ಕೋಲಾರ: ತೊಗರಿಗೆ ಅದರಲ್ಲೂ ಹಸಿ ತೊಗರಿಕಾಯಿಗೆ ಬೇಡಿಕೆ ಸೃಷ್ಟಿಯಾಗಿರುವುದರಿಂದ ಔಷಧ ಸಿಂಪಡಿಸಿ ಬೆಳೆ ಕಾಪಾಡಿಕೊಂಡ ರೈತನಿಗೆ ಉತ್ತಮ ಧಾರಣೆ ಸಿಗುತ್ತಿದ್ದು, ಮಾರುಕಟ್ಟೆಯಲ್ಲಿ ಕೆಜಿಗೆ 50ರಿಂದ 60 ರೂ.ಗೆ ಬೆಲೆ ಜಿಗಿತ ಕಂಡಿದೆ.
ಜಿಲ್ಲೆಯಲ್ಲಿ ಹೆಚ್ಚಾಗಿ ರೈತರು ತೊಗರಿಕಾಳು, ಬೇಳೆ ಮಾಡುವ ಬದಲಾಗಿ ತೊಗರಿಯನ್ನು ಹಸಿ ತರಕಾರಿಯಾಗಿ ಬಳಸುತ್ತಾರೆ. ಪ್ರಮುಖವಾಗಿ ಪಾನಿಪುರಿ, ಮಸಾಲೆ ಪುರಿಗೆ ಚಾಟ್ಸ್ ಅಂಗಡಿಗಳಲ್ಲಿ, ಹೋಟೆಲ್, ಮನೆ ಅಡುಗೆಯಲ್ಲಿ ಹಸಿರು ಬಟಾಣಿ ಬದಲು ಹಸಿ ತೊಗರಿಕಾಯಿ ಬಳಸುತ್ತಾರೆ, ಹಸಿ ತೊಗರಿ ಆರೋಗ್ಯಕ್ಕೂ ಒಳ್ಳೆಯದು, ಅಡುಗೆಯಲ್ಲಿ ಬಾಯಿ ರುಚಿಯೂ ಹೆಚ್ಚು. ಹಸಿರು ಬಟಾಣಿಗಿಂತ ಕಡಿಮೆ ಬೆಲೆಗೆ ಸಿಗುವುದರಿಂದ ಅವರೆ ಮಾರುಕಟ್ಟೆಗೆ ಪ್ರವೇಶಿಸುವ ಮುನ್ನ ಹಸಿ ತೊಗರಿಕಾಯಿಗೆ ಸಹಜವಾಗಿಯೇ ಬೇಡಿಕೆ ಕುದುರಿದೆ.
ಮಳೆಗೆ ಬೆಳೆ ಹಾನಿ: ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಹಂಗಾಮಿನಲ್ಲಿ ಸುಮಾರು 1200 ಹೆಕ್ಟೇರ್ ಪ್ರದೇಶದಲ್ಲಿ ರೈತರು ತೊಗರಿ ಬಿತ್ತನೆ ಮಾಡಿದ್ದರು. ಟ್ರಾಕ್ಟರ್‌ನಲ್ಲಿ ಹೊಲ ಉಳುಮೆ, ಎಕರೆಗೆ 2 ಕೆಜಿ ಬೀಜ, ಗೊಬ್ಬರ ಸೇರಿ ಅಂದಾಜು 4ರಿಂದ 5 ಸಾವಿರ ರೂ. ಖರ್ಚು ಬರುತ್ತದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ವರ್ಷವೂ ಉತ್ತಮ ಫಸಲಿನ ನಿರೀಕ್ಷೆ ಇಟ್ಟುಕೊಂಡಿದ್ದರು ರೈತರು.
ಆದರೆ ಜಿಲ್ಲಾದ್ಯಂತ ಕಳೆದ ತಿಂಗಳ ಹಿಂದೆ ಸುರಿದ ವರ್ಷಧಾರೆಗೆ ರಾಗಿ ಇನ್ನಿತರ ಕೃಷಿ ಬೆಳೆಗಳು ನಾಶವಾಗಿವೆ. ಈ ಸಮಯದಲ್ಲಿ ತೊಗರಿ ಹೂವು ಬಿಟ್ಟು ಕಾಯಿ ಕಚ್ಚುವ ಹಂತದಲ್ಲಿತ್ತು. ಭಾರಿ ಮಳೆಗೆ ಹೂವು ಉದುರಿತಲ್ಲದೆ ಗೂಡು ಕಟ್ಟಿ ಕೊಳೆತು ಹೋಗಿದೆ. ನಿರಂತರ ಮಳೆಯಿಂದಾಗಿ ರೈತನಿಗೆ ಔಷಧ ಸಿಂಪಡಿಸುವುದು ಕಷ್ಟವಾದ್ದರಿಂದ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆಯೂ ಹಾನಿಗೀಡಾಗಿದ್ದು, ಬೆಳೆ ನಷ್ಟಕ್ಕೆ ಸರ್ಕಾರ ನೀಡುವ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ ರೈತರು.
