ವಿಜಯಪುರ: ಹಳ್ಳಿಗಳನ್ನು ನಾವು ನಿರ್ಲಕ್ಷಿಸಿದರೆ ಉಳಿಗಾಲವಿಲ್ಲ. ನಮ್ಮೆಲ್ಲರ ಅಳಿವು, ಉಳಿವು ಹಳ್ಳಿಗಳಲ್ಲಿದೆ. ಆದ್ದರಿಂದ ನಾವೂ ಅವನ್ನು ಉಳಿಸಿದರೆ, ಅವು ನಮ್ಮನ್ನು ಉಳಿಸುತ್ತವೆ ಎಂದು ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಗೌರವ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ ಹೇಳಿದರು.
ಪಟ್ಟಣದ ಜ್ಞಾನಗಂಗಾ ಪ್ರಥಮದರ್ಜೆ ಕಾಲೇಜು ಆವರಣದಲ್ಲಿ ಭಾರತ ಸರ್ಕಾರದ ಯುವಜನ ಸೇವಾ ಮತ್ತು ಕ್ರೀಡಾ ಸಚಿವಾಲಯ, ಬೆಂಗಳೂರು ಗ್ರಾಮಾಂತರ ಜಿಲ್ಲಾ ನೆಹರು ಯುವ ಕೇಂದ್ರ, ರಾಷ್ಟ್ರೀಯ ಸೇವಾ ಯೋಜನಾ ಕೋಶ, ಕರ್ನಾಟಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಹಾಗೂ ಪಟ್ಟಣದ ಕಿರಣ ಯುವತಿ ಮಂಡಳಿ ಸೋಮವಾರ ಏರ್ಪಡಿಸಿದ್ದ ದೇವನಹಳ್ಳಿ ತಾಲೂಕು ನೊಂದಾಯಿತ ಯುವಕ ಸಂಘ ಹಾಗೂ ಯುವತಿ ಮಂಡಳಿ ಮತ್ತು ಯುವ ಸ್ವಯಂಸೇವಕರಿಗೆ ಒಂದು ದಿನದ ಸ್ವಚ್ಛ ಗ್ರಾಮ ಹಸಿರು ಗ್ರಾಮ ಯೋಜನೆಯ ಬಗ್ಗೆ ಯುವ ಸಮುದಾಯಕ್ಕೆ ತರಬೇತಿ ಕಾರ್ಯಾಗಾರ ಹಾಗೂ ಕೋವಿಡ್-19 ವಿರುದ್ಧ ಹೋರಾಟ, ಸಾಮಾಜಿಕ ಜಾಗೃತಿ ಕ್ರಿಯಾಶೀಲ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಯುವಜನತೆ ಹಳ್ಳಿಯನ್ನು ಬಿಟ್ಟು ನಗರಗಳಿಗೆ ವಲಸೆ ಹೋಗುವ ಪ್ರಮಾಣ ಹೆಚ್ಚಾಗುತ್ತಿದೆ. ನಗರ ಪ್ರದೇಶಗಳ ಮೇಲಿನ ಮೋಹ, ಉದ್ಯೋಗಾವಕಾಶ, ಅತಿ ಬೇಗ ಹಣ ಗಳಿಸುವ ಆಸೆಗಳೇ ಇದಕ್ಕೆ ಕಾರಣ. ಆದರೆ ಹಳ್ಳಿ ಜೀವನ ಎಂದರೆ ಪ್ರಕೃತಿಯ ಸವಲತ್ತುಗಳನ್ನು ಬಳಸಿಕೊಂಡು ದುಡಿದು ಸಂಪಾದಿಸುವ ನೆಮ್ಮದಿಯ ಬದುಕು. ಹಾಗಾಗಿ ಗ್ರಾಮಗಳ ಉದ್ಧಾರವೇ ದೇಶದ ಉದ್ದಾರ ಎಂದರು.
