ಹೊಸಪೇಟೆ: ತಾಲೂಕಿನ ಹೊಸೂರು ಗ್ರಾಮದ ಬಳಿ ತುಂಗಭದ್ರಾ ನದಿಯಲ್ಲಿ ದೇವನಾಗರಿ ಲಿಪಿಯಲ್ಲಿರುವ ಶಿಲಾಶಾಸನ ಪತ್ತೆಯಾಗಿದೆ.
ವನ್ಯಜೀವಿ ಸಂಶೋಧಕ ಡಾ.ಸಮದ್ ಕೊಟ್ಟೂರು ಹಾಗೂ ತಂಡ ವಿಜಯನಗರ ಕಾಲದ ಆಣೆಕಟ್ಟಿನ ಸುತ್ತಮುತ್ತ ಇರುವ ಪ್ರಾಣಿ, ಪಕ್ಷಿ ಹಾಗೂ ಇತರ ಜೀವರಾಶಿಗಳ ಸಂಶೋಧನೆ ಮಾಡುವ ಸಂದರ್ಭದಲ್ಲಿ ನದಿಯ ಬಂಡೆಯೊಂದರ ಮೇಲೆ ಈ ಶಾಸನ ಪತ್ತೆಯಾಗಿದೆ.
ಈ ನದಿಯ ನಡುಗಡ್ಡೆಯಲ್ಲಿ ಪುರಾತನ ದೇಗುಲಗಳಿದ್ದು, ಬಹುಶಃ ಇದೊಂದು ಜನವಸತಿ ಪ್ರದೇಶವಾಗಿದ್ದಿರಬಹುದು. ಹಾಗಾಗಿ ಇಲ್ಲಿ ಆಂಜನೇಯ ದೇವಸ್ಥಾನ, ಈಶ್ವರ ದೇವಸ್ಥಾನ ಮುಂತಾದ ದೇಗುಲಗಳಿವೆ. ಇವುಗಳಲ್ಲಿ ಆಂಜಿನೇಯ ದೇವಸ್ಥಾನ ಮತ್ತು ಈಶ್ವರ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸುತ್ತಿದ್ದು, ಉಳಿದ ದೇಗುಲಗಳು ಪಾಳು ಬಿದ್ದಿವೆ. ಈ ಪಾಳು ದೇಗುಲಗಳ ರಚನೆ ವಿನ್ಯಾಸವು ವಿಜಯನಗರ ಕಾಲದ ಸ್ಮಾರಕಗಳನ್ನು ಹೋಲುತ್ತವೆ.
ನದಿಯ ಮಧ್ಯೆ ಇರುವ ಆಂಜನೇಯ ಹಾಗೂ ಈಶ್ವರ ದೇವಸ್ಥಾನದ ಎದುರು ಇರುವ ನದಿಯ ಪಕ್ಕದ ಬೃಹತ್ ಬಂಡೆಯ ಇಳಿಜಾರಿನ ಮೇಲೆ ಚೌಕಾಕಾರದಲ್ಲಿ ಈ ಶಾಸನವನ್ನು ಕೆತ್ತಲಾಗಿದೆ. ಎರಡು ಅಡಿ ಅಗಲ ಮೂರು ಅಡಿ ಉದ್ದವಿರುವ ಈ ಶಾಸನದಲ್ಲಿ 17 ಸಾಲುಗಳಿವೆ. ಮೇಲಿನ ಎಡಭಾಗದಲ್ಲಿ ಸೂರ್ಯ, ಮಧ್ಯೆ ಶಿವಲಿಂಗ ಬಲಕ್ಕೆ ಚಂದ್ರನ ಚಿತ್ರವಿದೆ. ಶತಮಾನಗಳಿಂದ ನೀರಿನಲ್ಲಿ ಮುಳುಗಿದ್ದು, ಬಿಸಿಲು, ಮಳೆ, ಚಳಿ, ಗಾಳಿಗೆ ಮೈಯೊಡ್ಡಿರುವ ಕಾರಣ ಈ ಶಾಸನ ಕೆಲವು ಅಕ್ಷರಗಳು ಸವೆದು ಹೋಗಿವೆ. ಈ ಶಿಲಾ ಶಾಸನದ ಮೇಲೆಯೇ ಕಾಲುದಾರಿಯಿದ್ದು ಬೇಸಿಗೆಯಲ್ಲಿ ಹಾಗೂ ನದಿಯಲ್ಲಿ ನೀರು ಕಡಿಮೆಯಾದ ಸಂದರ್ಭದಲ್ಲಿ ನೂರಾರು ಜನರು ಇಲ್ಲಿನ ನದಿಯಲ್ಲಿ ಸ್ನಾನ ಮಾಡಲು ಬರುತ್ತಾರೆ.
