ಜಿಲ್ಲೆ

ಹಸಿದವರಿಗೆ ಅನ್ನ ನೀಡಿದರೆ ದೇವರ ಕೃಪೆ

Chitradurga - Desk - Pranav Kumar

ಚಿತ್ರದುರ್ಗ: ನಾಗರಪಂಚಮಿ ಹಬ್ಬದ ಹೆಸರಲ್ಲಿ ಹಾಲು ಚೆಲ್ಲುವ ಬದಲಿಗೆ ಹಸಿದವರಿಗೆ ಹಾಲು ಕುಡಿಸುವ ಹಬ್ಬವಾಗಬೇಕಿದೆ ಎಂದು ಮುರುಘಾಮಠದ ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ ಸಲಹೆ ನೀಡಿದರು.


ಮುರುಘಾಮಠ, ಚಿನ್ಮೂಲಾದ್ರಿ ರೋಟರಿ ಸಂಸ್ಥೆ, ಎಸ್‌ಜೆಎಂ ಬ್ಯಾಂಕ್‌ನಿಂದ ಗೋನೂರು ನಿರಾಶ್ರಿತರ ಕೇಂದ್ರದಲ್ಲಿ ಭಾನುವಾರ ನಿರಾಶ್ರಿತರಿಗೆ ಹಾಲು-ಹಣ್ಣು ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.


ಬಡವರು, ಅಂಗವಿಕಲರು, ನಿರಾಶ್ರಿತರಲ್ಲಿ ದೇವರಿದ್ದಾನೆ. ಆದ್ದರಿಂದ ಹುತ್ತ, ಕಟ್ಟೆಗಳಿಗೆ ಹಾಲನ್ನೆರೆಯುವ ಬದಲು ಹಸಿದವರಿಗೆ ವಿತರಿಸುವುದರಿಂದ ದೇವರ ಕೃಪೆ ದೊರೆಯುತ್ತದೆ. ಪೌಷ್ಟಿಕ ಆಹಾರ ವ್ಯರ್ಥ ಮಾಡಬೇಡಿ, ಮೌಢ್ಯದಿಂದ ಹೊರಬಂದರೆ ವಿಶ್ವವೇ ಸ್ವರ್ಗವಾಗಲಿದೆ ಎಂದು ಅಭಿಪ್ರಾಯಪಟ್ಟರು.


ಜಿಲ್ಲಾ ನ್ಯಾಯಾಧೀಶೆ, ಶ್ರೀಮಠದ ಆಡಳಿತಾಧಿಕಾರಿ ಬಿ.ಎಸ್.ರೇಖಾ ಮಾತನಾಡಿ, ಮಕ್ಕಳಿಗಾಗಿ ಜೀವನವಿಡಿ ಸವಿದು ಕೊನೆಗೆ ನಿರಾಶ್ರಿತರ ಕೇಂದ್ರ, ಆಶ್ರಮ ಸೇರುವುದು ಅತ್ಯಂತ ನೋವಿನ ಸಂಗತಿ. ಇದಕ್ಕೆ ಅವಿಭಕ್ತ ಮರೆಯಾಗಿ, ವಿಭಕ್ತ ಕುಟುಂಬದ ಕಲ್ಪನೆ ಜನರಲ್ಲಿ ಮೂಡುತ್ತಿರುವುದೇ ಮುಖ್ಯ ಕಾರಣ ಎಂದು ಬೇಸರಿಸಿದರು.


ವೃದ್ಧಾಶ್ರಮ ತೆರೆದು ನೂರಾರು ಮಂದಿಗೆ ಆಶ್ರಯ ಕಲ್ಪಿಸಬೇಕೆನ್ನುವ ಆಸೆ ನನ್ನಲ್ಲಿ ಮೂಡಿದೆ. ಅದರಂತೆ ಮುಂದೆ ಸ್ಥಾಪಿಸಿ, ಅಲ್ಲಿಯೇ ವಾಸಿಸಲು ತೀರ್ಮಾನಿಸಿದ್ದೇನೆ ಎಂದರು.


ಶ್ರೀ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ನ್ಯಾಯ, ಧರ್ಮ, ನೀತಿ ನೆಲೆಸಬೇಕು. ಬಸವಾದಿ ಶರಣರು ಸಮಾನತೆಗಾಗಿ ಶ್ರಮಿಸಿದರು. ಆದ್ದರಿಂದ ಎಲ್ಲರನ್ನು ಅತ್ಯಂತ ಗೌರವದಿಂದ ಕಾಣಲು ಮುಂದಾಗಿ ಎಂದು ಸಲಹೆ ನೀಡಿದರು.


ಶ್ರೀ ಶಿವಬಸವ ಸ್ವಾಮೀಜಿ, ಶ್ರೀ ಬಸವಾದಿತ್ಯ ದೇವರು, ಡಾ.ಅವಿನಾಶ್ ಕವಿ, ಎಸ್‌ಜೆಎಂ ಬ್ಯಾಂಕ್‌ನ ವ್ಯವಸ್ಥಾಪಕ ಟಿ.ಕೆ.ರಾಜಶೇಖರ್, ಗ್ರಾಪಂ ಅಧ್ಯಕ್ಷೆ ಗುಂಡಮ್ಮ, ಉಪಾಧ್ಯಕ್ಷ ಮಲ್ಲಿಕಾರ್ಜುನ್, ವೀಣಾ ಸುರೇಶ್‌ಬಾಬು, ಶಂಕರಪ್ಪ, ಎಂ.ಮಹದೇವಯ್ಯ, ತೋಟಪ್ಪ ಉತ್ತಂಗಿ, ಪಿ.ಟಿ.ಜ್ಞಾನಮೂರ್ತಿ, ಪ್ರತಿಭಾ, ಜೀತೇಂದ್ರ ಹುಲಿಕುಂಟೆ ಇತರರಿದ್ದರು.