ಜಿಲ್ಲೆ

ಹಳ್ಳಿಗಳಲ್ಲಿ ಪ್ರಚಾರ ಜೋರು

ರಾಣೆಬೆನ್ನೂರ: ಯವ್ವಾ, ಅಣ್ಣ, ಅಕ್ಕ, ಮಾವ ನಾನು ನಿಮ್ ಮನಿ ಮಗಾ ಅಂತಾ ಭಾವಿಸಿ. ನಿಮಗ್ ಕೈ ಮುಗಿದ್ ಕೇಳ್ತಿನಿ, ಇದೊಂದ್ ಸಲ ವೋಟ್ ಹಾಕಿ ಗೆಲ್ಲಿಸ್ರಿ. ಊರಿನ್ ಅಭಿವೃದ್ಧಿ ಮಾಡಾಕ್ ಅವಕಾಶ ಮಾಡಿಕೊಡ್ರಿ...!

ಇದು ತಾಲೂಕಿನಲ್ಲಿ ನಡೆಯುತ್ತಿರುವ 33 ಗ್ರಾಪಂ ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳು ಮತದಾರರ ಬಳಿ ತೆರಳಿ ಮಾಡಿಕೊಳ್ಳುತ್ತಿರುವ ಮನವಿ. ತಾಲೂಕಿನ ಗ್ರಾಪಂ ಚುನಾವಣೆ ಅಭ್ಯರ್ಥಿಗಳ ಪ್ರಚಾರದ ವೈಖರಿ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಅಭ್ಯರ್ಥಿಗಳು ಹಗಲು-ರಾತ್ರಿ ಎನ್ನದೆ ಗೆಲುವಿಗಾಗಿ ನಾನಾ ಬಗೆಯ ಕಸರತ್ತು ನಡೆಸಿದ್ದಾರೆ. ಮನೆ ಮನೆಗೆ ತೆರಳಿ ಕೈ ಹಿಡಿದುಕೊಂಡು ನಿಮ್ಮ ಮತ ನನಗೆ ಹಾಕಿ ಎಂದು ಆಣೆ, ಪ್ರಮಾಣ ಮಾಡಿಸಿಕೊಳ್ಳುತ್ತಿದ್ದಾರೆ.

ದ್ವೇಷ ಮರೆಸುತ್ತಿದೆ ಚುನಾವಣೆ: ಗ್ರಾಮ ಗ್ರಾಮಗಳಲ್ಲೂ ಇದೀಗ ಚುನಾವಣೆ ಅಬ್ಬರ ಜೋರಾಗಿದೆ. ಅಭ್ಯರ್ಥಿಗಳು ವರ್ಷಗಟ್ಟಲೇ ದ್ವೇಷ ಕಟ್ಟಿಕೊಂಡವರ ಮುಂದೆಯೇ ನಿಂತು ವೈಮನಸ್ಸು ಮರೆತು ನನಗೊಂದು ಮತ ನೀಡಿ, ನಾವೆಲ್ಲ ಒಗ್ಗಟ್ಟಾಗೋಣ, ಚುನಾವಣೆ ಎದುರಿಸೋಣ ಎಂದೆನ್ನುತ್ತಿದ್ದಾರೆ. ಅಭ್ಯರ್ಥಿಗಳಿಗೆ ಅನಿವಾರ್ಯವಾಗಿ ದ್ವೇಷ ಮರೆಸಿ, ಸ್ವಾಭಿಮಾನ ದೂರ ಮಾಡಿ ಮುನಿಸಿಕೊಂಡವರನ್ನು ಒಂದುಗೂಡಿಸುವ ಕೆಲಸ ಮಾಡುತ್ತಿದೆ. ಹೀಗಾಗಿ ತಾಲೂಕಿನಲ್ಲಿ ಈ ಬಾರಿ ಒಂದೇ ಕುಟುಂಬದ ಸದಸ್ಯರು ಒಂದೇ ವಾರ್ಡ್​ಗೆ ಸ್ಪರ್ಧಿಸಿದ ಉದಾಹರಣೆಗಳಿಲ್ಲ.

ಸಂಬಂಧಿಗಳೆಲ್ಲ ನೆನಪಾದ್ರು: ಅಭ್ಯರ್ಥಿಗಳು ಮತದಾರರ ಪಟ್ಟಿ ಹಿಡಿದು ಯಾರ ಮತ ಬರಲಿವೆ. ಯಾರ ಮತ ಕೈ ತಪ್ಪಲಿವೆ. ಯಾರೆಲ್ಲ ನಮಗೆ ಮತ ಹಾಕಲಿದ್ದಾರೆ. ನಮ್ಮಿಂದ ಯಾರು ದೂರ ಉಳಿಯಲಿದ್ದಾರೆ. ಕೈ ತಪ್ಪುವ ಮತಗಳಲ್ಲಿ ಯಾರು, ಯಾವ ಸಮುದಾಯಕ್ಕೆ ಸೇರಿದವರು. ಇವರಲ್ಲಿ ನಮ್ಮ ಸಮುದಾಯದ ಮತದಾರರು ಎಷ್ಟು ಜನರಿದ್ದಾರೆ ಎಂದೆಲ್ಲ ಲೆಕ್ಕ ಹಾಕುತ್ತಿದ್ದಾರೆ.

