ಜಿಲ್ಲೆ

ಹಸಿರಿನಿಂದ ನಳನಳಿಸುತ್ತಿದೆ ಉದ್ಯಾನ

ಹುಬ್ಬಳ್ಳಿ: ಬಡಾವಣೆಯಾಗಲಿ, ಉದ್ಯಾನವೇ ಇರಲಿ ಸ್ವಚ್ಛವಾಗಿಟ್ಟುಕೊಳ್ಳಬೇಕೆಂಬ ಉತ್ಕಟ ಇಚ್ಚೆ ಸ್ಥಳೀಯರ ಮನಸ್ಸಿನಲ್ಲಿ ಬಂದರೆ ಎಂತಹದೇ ಸ್ಥಿತಿಯಲ್ಲೂ ಪಟ್ಟು ಬಿಡದೇ ನಳನಳಿಸುವಂತೆ ಮಾಡಬಹುದು ಎಂಬುದಕ್ಕೆ ಹುಬ್ಬಳ್ಳಿಯ ಹೆಗ್ಗೇರಿ ಗುಡಿ ಪ್ಲಾಟ್ ನಿವಾಸಿಗಳು ಸಾಕ್ಷಿಯಾಗಿದ್ದಾರೆ.

ಅವರು ಮಾಡಲಿ, ಇವರು ಮಾಡಲಿ ಎಂದು ಕುಳಿತಿದ್ದರೆ ಬೇರೆ ಉದ್ಯಾನದಂತೆ ಇದು ಕೂಡ ಇಂದು ಪಾಳು ಬೀಳುತ್ತಿತ್ತು. ಪ್ರತಿಯೊಂದಕ್ಕೂ ಸರ್ಕಾರ ಇಲ್ಲವೇ ಸ್ಥಳೀಯ ಆಡಳಿತವನ್ನು ನಂಬಿಕೊಂಡು ಕೂರದೇ ಶ್ರಮದಾನದ ಮೂಲಕ ತಮ್ಮ ಬಡಾವಣೆಯ ಉದ್ಯಾನ ಹಸಿರುಗೊಳಿಸಿದ ನಿವಾಸಿಗಳ ಕಾರ್ಯಕ್ಕೆ ಈಗ ಎಲ್ಲರೂ ಬೇಷ್ ಎನ್ನುತ್ತಿದ್ದಾರೆ.

ಸ್ಥಳೀಯ ನಿವಾಸಿಗಳಲ್ಲಿ ಕೆಲ ಸಮಾನ ಮನಸ್ಕರ ಗುಂಪು ಮೈ ಕೊಡವಿ ಎದ್ದಿದ್ದರಿಂದ ಸುಮಾರು ಒಂದು ಎಕರೆಯಷ್ಟು ವಿಸ್ತಾರದ ಉದ್ಯಾನ ಇಂದು ಪಕ್ಕಾ ಹಸಿರಾಗಿದ್ದು, ಒಳಗಡೆ ಒಂದು ಸುತ್ತು ಹಾಕಿದರೆ ಕಣ್ಮನ ತುಂಬುತ್ತದೆ.

ದಟ್ಟ ಕಾಡಿನಂತಿತ್ತು: ಗಿಡಗಂಟಿಗಳು ಬೆಳೆದು ದಟ್ಟ ಕಾಡಿನಂತಾಗಿದ್ದ ಉದ್ಯಾನದಲ್ಲಿ ಹಾವು, ಮುಂಗುಸಿಗಳು, ವಿಷ ಜಂತುಗಳು ವಾಸವಾಗಿದ್ದವು. ಒಳಗೆ ಹೋಗುವುದಕ್ಕೂ ಹೆದರಿಕೆ ಬರುವಂತಿತ್ತು. ಸುತ್ತಲೂ ಕಾಂಪೌಂಡ್ ನಿರ್ವಿುಸಿ ವಾಕಿಂಗ್ ಪಾತ್ ಮಾಡಿ ಕೈಬಿಡಲಾಗಿತ್ತು. 2016ರಲ್ಲಿ ಉದ್ಯಾನ ಉದ್ಘಾಟನೆ ಮಾಡಲಾಗಿತ್ತು. ಅಂದಿನಿಂದ ಇಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿರಲಿಲ್ಲ.

