ಅರಕಲಗೂಡಿನಲ್ಲಿ ಹಳ್ಳಿಮೈಸೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಎ.ಡಿ. ಚಂದ್ರಶೇಖರ್ ಅವರನ್ನು ಪಕ್ಷೇತರ ಅಭ್ಯರ್ಥಿ ಎಂ.ಟಿ. ಕೃಷ್ಣೇಗೌಡ ಸ್ವಾಗತಿಸಿದರು. ಬಿ.ಜೆ. ರಾಮೇಗೌಡ, ಕೆ.ಕೆ. ನಾಗರಾಜ್, ಪುಟ್ಟಸ್ವಾಮಿ, ಮಧು ಇತರರಿದ್ದರು. 
ಜಿಲ್ಲೆ

ಹಳ್ಳಿಮೈಸೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೀನಾಮೆ

ಅರಕಲಗೂಡು: ಕಾಂಗ್ರೆಸ್ ಅಭ್ಯರ್ಥಿ ಶ್ರೀಧರ್‌ಗೌಡ ಅವರ ವರ್ತನೆಯಿಂದ ಬೇಸತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಬಂಡಾಯ ಕಾಂಗ್ರೆಸ್ ಅಭ್ಯರ್ಥಿ ಎಂ.ಟಿ. ಕೃಷ್ಣೇಗೌಡ ಅವರಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಹಳ್ಳಿಮೈಸೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಡಿ. ಚಂದ್ರಶೇಖರ್ ತಿಳಿಸಿದರು.

ಕೆಲ ತಿಂಗಳ ಹಿಂದೆ ಶ್ರೀಧರ್‌ಗೌಡ ನನ್ನ ಬಳಿ ಬಂದು ಬೆಂಬಲ ನೀಡಬೇಕೆಂದು ಮನವಿ ಮಾಡಿದಾಗ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿ ಟಿಕೆಟ್ ಕೊಡಿಸುವ ತನಕ ಜತೆಗಿದ್ದೆ. ಆದರೆ, ನಾಮಪತ್ರ ಸಲ್ಲಿಸುವ ವೇಳೆ ಕೆಲ ಅಹಿತಕರ ಘಟನೆಗಳು ಘಟಿಸುವ ಮೂಲಕ ಸಮುದಾಯಕ್ಕೆ ನೋವಾಗುವ ರೀತಿ ವರ್ತಿಸಿದ್ದರಿಂದ ಮನನೊಂದು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಮಂಗಳವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ರಾಜೀನಾಮೆ ಪತ್ರ ಪ್ರದರ್ಶಿಸಿದರು.

ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಜಾತಿ ವಿಷಯ ಪ್ರಸ್ತಾಪಿಸಿದಾಗ ಮನಸ್ಸಿಗೆ ತುಂಬಾ ಬೇಸರವಾಯಿತು. ಹಾಗಾಗಿ ನಾನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿದ್ದರೆ ಪ್ರಚಾರ ಮಾಡಬೇಕಾಗುತ್ತದೆ ಎಂದು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆಯೇ ಹೊರತು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕಲ್ಲ ಎಂದು ಸ್ಪಷ್ಟಪಡಿಸಿದರು.

ಪಕ್ಷೇತರ ಅಭ್ಯರ್ಥಿ ಎಂ.ಟಿ. ಕೃಷ್ಣೆಗೌಡ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಶ್ರೀಧರ್ ಗೌಡರಿಗೆ ಟಿಕೆಟ್ ನೀಡಿದ್ದಕ್ಕೆ ನನಗೆ ಬೇಸರವಿಲ್ಲ. ಆದರೆ, ನನ್ನನ್ನು ಕರೆದು ಈ ಬಾರಿ ಶ್ರೀಧರ್‌ಗೌಡರಿಗೆ ಟಿಕೆಟ್ ನೀಡುತ್ತಿದ್ದೇವೆ. ಗೆಲ್ಲಿಸಿಕೊಂಡು ಬರುವಂತೆ ಹೇಳದೆ ಮಧ್ಯರಾತ್ರಿ ನನ್ನನ್ನು ಬೀದಿಯಲ್ಲಿ ನಿಲ್ಲಿಸಿ ಅಪಮಾನಿಸಿ ವಾಪಸ್ ಕಳುಹಿಸಿದರು. ಹಳ್ಳಿಮೈಸೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್, ಜಿಲ್ಲಾ ಕಾರ್ಯದರ್ಶಿ ಶಿವಣ್ಣ ಸೇರಿದಂತೆ ಹಲವಾರು ಮುಖಂಡರು ರಾಜೀನಾಮೆ ನೀಡಿ ನನಗೆ ಬೆಂಬಲ ನೀಡಿದ್ದಾರೆ. ಇದರಿಂದ ನನಗೆ ಆನೆ ಬಲ ಬಂದಂತಾಗಿದೆ ಎಂದರು.

ಕಾಂಗ್ರೆಸ್ ಜಿಲ್ಲಾ ಘಟಕದ ಕಾರ್ಯದರ್ಶಿ ಕಾಡನೂರು ಶಿವಣ್ಣ ಮಾತನಾಡಿದರು. ಇದಕ್ಕೂ ಮುನ್ನ ಅನಕೃ ವೃತ್ತದಲ್ಲಿ ಎ.ಡಿ. ಚಂದ್ರಶೇಖರ್ ಅವರನ್ನು ಸ್ವಾಗತಿಸಲಾಯಿತು. ಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ಎಂ.ಟಿ. ಕೃಷ್ಣೇಗೌಡರ ಸಮ್ಮುಖದಲ್ಲಿ ಹಲವಾರು ಕಾರ್ಯಕರ್ತರು, ಮುಖಂಡರನ್ನು ಸ್ವಾಗತಿಸಲಾಯಿತು.