ಜಿಲ್ಲೆ

ಹಳ್ಳಿಗಳಲ್ಲಿ ಹಾಲು ಸಿಕ್ಕಂತೆ ಸಿಗುತ್ತಿದೆ ಮದ್ಯ! ; ಮಟ್ಕಾ, ಇಸ್ಪೀಟ್ ದಂಧೆಯಿಂದ ತತ್ತರಿಸಿದ ಜನ

ಪಾವಗಡ : ಮಟ್ಕಾ, ಇಸ್ಪೀಟ್ ದಂಧೆಯಿಂದ ತತ್ತರಿಸಿರುವ ಗಡಿನಾಡು ಪಾವಗಡ ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟವೂ ರಾಜಾರೋಷವಾಗಿ ನಡೆಯುತ್ತಿದ್ದು, ಹಳ್ಳಿಗಳಲ್ಲಿ ನೂರಾರು ಬಡ ಕುಟುಂಬಗಳು ಬೀದಿಗೆ ಬೀಳುತ್ತಿವೆ.

ಪ್ರತಿ ಹಳ್ಳಿಯಲ್ಲಿಯೂ ಮದ್ಯ ಮಾರಾಟ ಮಾಡಲಾಗುತ್ತಿದೆ, ಹಾಲು ಸರಬರಾಜು ಆದಂತೆ ಸಮೀಪದ ಮದ್ಯದಂಗಡಿಯಿಂದಲೇ ದ್ವಿಚಕ್ರ ವಾಹನದಲ್ಲಿ ಪ್ರತಿನಿತ್ಯ ಮದ್ಯ ಬರುತ್ತಿದ್ದರೂ ಅಬಕಾರಿ, ಪೊಲೀಸ್ ಇಲಾಖೆ ಕ್ರಮ ತೆಗೆದುಕೊಳ್ಳುತ್ತಿಲ್ಲ. ಪಾವಗಡ ತಾಲೂಕಿನಲ್ಲಿ 31 ಮದ್ಯದಂಗಡಿಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳಲ್ಲಿ ಎಂಎಸ್‌ಐಎಲ್ 6, ವೈನ್‌ಸ್ಟೋರ್ 1, ಸಿ ಎಲ್ 7-4, ಸಿಎಲ್9-3 ಹಾಗೂ ಸಿ ಎಲ್2-17 ಇವೆ. ಇಷ್ಟೆಲ್ಲ ಮದ್ಯದಂಗಡಿಗಳು ಇದ್ದರೂ ಎಲ್ಲ ಗ್ರಾಮಗಳ ಪೆಟ್ಟಿಗೆ ಅಂಗಡಿಗಳಲ್ಲಿಯೂ ಮದ್ಯ ಸಿಗುತ್ತಿದೆ.

ಅನುಮತಿ ಪಡೆದಿರುವ ಮದ್ಯದಂಗಡಿಗಳಲ್ಲಿ ಬಹಿರಂಗವಾಗಿಯೇ ನಿಗದಿತ ಬೆಲೆಗಿಂತ ಹೆಚ್ಚಿನ ದರಕ್ಕೆ ಮದ್ಯ ಮಾರಾಟ ಮಾಡಲಾಗುತ್ತಿದೆ, ಅಬಕಾರಿ, ಪೊಲೀಸ್ ಇಲಾಖೆಗೆ ಮಾಮೂಲಿ ಕೊಡಬೇಕು, ಅದಕ್ಕಾಗಿ ದರ ಹೆಚ್ಚಿಸಿವೆ ಎಂದು ಮಂಗಳವಾಡದ ಬಾರ್ ಸಿಬ್ಬಂದಿ ಬಹಿರಂಗವಾಗಿಯೇ ಹೇಳುತ್ತಾರೆ. ಈ ಬಗ್ಗೆ ವಿಡಿಯೋ ಸಮೇತ ಲಿಖಿತವಾಗಿ ಸಾಕಷ್ಟು ದೂರುಗಳು ಅಬಕಾರಿ ಇಲಾಖೆಗೆ ಹೋದರೂ ಕ್ರಮಕೈಗೊಂಡಿಲ್ಲ. ನಾಮ್‌ಕೇವಾಸ್ತೆಗೆ 2021ರ ಜುಲೈನಿಂದ 2022 ಜನವರಿ 30ರವರೆಗೆ ಕೇವಲ 15, 15ಎ ಹಾಗೂ 2 ಗೊರ ಪ್ರಕರಣ ದಾಖಲಾಗಿದೆ.