ಜ್ಞಾನಗಂಗಾ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲೆ ಬಿ.ವಿ. ಭಾರತಿ ಮಾತನಾಡಿ, ಮಹಾತ್ಮ ಗಾಂಧಿ ಅವರ ಸ್ವಚ್ಛ ಭಾರತದ ಕನಸನ್ನು ಸಾಕಾರಗೊಳಿಸಲು ದೇಶದಾದ್ಯಂತ ಸ್ವಚ್ಛಭಾರತ ಅಭಿಯಾ ಆರಂಭಿಸಲಾಗಿದೆ ಎಂದು ತಿಳಿಸಿದರು.
ಸ್ವಚ್ಛ ಗ್ರಾಮ ಹಸಿರು ಗ್ರಾಮ ಎಂಬ ವಿನೂತನ ತರಬೇತಿ ಹಮ್ಮಿಕೊಳ್ಳಲಾಗಿದೆ. ಗ್ರಾಮೀಣ ಪ್ರದೇಶದ ಜನರಿಗೆ ಕಸ ನಿರ್ವಹಣೆ ಮತ್ತು ಪರಿಸರ ಸಂರಕ್ಷಣೆಯ ಸಂಕ್ಷಿಪ್ತ ತರಬೇತಿಯನ್ನು ರಾಜ್ಯ ರಾಷ್ಟ್ರೀಯ ಯುವ ಯೋಜನೆಯ ಸಂಯೋಜಕ ಡಾ. ವಿ. ಪ್ರಶಾಂತ ನೀಡಿದರು.
ಸಂಪನ್ಮೂಲ ವ್ಯಕ್ತಿ ಎಸ್.ಎ. ನಾಗೇಶ್ ಮಾತನಾಡಿದರು. ಯುವ ಸಮುದಾಯಕ್ಕೆ ಚಿತ್ರಕಲೆ ಪ್ರಬಂಧ ಮತ್ತು ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಿಲಾಗಿತ್ತು. ಪ್ರಬಂಧ ಸ್ಪರ್ಧೆಯಲ್ಲಿ ಚಂದನ್ ಪ್ರಥಮ ಗಳಿಸಿದರೆ, ಜಯಶ್ರೀ, ರಕ್ಷಿತಾ ಕ್ರಮವಾಗಿ 2 ಮತ್ತು 3ನೇ ಸ್ಥಾನ ಪಡೆದರು. ಚಿತ್ರಕಲಾ ಚಂದನ್ ಪ್ರಥಮ ಸ್ಥಾನ ಪಡೆದರೆ, ಜಯಶ್ರೀ ದ್ವಿತೀಯ, ಐಶ್ವರ್ಯ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟರು. ವಿಜೇತರಿಗೆ ಪ್ರಶಸ್ತಿಪತ್ರ ಮತ್ತು ಬಹುಮಾನಗಳನ್ನು ನೀಡಲಾಯಿತು.
ಕಾಲೇಜಿನ ಕಾರ್ಯದರ್ಶಿ ಬಿ.ಕೆ. ನಾರಾಯಣಸ್ವಾಮಿ, ಸಮುದಾಯ ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕಿ ಎಂ. ಸುಮಾ, ಉಪನ್ಯಾಸಕರಾದ ಎಂ. ಅಮರೇಶ್, ಸಿ. ಹರಿಲಕ್ಷ್ಮೀ, ಸಿ.ಎಂ. ಹರ್ಷಿತಾ, ಸಿ. ನಿವೇದಿತಾ, ಎಚ್.ವಿ. ರಕ್ಷಿತಾ, ಮುರಳಿ, ಶ್ರೀನಿವಾಸ್, ಸ್ವಯಂಸೇವಕರಾದ ಸಿ. ವರುಣ್, ಪಿ. ಪ್ರಜ್ವಲ್ ಮತ್ತಿತರರಿದ್ದರು.