ಹರಪನಹಳ್ಳಿ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಫಲಾನುಭವಿಗಳಿಗೆ ಪರಿಣಾಮಕಾರಿಯಾಗಿ ತಲುಪಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಶ್ರಮಿಸಬೇಕು ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಉದಯಶಂಕರ್ ಮಾಗಾನಹಳ್ಳಿ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಹಾಗೂ ತಾಲೂಕು ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶನಿವಾರ ಮಾತನಾಡಿದರು. ಹಿರೇಮೇಗಳಗೆರೆ, ಅರಸೀಕೆರೆ, ಹಲವಾಗಲು, ನಿಟ್ಟೂರು, ನಿಟ್ಟೂರು ಬಸಾಪುರ, ತಾವರಗುಂದಿ, ನೀಲಗುಂದ, ಅರಸನಾಳು, ಮತ್ತೂರು, ಶಿವಪುರ ತಾಂಡಾದಿಂದ ಹರಪನಹಳ್ಳಿಗೆ ಬರಲು ಬಸ್ ಸೌಲಭ್ಯ ಇಲ್ಲದಿರುವುದರಿಂದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಈ ಗ್ರಾಮಗಳಿಂದ ಹರಪನಹಳ್ಳಿಗೆ ಸಂಚರಿಸಲು ಹೆಚ್ಚವರಿಯಾಗಿ ಬಸ್‌ಗಳ ವ್ಯವಸ್ಥೆ ಕಲ್ಪಿಸಬೇಕೆಂದು ಘಟಕದ ವ್ಯವಸ್ಥಾಪಕಿ ಮಂಜಮ್ಮಗೆ ಉದಯಶಂಕರ್ ಮಾಗಾನಹಳ್ಳಿ ಸೂಚಿಸಿದರು.
ತಾಪಂ ಪ್ರಭಾರ ಇಒ ಚಂದ್ರಶೇಖರ್ ವೈ.ಎಚ್. ಮಾತನಾಡಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಲು ಎಲ್ಲರ ಶ್ರಮ ಅಗತ್ಯ. ಈ ಯೋಜನೆಗಳನ್ನು ಬೇರೆ ರಾಜ್ಯ, ದೇಶಗಳು ಕೂಡ ಅಳವಡಿಸಿಕೊಳ್ಳಲು ಮುಂದೆ ಬಂದಿದ್ದು, ಈ ಕುರಿತ ಅಧ್ಯಯನ ನಡೆಸಲು ಕರ್ನಾಟಕಕ್ಕೆ ಬರುತ್ತಿದ್ದಾರೆ ಎಂದರೆ ಯೋಜನೆಗಳ ಜನಪ್ರಿಯತೆ ಅರಿತುಕೊಂಡು ಕೆಲಸ ನಿರ್ವಹಿಸಬೇಕಿದೆ ಎಂದರು.
ಅನುಷ್ಠಾನ ಸಮಿತಿ ಸದಸ್ಯರಾದ ಲಕ್ಕಳ್ಳಿ ಗಂಗಪ್ಪ, ಯು.ಮಂಜಪ್ಪ, ಹಲವಾಗಲು ಶಿವಪುತ್ರಪ್ಪ, ಪಂಪಾಚಾರಿ ಮತ್ತಿಹಳ್ಳಿ, ಡಿ.ಗಣೇಶನಾಯ್ಕ, ಎಂ.ಸೋಮನಾಥ, ಬಡಗಿ ದಾದಪೀರ್, ಬಿ.ಪಿ.ಬಸವರಾಜ, ಚನ್ನಮ್ಮ ಮೈದೂರು ರಾಮಣ್ಣ, ತಿಪ್ಪನಾಯಕನಹಳ್ಳಿ ಪಕ್ಕೀರಪ್ಪ, ಎಸ್.ಕರಿಯಪ್ಪ, ತಾಪಂ ಸಹಾಯಕ ನಿರ್ದೇಶಕ ವೀರಣ್ಣ ಲಕ್ಕಣ್ಣನವರ್, ಸಿಡಿಪಿಒ ಅಶೋಕ, ಬೆಸ್ಕಾಂ ಎಇಇ ಪ್ರಕಾಶ್ ಪತ್ತೆನೂರು, ಆಹಾರ ಇಲಾಖೆ ಶಿರಸ್ತೇದಾರ್ ಭರತ್ ಇದ್ದರು.