ಕಳೆದ ವರ್ಷ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದೇ ಸ್ವಚ್ಛತಾ ಕಾರ್ಯಕ್ಕೆ ಮುಂದಾದ ಸ್ಥಳೀಯರು ಉದ್ಯಾನಕ್ಕೆ ಹೊಸ ರೂಪ ನೀಡಿದ್ದಾರೆ. ತಾವೇ ಸ್ವತಃ ಹಣ ಖರ್ಚು ಮಾಡಿ ಹೊಸ ಬಗೆಯ ಗಿಡಗಳನ್ನು ತಂದು ಹಚ್ಚಿದ್ದಾರೆ. ನೀರಿನ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಗುಡಿ ಪ್ಲಾಟ್ ನಿವಾಸಿಗಳಾದ ಆರ್.ಎಸ್. ಲಕ್ಷೆ್ಮೕಶ್ವರಮಠ, ಎಸ್.ಸಿ. ಕಮ್ಮಾರ, ಅರುಣ ವೆರ್ಣೆಕರ, ವಿಷ್ಣು ಪಾಸ್ತೆ, ಕೆ.ಕೆ. ಧಾರವಾಡ ಮುಂತಾದವರು ಸೇರಿ ಉದ್ಯಾನ ಅಭಿವೃದ್ಧಿಗೆ ಮುಂದಾದರು. ಇವರೆಲ್ಲ ನಿತ್ಯ ಒಂದೆರಡು ಗಂಟೆ ಶ್ರಮದಾನ ಮಾಡುತ್ತಾರೆ.

ಇದೇ ರೀತಿ ಬಡಾವಣೆ ಅನೇಕ ಜನರು ಉದ್ಯಾನ ಸ್ವಚ್ಛತೆಗೆ ತಮ್ಮ ಶ್ರಮದಾನ ನೀಡಿದ್ದಾರೆ. ಅಗತ್ಯ ಬಿದ್ದಾಗ ಹಣಕಾಸಿನ ನೆರವೂ ನೀಡಿದ್ದಾರೆ. ಸ್ಥಳೀಯರ ನೆರವಿನಿಂದಲೇ ಉದ್ಯಾನ ಹಸಿರಾಗಿದೆ.

ತರಹೇವಾರಿ ಗಿಡ ಇರುವ ಎಕರೆ ಜಾಗದಲ್ಲಿ ಫಲ ನೀಡುವ ಮರ ಸೇರಿ 15 ತರಹದ ಸಸಿ ನೆಡಲಾಗಿದೆ. ಔಷಧಿಯ ಸಸ್ಯಗಳೂ ಇಲ್ಲಿವೆ. ಪೇರು, ದಾಳಿಂಬೆ, ತುಳಸಿ, ಕಾಬಾಳೆ, ಕಾಮಕಸ್ತೂರಿ, ಅಜವಾನ, ಅಲಂಕಾರಿಕ ಸೇರಿ ವೈವಿಧ್ಯಮಯ ಸಸ್ಯ ಸಂಪತ್ತು ಬೆಳೆಸಲಾಗಿದೆ. ನೀರಿನ ವ್ಯವಸ್ಥೆ ಬೇಕೆಂದಾಗ ಜಲಮಂಡಳಿ ಅಧಿಕಾರಿಗಳು ನೆರವಾದರು. ಮಹಾನಗರ ಪಾಲಿಕೆ ಅಧಿಕಾರಿಗಳ ಸಹಕಾರವೂ ಸಿಗುತ್ತಿದೆ. ಇನ್ನಷ್ಟು ಅಭಿವೃದ್ಧಿ ಕೆಲಸಗಳು ಬಾಕಿ ಇದ್ದು, ಅದಕ್ಕಾಗಿ ಪಾಲಿಕೆಯವರು 4.91 ಲಕ್ಷ ರೂ. ಬಜೆಟ್ ರೆಡಿ ಮಾಡಿದ್ದಾರೆ. ಆದಷ್ಟು ಬೇಗ ಅದು ಕೈಗೂಡಿದರೆ ಉದ್ಯಾನ ಇನ್ನಷ್ಟು ಸುಂದರಗೊಳ್ಳಲಿದೆ ಎನ್ನುತ್ತಾರೆ ಸ್ಥಳೀಯರು.

ಗಾರ್ಡನ್​ನಲ್ಲಿ ಕಸ ಬೆಳೆದು ಹಾಳಾಗಿತ್ತು. ನಿವಾಸಿಗಳು ಸೇರಿ ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದ್ದೇವೆ. ಏನಾದರೂ ಮಾಡಬೇಕೆಂಬ ಸಮಾನ ಮನಸ್ಕರ ಆಶಯದ ಫಲವಾಗಿ ಉದ್ಯಾನ ಹಚ್ಚಹಸಿರಾಗಿದೆ. ಮನಸ್ಸಿಗೆ ತುಂಬ ಸಂತೋಷ ಕೊಡುತ್ತದೆ. ನಿವಾಸಿಗಳು ಮನಸ್ಸು ಮಾಡಿದರೆ ಏನಾದರೂ ಸಾಧಿಸಬಹುದು ಎಂಬುದಕ್ಕೆ ಇದೇ ಸಾಕ್ಷಿ. ಇದರಿಂದ ಬೇರೆಯವರಿಗೂ ಪ್ರೇರಣೆ ಸಿಗಲಿ ಎಂಬುದೇ ನಮ್ಮ ಆಶಯ. | ಆರ್.ಎಸ್. ಲಕ್ಷೆ್ಮೕಶ್ವರಮಠ ಗುಡಿ ಪ್ಲಾಟ್ ನಿವಾಸಿ