ಅಬಕಾರಿ ಇಲಾಖೆ ಸಿಬ್ಬಂದಿ ಕೊರತೆ ನೆಪ : ಪಾವಗಡ ಅಬಕಾರಿ ಇಲಾಖೆಗೆ 12 ಹುದ್ದೆ ಮಂಜೂರಾಗಿದ್ದರೂ ಕೇವಲ 4 ಹುದ್ದೆ ಭರ್ತಿಯಾಗಿವೆ, ಒಬ್ಬರು ಇನ್‌ಸ್ಪೆಕ್ಟರ್, 2 ಇಎಸ್‌ಐ ಹಾಗೂ ಒಬ್ಬ ಕಾನ್‌ಸ್ಟೇಬಲ್ ಇದ್ದಾರೆ. 7 ಕಾನ್‌ಸ್ಟೇಬಲ್, 1 ಎಸ್‌ಡಿಎ ಹುದ್ದೆ ಖಾಲಿಯಿದ್ದು ಸ್ವಂತ ಕಚೇರಿಯೂ ಇಲಾಖೆಗೆ ಇಲ್ಲ. ಮಾಸಿಕ 13500ರೂ. ಬಾಡಿಗೆಯ ಕಟ್ಟಡದಲ್ಲಿ ಇಲಾಖೆ ಕಾರ್ಯನಿರ್ವಹಿಸುತ್ತಿದೆ.

ಡಾಬಾಗಳಲ್ಲಿಯೂ ಮದ್ಯ ಮಾರಾಟ : ತಾಲೂಕಿನಲ್ಲಿ ನಾಯಿಕೊಡೆಗಳಂತೆ ಡಾಬಾಗಳು ತಲೆಎತ್ತಿದ್ದು, ಎಲ್ಲೆಡೆಯೂ ಮದ್ಯ ಮಾರಾಟ ನಡೆಯುತ್ತಿದೆ, ಮದ್ಯದಂಗಡಿಗಳ ಜತೆ ಶಾಮೀಲಾಗಿ ಡಾಬಾಗಳಲ್ಲಿಯೂ ಮದ್ಯ ಮಾರಾಟ ಮಾಡಲಾಗುತ್ತಿದೆ. ಸಂಜೆಯಾದರೆ ಸಾಕು ಸಮಾಜಘಾತುಕ ಚಟುವಟಿಕೆ ನಡೆಸುವವರು, ಪುಂಡರು ಡಾಬಾಗಳಲ್ಲಿ ಸೇರುವುದು ಸಾಮಾನ್ಯ. ಡಾಬಾಗಳಲ್ಲಿ ಇದೆಲ್ಲಾ ‘ಮಾಮೂಲಿ’ ಆಗಿರುವುದರಿಂದ ಕಂಡೂ ಕಾಣದಂತೆ ಪೊಲೀಸ್ ಹಾಗೂ ಅಬಕಾರಿ ಇಲಾಖೆಯಿದೆ ಎಂಬ ಮಾತು ಸಾರ್ವಜನಿಕರ ವಲಯದಲ್ಲಿದೆ.

ಗಡಿ ಭಾಗದಲ್ಲಿರುವ ಪಾವಗಡ ದೊಡ್ಡ ತಾಲೂಕು. ಹಾಗಾಗಿ, ಇರುವ ಸಿಬ್ಬಂದಿ ಹಾಗೂ ಒಂದು ವಾಹನ ಬಳಸಿಕೊಂಡು ಎಲ್ಲೆಡೆಯೂ ಏಕಕಾಲದಲ್ಲಿ ಸಂಚರಿಸಲು, ದಾಳಿ ನಡೆಸಲು ಸಾಧ್ಯವಾಗಿಲ್ಲ, ಸಾಧ್ಯವಾದ ಕಡೆ ಅಕ್ರಮ ಮದ್ಯ ಮಾರಾಟ ಹಾಗೂ ಮದ್ಯದಂಗಡಿಯಲ್ಲಿ ಹೆಚ್ಚಿನ ದರ ಪಡೆಯುವವರ ಮೇಲೆ ಕ್ರಮಕೈಗೊಳ್ಳಲಿದ್ದೇವೆ. ಶಂಕರ್ ಅಬಕಾರಿ ಸಬ್‌ಇನ್‌ಸ್ಪೆಕ್ಟರ್, ಪಾವಗಡ ಅಬಕಾರಿ, ಪೊಲೀಸ್ ಅಧಿಕಾರಿಗಳಿಗೆ ನಾವು ಮಾಮೂಲಿ ಕೊಡಬೇಕು. ಹಾಗಾಗಿ, ಎಂಆರ್‌ಪಿಗಿಂತ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದೇವೆ, ಬೇಕಾದವರು ಬಂದು ಕುಡಿಯಬಹುದು, ಇಲ್ಲದಿದ್ದರೆ ಹೋಗಬಹುದು. ಸಿಬ್ಬಂದಿ ಮಂಗಳವಾಡ ಮದ್ಯದಂಗಡಿ