ಜಿಲ್ಲೆ

ಹವ್ಯಕ ಪ್ರತಿಭಾ ಪುರಸ್ಕಾರ ಜ.21 ಕ್ಕೆ

ಶಿರಸಿ: ಅಖಿಲ ಹವ್ಯಕ ಮಹಾ ಸಭಾದಿಂದ ಹವ್ಯಕ ಸಮಾಜ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಜ.21ರಂದು ಬೆಳಗ್ಗೆ 9.30 ರಿಂದ ಸಾಯಂಕಾಲ 6 ಗಂಟೆಯವರೆಗೆ ನಗರದ ಲಯನ್ಸ ಶಾಲೆಯ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಮಹಾ ಸಭಾದ ನಿರ್ದೇಶಕ ಶಶಾಂಕ ಹೆಗಡೆ ಶೀಗೇಹಳ್ಳಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಭೆಗಳ ಅನಾವರಣ, ಸಾಧನೆಗೆ ಸನ್ಮಾನ ವಿದ್ಯಾ ಪ್ರೋತ್ಸಾಹ ಧನ ವಿತರಣೆಯ ಕಾರ್ಯಕ್ರಮಗಳು ನಡೆಯಲಿವೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಕಾಸರಗೋಡು, ಬೆಂಗಳೂರು ಜಿಲ್ಲೆಗಳಲ್ಲಿ ಪ್ರತ್ಯೇಕ ಸ್ಪರ್ಧೆ ನಡೆಸಿ ವಿಜೇತರಾದವರನ್ನು ಬೆಂಗಳೂರಿನಲ್ಲಿ ಆಯೋಜಿಸುವ ಪ್ರತಿಬಿಂಬ ಮೆಘಾ ಫೈನಲ್‌ಗೆ ಆಹ್ವಾನಿಸಿ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶ ಮಹಾಸಭೆಯದ್ದಾಗಿದೆ ಎಂದರು.
ಪ್ರಾಂತ್ಯವಾರು ಸ್ಪರ್ಧೆಗಳನ್ನು ನಡೆಸಿ, ಪ್ರಥಮ, ದ್ವಿತೀಯ ಬಹುಮಾನ ಪಡೆದವರನ್ನು ಬೆಂಗಳೂರಿನ ಸ್ಪರ್ಧೆಗೆ ಪರಿಗಣಿಸಲಾಗುವುದು .6 ವರ್ಷದ ಒಳಗಿನ ಮಕ್ಕಳಿಗೆ ಛದ್ಮವೇಷ, ಶ್ಲೋಕ ಪಠಣ, ಚೆಂಡು ಎಸೆತ, 7 ರಿಂದ12 ವರ್ಷದೊಳಗಿನ ಮಕ್ಕಳಿಗೆ ಭಗವದ್ಗೀತೆ 10ನೇ ಅಧ್ಯಾಯದ 15 ಶ್ಲೋಕಗಳು, ಹಬ್ಬದ ಕುರಿತಾದ ಚಿತ್ರಕಲೆ, ಕೆರೆದಡ, 13 ರಿಂದ 18 ವರ್ಷದವರೆಗೆ ಭಾವಗೀತೆ, ಆಶು ಭಾಷಣ, ಸಂಗೀತ ಖುರ್ಚಿ, 18 ವರ್ಷ ಮೇಲ್ಪಟ್ಟು ಸಾಮಾನ್ಯ ವಿಭಾಗದಲ್ಲಿ ಹವಿ ರುಚಿ ಹಲ್ವಾ, 3 ಜನಕ್ಕೆ ಅವಕಾಶ ಇರುವ ಸಂಪ್ರದಾಯ ಗೀತೆ, ಚುಕ್ಕಿ ರಂಗೋಲಿ, ಆರತಿತಟ್ಟೆ, ಪಾಯಸ ಕುಡಿಯುವ ಸ್ಪರ್ಧೆ ನಡೆಯಲಿದೆ. ಚಿತ್ರಕಲೆ ಸ್ಪರ್ಧೆಗೆ ಬಣ್ಣ ಸ್ಪರ್ಧಗಳೇ ತರಬೇಕು, ಮನೆಯಲ್ಲಿ ಹಲ್ವಾ, ಆರತಿ ತಟ್ಟೆ ತಯಾರಿಸಿ ತರಬಹುದು, ಎಲ್ಲ ಸ್ಪರ್ಧೆಗಳಿಗೆ ಹವ್ಯಕರಿಗೆ ಮಾತ್ರ ಅವಕಾಶ ಎಂದು ಮಾಹಿತಿ ನೀಡಿದರು.
ಸಭಾ ಕಾರ್ಯಕ್ರಮ
ಶಾಸಕ ಭೀಮಣ್ಣ ನಾಯ್ಕ ಕಾರ್ಯಕ್ರಮ ವನ್ನು ಉದ್ಘಾಟಿಸುವರು. ಮಹಾ ಸಭಾದ ಉಪಾಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಅಧ್ಯಕ್ಷತೆ ವಹಿಸುವರು. ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ, ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ, ಲಯನ್ಸ ಉಪಾಧ್ಯಕ್ಷ ಕೆ.ಬಿ.ಲೋಕೇಶ ಹೆಗಡೆ ಪ್ರಗತಿ ಭಾಗವಹಿಸುವರು. ಸಾಯಂಕಾಲ ೪ ಕ್ಕೆ ಭಾರ್ಗವ ಹೆಗಡೆ ತಂಡದಿಂದ ಸಿತಾರ ವಾದನ, ನಂತರ ಸಮಾರೋಪ ಸಮಾರಂಭ ನಡೆಯಲಿದೆ. ಸಭಾದ ಉಪಾಧ್ಯಕ್ಷ ಶ್ರೀಧರ ಜೆ.ಭಟ್ಟ ಕೆಕ್ಕಾರು ಅಧ್ಯಕ್ಷತೆ ವಹಿಸುವರು. ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಶಿವರಾಮ ಹೆಬ್ಬಾರ್, ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಲಯನ್ಸ್ ಅಧ್ಯಕ್ಷ ಪ್ರಭಾಕರ ಹೆಗಡೆ ಭಾಗವಹಿಸಲಿದ್ದಾರೆ. ಇದೇ ವೇಳೆ ಮಕ್ಕಳ ತಜ್ಞ ಡಾ. ಎನ್.ಆರ್.ಹೆಗಡೆ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಾರಾಯಣ ಪಿ.ಭಾಗವತ್, ಕೃಷಿಕ, ಸಿತಾರ ವಾದಕ ಭಾರ್ಗವ ಹೆಗಡೆ ಶೀಗೇಹಳ್ಳಿ ಹಾಗೂ ಯಕ್ಷಗಾನ ಕಿಶೋರ ಕಲಾವಿದೆ ತುಳಸಿ ಹೆಗಡೆ ಅವಳನ್ನು ಸಮ್ಮಾನಿಸಲಾಗುತ್ತಿದೆ ಎಂದು ತಿಳಿಸಿದರು. ಪ್ರತಿಬಿಂಬ ಕಾರ್ಯಕ್ರಮದ ಸಂಚಾಲಕ ವಿ.ಎಂ.ಹೆಗಡೆ ಹಲಗೇರಿ, ಕೆ.ಬಿ.ಲೋಕೇಶ ಹೆಗಡೆ ಸುದ್ದಿಗೋಷ್ಠಿಯಲ್ಲಿದ್ದರು.