ಎನ್.ಆರ್.ಪುರ ತಾಲೂಕು ಕೃಷಿಕ ಸಮಾಜದಿಂದ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿ ಕುಲಪತಿ ಡಾ. ಆರ್.ಸಿ.ಜಗದೀಶ್‌ಗೆ ಮನವಿ ಸಲ್ಲಿಸಿದರು. ಪಿ.ಕೆ.ಬಸವರಾಜ್, ಕೆ.ಎನ್.ಗೋಪಾಲ ಹೆಗ್ಡೆ, ಬಿ.ಕೆ.ಜಾನಕೀರಾಂ, ಡಾ.ನಾಗರಾಜಪ್ಪ ಅಡಿವಪ್ಪರ್, ಎಂ.ಜಿ.ರೋಹಿತ್ ಇದ್ದರು. 
ಜಿಲ್ಲೆ

ಹಸಿ ಅಡಕೆ ಸಂಗ್ರಹಿಸಲು ಸಂಶೋಧನೆ ನಡೆಸಿ

ಎಸ್.ಎನ್.ರವೀಂದ್ರ

ಎನ್.ಆರ್.ಪುರ: ಕೊಯ್ಲಿಗೆ ಬಂದ ಹಸಿ ಅಡಕೆ ಕೆಡದಂತೆ ವೈಜ್ಞಾನಿಕವಾಗಿ ಶೇಖರಣೆ ಮಾಡಲು ಸಂಶೋಧನೆ ನಡೆಸುವಂತೆ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯದ ಕುಲಪತಿ ಡಾ. ಆರ್.ಸಿ.ಜಗದೀಶ್ ಅವರಿಗೆ ಕೃಷಿಕರ ತಂಡದಿಂದ ಮನವಿ ಸಲ್ಲಿಸಲಾಗಿದೆ ಎಂದು ಜಿಲ್ಲಾ ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಪಿ.ಕೆ.ಬಸವರಾಜಪ್ಪ ತಿಳಿಸಿದರು.

ನಮ್ಮ ಮನವಿಗೆ ಸ್ಪಂದಿಸಿ ಕುಲಪತಿ ಡಾ. ಆರ್.ಸಿ.ಜಗದೀಶ್ ಮಾತನಾಡಿ, ಅಡಕೆ ಬೆಳೆಗಾರರು ಅಡಕೆ ಸಂಸ್ಕರಣೆಯಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಅಕಾಲಿಕ ಮಳೆ, ಕೃಷಿ ಕಾರ್ಮಿಕರ ಕೊರತೆಯಿಂದ ನಷ್ಟ ಅನುಭವಿಸುತ್ತಿದ್ದಾರೆ. ಹಸಿ ಅಡಕೆ ಶೇಖರಣೆಗೆ ಸಂಶೋಧನೆ ಮಾಡಲು ಅಡಕೆ ಬೆಳೆಗಾರರೇ ಬಯಸುತ್ತಿರುವುದು ಹಾಗೂ ರೈತರ ಮುಂದಾಲೋಚನೆ ಕೃಷಿ ಸಂಶೋಧನಾ ಕೇಂದ್ರಕ್ಕೂ ಹೆಮ್ಮೆಯಾಗಿದೆ. ವಿಶ್ವ ವಿದ್ಯಾಲಯದ ಆಶಯವೂ ಇದೇ ಆಗಿದೆ. ರೈತರು ಆರ್ಥಿಕವಾಗಿ ಸಬಲರಾಗಬೇಕು ಹಾಗೂ ಸ್ವಾವಲಂಬಿಗಳಾಗಿ ಬದುಕಬೇಕು. ಹಸಿ ಅಡಕೆಯನ್ನು ವೈಜ್ಞಾನಿಕವಾಗಿ ಶೇಖರಿಸಿಟ್ಟರೆ ಇದರ ನೈಜತೆ ಎಷ್ಟು ದಿನ ಉಳಿಯಬಲ್ಲದು ಎಂಬುದರ ಬಗ್ಗೆ ಸಂಶೋಧನೆ ನಡೆಸಲು ಅಡಕೆ ಸಂಶೋಧನಾ ತಂಡದ ಮುಖ್ಯಸ್ಥ ಡಾ. ನಾಗರಾಜಪ್ಪ ಅವರಿಗೆ ಸೂಚಿಸುವುದಾಗಿ ಭರವಸೆ ನೀಡಿದರು ಎಂದು ವಿವರಿಸಿದರು.

ಎನ್.ಆರ್.ಪುರ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಪಿ.ಕೆ.ಬಸವರಾಜಪ್ಪ, ಶೃಂಗೇರಿ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಕೆ.ಎನ್.ಗೋಪಾಲ ಹೆಗ್ಡೆ, ಎನ್.ಆರ್.ಪುರ ತಾಲೂಕು ಕೃಷಿಕ ಸಮಾಜದ ಮಾಜಿ ಅಧ್ಯಕ್ಷ ಬಿ.ಕೆ.ಜಾನಕೀರಾಂ, ವಿಜ್ಞಾನಿ ಡಾ. ನಾಗರಾಜಪ್ಪ ಅಡಿವಪ್ಪರ್, ಎನ್.ಆರ್.ಪುರ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಂ.ಜಿ.ರೋಹಿತ್ ಇದ್ದರು ಎಂದು ಮಾಹಿತಿ ನೀಡಿದರು.