ಮೊದಲೆಲ್ಲ ಮುಂದೆಯಿದ್ದರೂ ಮಾತನಾಡದ ಅಭ್ಯರ್ಥಿಗಳಿಗೆ ಈಗ ಅವರದ್ದೇ ಸಂಬಂಧಗಳು ನೆನಪಾಗಿ ನಿತ್ಯವೂ ಅವರ ಮನೆ ಬಾಗಿಲಿಗೆ ತೆರಳಿ ನಮ್ಮ ಸಮುದಾಯ ಒಗ್ಗಟ್ಟಾಗೋಣ. ನಾವು ಗೆದ್ದರೆ ನಮ್ಮ ಸಮಾಜ ಅಭಿವೃದ್ಧಿ ಮಾಡಲು ನೆರವಾಗಲಿದೆ ಎನ್ನುತ್ತ ಚುನಾವಣೆ ಹೊಸ್ತಿಲಲ್ಲೇ ಸಂಬಂಧಿಗಳನ್ನು ನೆನೆಯುತ್ತಿದ್ದಾರೆ.

ಅಂದು ಬರಬೇಡ ಎಂದವರಿಗೆ ಕೈಮುಗಿಯುವ ಸ್ಥಿತಿ: ದುಡಿಮೆ ಅರಸಿ ಗುಳೆ ಹೋಗಿರುವ ಕುಟುಂಬಗಳನ್ನು ಹಾಗೂ ವಿವಿಧ ಕೆಲಸಗಳ ನಿಮಿತ್ತ ಬೇರೆ ಬೇರೆ ಊರುಗಳಿಗೆ ತೆರಳಿದವರನ್ನು ಚುನಾವಣೆ ನಿಮಿತ್ತ ಇದೀಗ ಕೈ ಮುಗಿದು ಕರೆದುಕೊಳ್ಳುವ ಸ್ಥಿತಿ ಗ್ರಾಮೀಣ ಭಾಗದಲ್ಲಿ ನಿರ್ವಣವಾಗಿದೆ. ಕರೊನಾ ಲಾಕ್​ಡೌನ್ ಸಮಯದಲ್ಲಿ ನಗರ ಪ್ರದೇಶದಿಂದ ಗ್ರಾಮಗಳಿಗೆ ಬರುವವರಿಗೆ ಯಾವ ಕಾರಣಕ್ಕೂ ಬರಬೇಡ ಎಂದವರೇ ಹೆಚ್ಚು. ಅಂದು ಬರಬೇಡ ಎಂದವರು ಈಗ ಚುನಾವಣೆ ಅಭ್ಯರ್ಥಿಗಳು ಆಗಿದ್ದಾರೆ. ಆದ್ದರಿಂದ ಬೇರೆ ಬೇರೆ ಊರುಗಳಿಗೆ ತೆರಳಿದವರನ್ನು ಕೈ ಮುಗಿದು ಗ್ರಾಮಗಳಿಗೆ ಬರಮಾಡಿಕೊಳ್ಳಲಾಗುತ್ತಿದೆ.

ಎಲ್ಲೆಲ್ಲೂ ಚುನಾವಣೆ ಗುಂಗು:
ಗ್ರಾಮೀಣ ಭಾಗದ ಮೂಲೆ ಮೂಲೆಗಳು, ಕಟ್ಟೆಗಳು, ಚಹಾ ಅಂಗಡಿಗಳು ಈಗ ರಾಜಕೀಯ ವಿಷಯ ರ್ಚಚಿಸುವ ತಾಣಗಳಾಗಿವೆ. ಯುವಕರು ಇದೇ ಸದಾವಕಾಶ ಎಂದು ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದಾರೆ. ಅಭ್ಯರ್ಥಿಗಳು ನಾ ಮುಂದೆ, ತಾ ಮುಂದೆ ಎನ್ನುವಂತೆ ಆಯಾ ವಾರ್ಡ್​ಗಳಲ್ಲಿ ಕೈ ಮುಗಿದು ಮತಭಿಕ್ಷೆ ಬೇಡುತ್ತಿದ್ದಾರೆ. ಅಲ್ಲದೆ, ಊರಿನ ಅಭಿವೃದ್ಧಿಗೆ ಟೊಂಕಕಟ್ಟಿ ನಿಲ್ಲುವುದಾಗಿ ಅಭ್ಯರ್ಥಿಗಳು ವಾಗ್ದಾನ ಮಾಡುತ್ತಿದ್ದಾರೆ.