ಉಳಿದದ್ದೇ ಅಲ್ಪ: ಅತಿವೃಷ್ಟಿಯ ನಡುವೆಯೂ ಕೆಲ ರೈತರು ಕಾಲ ಕಾಲಕ್ಕೆ ಔಷಧ ಸಿಂಪಡಿಸಿ ತೊಗರಿ ಬೆಳೆ ಉಳಿಸಿಕೊಂಡಿದ್ದರಾದರೂ ಹೆಚ್ಚೇನೂ ಇಲ್ಲ. ಇದೀಗ ತೊಗರಿ ಬೆಳೆದು ನಿಂತಿದ್ದು, ಹಸಿತೊಗರಿಯನ್ನು ತರಕಾರಿಯಾಗಿ ಬಳಸುವುದಾದಲ್ಲಿ ಗಿಡದಿಂದ ಕಾಯಿ ಬಿಡಿಸಿ ಮಾರಾಟಕ್ಕೆ ಹದವಾಗಿದೆ. ಈಗಾಗಲೆ ಕೆಲ ರೈತರು ಹಸಿ ತೊಗರಿಕಾಯಿ ಬಿಡಿಸಿ, ಸಂತೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಕೆಜಿಗೆ 50 ರೂ.ಗೆ ಮಾರಾಟವಾಗುತ್ತಿದ್ದರೆ, ಕೆಜಿಗೆ 50ರಂತೆ ಸಿಕ್ಕರೂ ಗಿಡದಿಂದ ಕಾಯಿ ಕೀಳುವ, ಮಾರುಕಟ್ಟೆಗೆ ಸಾಗಿಸುವ ಕೂಲಿ ವೆಚ್ಚ ಸೇರಿ ಸುಮಾರು 1300 ರೂ. ಖರ್ಚು ಬಂದರೂ ರೈತನಿಗೆ ಬೆಳೆದದ್ದಕ್ಕೆ ನಷ್ಟವಿಲ್ಲ. ಇನ್ನು ಚಿಲ್ಲರೆ ಮಾರಾಟಗಾರರು 15ರಿಂದ 25 ರೂ. ಲಾಭ ಇಟ್ಟುಕೊಂಡು 70ರಿಂದ 80 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ.
ಪಾಕಶಾಲೆಗೆ ಎಂಟ್ರಿ: ಒಟ್ಟಾರೆ ಹಸಿ ತೊಗರಿಕಾಯಿಗೆ ಸದ್ಯದ ಮಟ್ಟಿಗೆ ರೈತನಿಗೆ ಉತ್ತಮ ಧಾರಣೆ ಸಿಗುತ್ತಿದೆ ಎಂಬುದಷ್ಟೇ ಸಮಾಧಾನದ ಸಂಗತಿ. ಗ್ರಾಹಕರ ದೃಷ್ಟಿಯಲ್ಲಿ ನೋಡುವುದಾದಲ್ಲಿ ಎಲ್ಲ ಹಸಿ ತೊಗರಿಕಾಯಿಯ ದರವೂ ಸ್ವಲ್ಪ ದುಬಾರಿಯೇ. ಆದರೂ ಅವರೆಕಾಯಿ ಸೊಗಡು ಸವಿಯುವ ಮುನ್ನ ಹಸಿ ತೊಗರಿಕಾಯಿ ಬಾಯಿಗೆ ರುಚಿ ನೀಡುವ ತರಕಾರಿಯಾಗಿ ಈಗಾಗಲೆ ಪಾಕಶಾಲೆಗೆ ಎಂಟ್ರಿ ಕೊಟ್ಟಿದೆ.
ಒಂದೂವರೆ ಎಕರೆಯಲ್ಲಿ ತೊಗರಿ ಬಿತ್ತನೆ ಮಾಡಿದ್ದೆ. ಕಳೆದ ತಿಂಗಳು ಸುರಿದ ಭಾರಿ ಮಳೆಗೆ ಅನೇಕ ಕಡೆ ಬೆಳೆ ನಾಶವಾಗಿದೆ. ಇದರ ನಡುವೆಯೂ ಔಷಧ ಸಿಂಪಡಿಸಿ ಬೆಳೆ ಕಾಪಾಡಿಕೊಂಡಿದ್ದರಿಂದ ಫಸಲು ಬಂದಿದ್ದು, ಮಾರುಕಟ್ಟೆಯಲ್ಲಿ ಕೆಜಿಗೆ ಗರಿಷ್ಠ 50 ರೂ.ಗೆ ಮಾರಾಟ ಕಾಣುತ್ತಿದೆ. ಬೈರೆಡ್ಡಿ, ರೈತ, ತೊಟ್ಲಿ ಗ್ರಾಮ