ಜಿಲ್ಲೆ

ಹಳ್ಳಿಗಳಲ್ಲಿ ಖಾತ್ರಿ ಕೆಲಸ ಪ್ರಾರಂಭಿಸಿ

ಕಲಬುರಗಿ: ಗ್ರಾಮಗಳಲ್ಲಿ ಉದ್ಯೋಗ ಖಾತ್ರಿ ಪ್ರಾರಂಭಿಸಬೇಕು, ಜಿಲ್ಲೆಯನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಬೇಕು ಎಂಬುದು ಸೇರಿ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಿಪಿಐ(ಎಂ) ಆಳಂದ ತಾಲೂಕು ಸಮಿತಿ ಕಾರ್ಯಕರ್ತರು ಕಲಬುರಗಿ ಜಿಪಂ ಸಿಇಒ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಖಾತ್ರಿ ಕೆಲಸ ೨೦೦ ದಿನಗಳಿಗೆ ವಿಸ್ತರಿಸಬೇಕು, ಕೂಲಿ ೭೦೦ ರೂ.ಗೆ ಹೆಚ್ಚಿಸಬೇಕು, ನಗರ ಪ್ರದೇಶದಲ್ಲೂ ಉದ್ಯೋಗ ಖಾತ್ರಿ ಕಾಯ್ದೆ ಜಾರಿಗೊಳಿಸಬೇಕು, ಕೂಲಿಗಾಗಿ ಕಾಳು ಯೋಜನೆ ರೂಪಿಸಿ ಉದ್ಯೋಗ ಸೃಷ್ಟಿಸಬೇಕು, ಕಾಯಕ ಬಂಧುಗಳ ಕೆಲಸದ ಹೆಚ್ಚುವರಿ ಕೂಲಿ ೪-೫ ರೂ.ಪಾವತಿಸಬೇಕು, ಖಾತ್ರಿ ಕೆಲಸದ ಬಾಕಿ ತಕ್ಷಣ ವಿತರಿಸಬೇಕು, ಕೆಲಸ ಕೊಡುವಲ್ಲಿ ವಿಳಂಬ ಮಾಡುತ್ತಿರುವ ಮತ್ತು ನಿರಾಕರಿಸುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮಳೆ ಇಲ್ಲದೆ ರೈತರು, ಕೂಲಿ ಕಾರ್ಮಿಕರು ಕಂಗಾಲಾಗಿದ್ದಾರೆ. ಜನ, ಜಾನುವಾರು ಬರಗಾಲದ ಕಾರ್ಮೋಡಕ್ಕೆ ಸಿಲುಕಿದ್ದಾರೆ. ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕದ ರೈತರ ನೆರವಿಗೆ ಧಾವಿಸಬೇಕು. ಮಕ್ಕಳು ಶಾಲೆ ತೊರೆದು ದುಡಿಮೆಗೆ ಹೋಗುವ ಸ್ಥಿತಿ ಬಂದಿದೆ. ಈ ಸನ್ನಿವೇಶದಲ್ಲಿ ಉದ್ಯೋಗ ಖಾತ್ರಿ ಆಸರೆಯಾಗಿದೆ. ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಸರ್ಕಾರ ಪರಿಹಾರಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ, ಪಾಂಡುರAಗ ಮಾವಿನಕರ್, ಸುಧಾಮ ಧನ್ನಿ, ಸುಜಾತಾ, ಡಾ.ಪ್ರಭು ಖಾನಾಪುರೆ, ಪ್ರಕಾಶ ಜಾನೆ, ಶಿವಲಿಂಗಪ್ಪ, ಕುಪೇಂದ್ರ ಲಾಡವಂತಿ, ಇಂದುಮತಿ ದೇಗಾಂವ್ ಇತರರು ಇದ್ದರು.