ಹಂಪಿ ಪ್ರದೇಶವು ವಿಜಯನಗರ ಸಾಮ್ರಾಜ್ಯಕ್ಕೂ ಅನೇಕ ಶತಮಾನಗಳ ಮೊದಲಿನಿಂದಲೂ ವಿವಿಧ ಸಂಸ್ಕೃತಿಗಳ ನೆಲೆಯಾಗಿದೆ. ವಿಜಯನಗರ ಹಾಗೂ ಕೊಪ್ಪಳದಲ್ಲಿ ಆಶೋಕನ ಶಿಲಾ ಶಾಸನವಿದೆ. ಅದೇ ರೀತಿ ಹಂಪಿಯ ನದಿಯುದ್ದಕ್ಕೂ ಇರುವ ಕಲ್ಲುಬಂಡೆಗಳ ಮೇಲೆ ಅನೇಕ ಶಾಸನಗಳಿವೆ. ಆದರೆ ಜನರ ಇಂತಹ ಶಾಸನಗಳಿಗೆ ಗಮನ ಕೊಡದೆ ನಾಶ ಮಾಡಿ ನಮ್ಮ ಇತಿಹಾಸದ ಪುಟಗಳನ್ನೇ ನಶಿಸಿಹಾಕುತ್ತಿದ್ದಾರೆ ಎಂದು ಡಾ.ಸಮದ್ ಕೊಟ್ಟೂರು ವಿಷಾದಿಸಿದರು.
ಅವರು ಇತ್ತೀಚಿಗೆ ಹುಲಿಗಿ ಆಣೆಕಟ್ಟಿನ ಬಳಿ 12 ಅಡಿ ಉದ್ದದ ಶಾಸನವನ್ನು ನದಿಯ ಮಧ್ಯೆ ಇರುವ ಬಂಡೆಯ ಮೇಲೆ ಪತ್ತೆ ಮಾಡಿ ಪುರಾತತ್ವ ಇಲಾಖೆಯ ಗಮನ ಸೆಳೆದಿದ್ದರು. ಪ್ರಸ್ತುತ ಹೊಸೂರು ಶಿಲಾ ಶಾಸನವು ಅತ್ಯಂತ ಪುರಾತನ ಶಾಸನವಾಗಿದ್ದು ಇದರಿಂದ ಇಲ್ಲಿನ ಧಾರ್ಮಿಕ ಸಂಸ್ಕೃತಿ ಹಾಗೂ ಆಳ್ವಿಕೆಯ ಕುರಿತು ಬೆಳಕು ಚೆಲ್ಲವುದು ಎಂದು ಆಶಿಸಿ, ಸದರಿ ಶಾಸನದ ಅರ್ಥ ವಿವರಣೆ ನೀಡಿ ಅದನ್ನು ಸೂಕ್ತವಾಗಿ ಸಂರಕ್ಷಿಸಲು ಭಾರತೀಯ ಪುರಾತತ್ವ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಸಂಶೋಧಕ ಡಾ.ಸಮದ್ ಕೊಟ್ಟೂರು ತಿಳಿಸಿದರು.