ಇಂಡಿಯಲ್ಲಿರುವ ಇಂದಿರಾ ಕ್ಯಾಂಟೀನ್ ಹೊರ ನೋಟ. 
ಜಿಲ್ಲೆ

ಹಸಿದವರಿಗೆ ವರದಾನ ಇಂದಿರಾ ಕ್ಯಾಂಟೀನ್

ಇಂಡಿ: ಬಡವರಿಗೆ ಅನುಕೂಲವಾಗಲಿ ಎಂಬ ಕಾರಣದಿಂದ ರಿಯಾಯಿತಿ ದರದಲ್ಲಿ ಊಟ-ಉಪಾಹಾರ ಲಭ್ಯವಿರುವ ಇಂದಿರಾ ಕ್ಯಾಂಟಿನ್ ಹಸಿದವರಿಗೆ ವರದಾನವಾಗಿ ಪರಿಣಮಿಸಿದೆ.

ಅದರಲ್ಲೂ ಪಟ್ಟಣದ ಮಿನಿ ವಿಧಾನಸೌಧ ಪಕ್ಕದಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಉತ್ತಮ ಗುಣಮಟ್ಟದ ಉಪಾಹಾರ, ಊಟ ಲಭ್ಯವಾಗುತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಇಲ್ಲಿ ಬೆಳಗ್ಗೆ 7 ರಿಂದ 10 ಗಂಟೆಯವರೆಗೆ ಉಪಾಹಾರ, ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಊಟ ದೊರೆಯುತ್ತಿದೆ. ಬೆಳಗಿನ ಉಪಾಹಾರಕ್ಕೆ ಇಡ್ಡಿ, ವಡೆ, ಉಪ್ಪಿಟ್ಟು, ಶಿರಾ, ಅವಲಕ್ಕಿ (ದಿನಕ್ಕೆ ಎರಡು ತಿನಿಸುಗಳು)ಯನ್ನು ಮಾಡಲಾಗುತ್ತಿದ್ದು, ಇದನ್ನು ಐದು ರೂಪಾಯಿಗೆ ನೀಡಲಾಗುತ್ತಿದೆ. ಅದೇ ರೀತಿ ಊಟಕ್ಕೆ 10 ರೂ. ತೆಗೆದುಕೊಳ್ಳುತ್ತಿದ್ದು, ಅನ್ನ, ತರಕಾರಿ ಸಾಂಬಾರ್ ಹಾಗೂ ಎರಡು ಚಪಾತಿ ನೀಡುತ್ತಿದ್ದು, ಇದರಿಂದ ಬಡವರು, ನಿರ್ಗತಿಕರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಎಲ್ಲರಿಗೂ ವರದಾನವಾಗಿದೆ. ಉತ್ತಮ ಗುಣಮಟ್ಟದ, ರುಚಿಕರವಾದ ತಿನಿಸುಗಳು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ನಾವು ಪ್ರತಿದಿನ ಬೆಳಗ್ಗೆ ಎದ್ದು ಬಸ್ಸಿಗೆ ಬರಲು ಮನೆಯಲ್ಲಿ ಉಪಾಹಾರ ಮಾಡದೆ ಬರುತ್ತೇವೆ. ಬಸ್ ನಿಲ್ದಾಣದಿಂದ ಇಳಿದು ನೇರವಾಗಿ ಇಂದಿರಾ ಕ್ಯಾಂಟೀನ್‌ಗೆ ಹೋಗಿ ಉಪಾಹಾರ ಸೇವಿಸಿ ಕಾಲೇಜಿಗೆ ಹೋಗುತ್ತೇವೆ. ಉತ್ತಮ ಗುಣಮಟ್ಟದ ಉಪಾಹಾರ ಹಾಗೂ ಊಟ ಇಲ್ಲಿ ಲಭಿಸುತ್ತಿದೆ. ಸರ್ಕಾರದ ಯೋಜನೆಯಿಂದ ನೂರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ.
ರವಿಕಾಂತ ಬೇವನೂರ, ಗ್ರಾಮೀಣ ವಿದ್ಯಾರ್ಥಿ
ನನಗೆ ಮನೆ, ಮಠ ಏನು ಇಲ್ಲ. ಅವರಿವರು ನೀಡುವ ರೂಪಾಯಿ ಎರಡು ರೂಪಾಯಿ ಸ್ವೀಕರಿಸಿ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ, ಉಪಾಹಾರ ಮಾಡುತ್ತಿದ್ದೇನೆ. ನನ್ನಂತಹ ನಿರ್ಗತಿಕರಿಗೆ ಈ ಇಂದಿರಾ ಕ್ಯಾಂಟೀನ್ ವರದಾನವಾಗಿದೆ.
ಶೇಖಪ್ಪ ದಾಯಗೋಡೆ, ನಿರ್ಗತಿಕ ಇಂಡಿ