚನ್ನಬಸವಣ್ಣ ಲಂಗೋಟಿ, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಬಿ. ಪಾಟೀಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಉಪ ನಿರ್ದೇಶಕ ಪ್ರಭಾಕರ, ಡಿಎಚ್ಒ ಡಾ.ರತಿಕಾಂತ ಸ್ವಾಮಿ ಇತರರಿದ್ದರು.