ಜಿಲ್ಲೆ

ಹಸಿರು ಕ್ರಾಂತಿಯಿಂದ ಆಹಾರದಲ್ಲಿ ಸ್ವಾವಲಂಬನೆ

ಸಚಿವ ಡಾ.ಜಿ.ಪರಮೇಶ್ವರ ಹೇಳಿಕೆ, 3 ದಿನಗಳ ಫಲಪುಷ್ಪ ಪ್ರದರ್ಶನಕ್ಕೆ ಅದ್ದೂರಿ ಚಾಲನೆ

ತುಮಕೂರು: ಹಸಿರು ಕ್ರಾಂತಿಯ ಫಲವಾಗಿ ಭಾರತದಲ್ಲಿ ಕ್ಷಾಮ ಮತ್ತು ಹಸಿವು ನೀಗಿತಲ್ಲದೆ ಆಹಾರದಲ್ಲಿ ಸ್ವಾವಲಂಬನೆ ಸಾಧಿಸಲು ಸಾಧ್ಯವಾಯಿತು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಜಿಪಂ, ಜಿಲ್ಲಾ ತೋಟಗಾರಿಕೆ ಸಂಘದ ಸಹಯೋಗದಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಆಯೋಜಿಸಿರುವ 3 ದಿನಗಳ ಫಲಪುಷ್ಪ ಪ್ರದರ್ಶನಕ್ಕೆ ಭಾನುವಾರ ಸಂಜೆ ಚಾಲನೆ ನೀಡಿ ಮಾತನಾಡಿ, 60&-70ರ ದಶಕದಲ್ಲಿ ದೇಶದ ಜನರಿಗೆ ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದ ಕಾಲದಲ್ಲಿ ನಮ್ಮ ನೆರವಿಗೆ ಬಂದಿದ್ದು, ರೈತರು ಮತ್ತು ಕೃಷಿ ವಿಜ್ಞಾನಿಗಳು. ಇವರ ಪರಿಶ್ರಮದ ಫಲವಾಗಿ ಕೇವಲ 20 ವರ್ಷಗಳಲ್ಲಿಯೇ ದೇಶ ಆಹಾರದಲ್ಲಿ ಸ್ವಾವಲಂಬನೆ ಸಾಧಿಸಲು ಸಾಧ್ಯವಾಯಿತು ಎಂದರು.

ಜಿಲ್ಲೆಯ ಸುಮಾರು 6.50 ಲಕ್ಷ ವ್ಯವಸಾಯ ಯೋಗ್ಯ ಭೂಮಿಯಲ್ಲಿ ಶೇ.50ರಷ್ಟು ತೋಟಗಾರಿಕಾ ಬೆಳೆಗಳೇ ಇವೆ. ಬೆಂಗಳೂರು ಸುತ್ತಮುತ್ತ ಸುಮಾರು 150 ಕಿ.ಮೀ., ಸುತ್ತಳತೆಯಲ್ಲಿ ಅನೇಕ ಪಾಲಿಹೌಸ್​ಗಳಲ್ಲಿ ವಿದೇಶಿ, ಹೂವು, ಹಣ್ಣುಗಳನ್ನು ಬೆಳೆದು ವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ ಎಂದು ತಿಳಿಸಿದರು. ರಾಜ್ಯದಲ್ಲಿ 9 ವಿವಿಧ ಬಗೆಯ ಆಗ್ರೋ ಕ್ಲೆಮೆಟ್​ ಜ್ಹೋನ್​ ಇರುವುದು ವಿಶೇಷ. ಬೇರೆ ಯಾವ ರಾಜ್ಯದಲ್ಲಿಯೂ ಈ ರೀತಿಯ ವಿಶೇಷತೆಗಳಿಲ್ಲ. ಇತ್ತೀಚಿನ ದಿನಗಳಲ್ಲಿ ಟೇರೆಸ್​ ಗಾರ್ಡನ್​ ಬಹಳ ಪ್ರಚಾರದಲ್ಲಿದೆ.

ಇವುಗಳ ಜನರಿಗೆ ಒಂದಷ್ಟು ಪೂರಕ ಆದಾಯ ತಂದುಕೊಡುವಲ್ಲಿ ಸಹಕಾರಿಯಾಗಿವೆ ಎಂದರು.

ನಮ್ಮ ಸಂಸತಿ, ಪರಂಪರೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ನಿಟ್ಟಿನಲ್ಲಿ ತುಮಕೂರು ಸಿದ್ಧಗೊಂಡಿದೆ. ಶಿಕ್ಷಣ ಕಾಶಿಯತ್ತ ದಾಪುಗಾಲು ಇಡುತ್ತಿರುವ ತುಮಕೂರು ಸಾಂಸತಿಕವಾಗಿ ಬೆಳೆಯಲು ಎಲ್ಲ ರೀತಿಯ ಸಹಕಾರವನ್ನು ಸರ್ಕಾರ ನೀಡುತ್ತಿದ್ದು, ಇದರ ದ್ಯೋತಕವಾಗಿ ಇಂದಿನ ತೋಟಗಾರಿಕಾ ಫಲಪುಷ್ಪ ಪ್ರದರ್ಶನ ಕಂಡುಬಂದಿದೆ ಎಂದು ಜಿಪಂ ಸಿಇಒ ಜಿ.ಪ್ರಭು ಹೇಳಿದರು.

ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್​ ಅಧ್ಯಕ್ಷತೆವಹಿಸಿದ್ದರು. ಶಾಸಕ ಟಿ.ಬಿ.ಜಯಚಂದ್ರ ತಾಂತ್ರಿಕ ಮಾಹಿತಿಯನ್ನು ಒಳಗೊಂಡ ಕಿರುಹೊತ್ತಿಗೆ ಬಿಡುಗಡೆ ಮಾಡಿದರು. ಶಾಸಕ ಸಿ.ಬಿ.ಸುರೇಶಬಾಬು, ಜಿಲ್ಲಾಧಿಕಾರಿ ಶುಭಕಲ್ಯಾಣ್​, ಎಸ್ಪಿ ಕೆ.ವಿ.ಅಶೋಕ್​, ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ, ಐಎಸ್​ಆರ್​ಎಚ್​ನ ಡಾ.ತುಷಾರ ಕಾಂತಿ ಬೆಹೆರಾ, ಜಿಲ್ಲಾ ಅರಣ್ಯಸಂರಕ್ಷಣಾಧಿಕಾರಿ ಅನುಪಮಾ, ತೋಟಗಾರಿಕಾ ಉಪನಿರ್ದೇಶಕಿ ಶಾರದಮ್ಮ, ಜಿಲ್ಲಾ ತೋಟಗಾರಿಕೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.