ಜಿಲ್ಲೆ

ಹಳ್ಳಿಗಳಲ್ಲಿ ಕುಡಿಯುವ ನೀರು, ಸ್ವಚ್ಛತೆಗೆ ಆದ್ಯತೆ

ಚಿತ್ರದುರ್ಗ: ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು ಹಾಗೂ ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕು ಎಂದು ಜಿಪಂ ಸಿಪಿಒ ಗಾಯತ್ರಿ ಹೇಳಿದರು.

ಜಿಪಂ, ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಲಜೀವನ್‌ಮಿಷನ್, ಸ್ವಚ್ಛ ಭಾರತ್ ಮಿಷನ್ ಯೋಜನೆಗಳ ಅನುಷ್ಠಾನಕ್ಕಾಗಿ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಗ್ರಾಪಂ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳಿಗೆ ಮಂಗಳವಾರ ಜಿಲ್ಲಾ ಪಂಚಾಯಿತಿಯಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಜನರಲ್ಲಿ ಶುದ್ಧ ಕುಡಿವ ನೀರು, ಸ್ವಚ್ಛತಾ ಅಭ್ಯಾಸಗಳನ್ನು ಉತ್ತೇಜಿಸಬೇಕಾಗಿದೆ. ಸರ್ಕಾರದ ಕಾರ್ಯಕ್ರಮಗಳ ಉದ್ದೇಶ ಶುದ್ಧ ಕುಡಿಯುವ ನೀರು, ನೀರಿನ ಸಂರಕ್ಷಣೆ, ಪ್ರತಿ ಗ್ರಾಮಗಳಲ್ಲಿ ಬಯಲು ಬರ್ಹಿದೆಸೆ ನಿರ್ಮೂಲನೆ ಸಾಧಿಸುವುದಾಗಿದೆ. ಈ ನಿಟ್ಟಿನಲ್ಲಿ ನೂತನ ತಾಂತ್ರಿಕ ಕೌಶಲಗಳನ್ನು ಬಳಸಿಕೊಂಡು ವ್ಯಾಪಕ ಅರಿವು ಮೂಡಿಸಬೇಕಾಗಿದೆ ಎಂದು ತಿಳಿಸಿದರು.

ತಾಪಂ ಇಓ ವೈ. ರವಿಕುಮಾರ್ ಮಾತನಾಡಿ, ಪ್ರತಿ ಗ್ರಾಮಗಳಲ್ಲಿ ನೀರು ಮತ್ತು ನೈರ್ಮಲ್ಯ ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ರಾಜ್ಯ ಸಂಪನ್ಮೂಲ ವ್ಯಕ್ತಿ ಜೋಸೆಫ್ ಜಿ.ಎಂ. ರೆಬೆಲ್ಲೋ ವಿಷಯ ಮಂಡಿಸಿದರು. ಇದೇ ಸಂದರ್ಭದಲ್ಲಿ ನೀರು ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ಪರಿಕರಗಳನ್ನು ವಿತರಿಸಲಾಯಿತು.

ಜಿಪಂ ಮುಖ್ಯಲೆಕ್ಕಾಧಿಕಾರಿ ಡಿ.ಆರ್. ಮಧು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇಗಳಾದ ಶಿವಮೂರ್ತಿ, ಹಸ್ಸೆನ್‌ಭಾಷಾ, ಚಿತ್ರದುರ್ಗ, ಹಿರಿಯೂರು ತಾಲೂಕು ಗ್ರಾಪಂ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳು, ಜಿಲ್ಲಾ ಐಇಸಿ ಸಮಾಲೋಚಕ ನಾಗರಾಜ್, ಜೆಜೆಎಂ ಜಿಲ್ಲಾ ವ್ಯವಸ್ಥಾಪಕ ಮಂಜುನಾಥ್ ಎಸ್. ನಾಡರ್, ಕರ್ನಾಟಕ ಸುಸ್ಥಿರ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ ಸಮಾಲೋಚಕ ಕಿರಣ್‌ಪಾಟೀಲ್, ಚಂದ್ರಕಾಂತ್, ಯಲ್ಲಪ್ಪ, ಗೀತಾಲಕ್ಷ್ಮೀ, ಸ್ವಚ್ಛ ಭಾರತ್ ಮಿಷನ್ ಜಿಲ್ಲಾ ಸಮಾಲೋಚಕ ಎಚ್‌ಆರ್‌ಡಿ ವಿನಯ್‌ಕುಮಾರ್, ಎಸ್‌ಎಲ್‌ಡಬ್ಲ್ಯೂಎಂ ಸಮಾಲೋಚಕಿ ಪ್ರಮೀಳಾ ಇತರರು ಇದ್ದರು.