ಭಾರತೀನಗರದ ವಿಶ್ವೇಶ್ವರಯ್ಯ ವೃತ್ತದಲ್ಲಿ ಜೆಡಿಎಸ್ ಕಾರ್ಯಕರ್ತರಿಂದ ಅಭಿನಂಧನೆ ಸ್ವೀಕರಿಸಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. 
ಜಿಲ್ಲೆ

ಹಳ್ಳಿಗಳಲ್ಲಿ ಆರೋಗ್ಯ ಸೇವೆಗೆ ಶೀಘ್ರ ಚಾಲನೆ

ಭಾರತೀನಗರ: ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ತಾಲೂಕಗಳ ಗ್ರಾಮೀಣ ಭಾಗದ ಜನತೆಗೆ ಆರೋಗ್ಯ ತಪಾಸಣೆ ಮತ್ತು ಮಧುಮೇಹ, ರಕ್ತದೊತ್ತಡಕ್ಕೆ ಚಿಕಿತ್ಸೆ ನೀಡಲು ಶೀಘ್ರದಲ್ಲೇ ಮೊಬೈಲ್ ವ್ಯಾನ್‌ಗಳ ಸೇವೆ ಆರಂಭಿಸಲಾಗುವುದು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಮಳವಳ್ಳಿ ತಾಲೂಕಿನ ಹಲಗೂರಿಗೆ ತೆರಳುತ್ತಿದ್ದ ವೇಳೆ ಇಲ್ಲಿನ ವಿಶ್ವೇಶ್ವರಯ್ಯ ವೃತ್ತದಲ್ಲಿ ಜೆಡಿಎಸ್ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಆರೋಗ್ಯ ರಕ್ಷಣೆ ಇಂದು ಅತ್ಯಂತ ಪ್ರಮುಖವಾಗಿದೆ. ಆದ್ದರಿಂದ ಗ್ರಾಮೀಣ ಜನತೆಗೆ ಗ್ರಾಮದಲ್ಲೇ ಎಲ್ಲ ರೀತಿಯ ಆರೋಗ್ಯ ತಪಾಸಣೆ, ಚಿಕಿತ್ಸೆ ಮತ್ತು ಔಷಧ ಕಲ್ಪಿಸುವುದು ನನ್ನ ಗುರಿಯಾಗಿದೆ. ಅದಕ್ಕಾಗಿ ನಮ್ಮ ಇಲಾಖೆಯಿಂದ ನೆರವು ನೀಡಿ, ಶೀಘ್ರದಲ್ಲೇ ಆರಂಭಿಸಲಾಗುವುದು ಎಂದರು.

ಪ್ರಸ್ತುತ ಉದ್ಯೋಗದ ಸಮಸ್ಯೆ ಬಗೆಹರಿಸುವುದು ಸವಾಲಿನ ಕೆಲಸವಾಗಿದೆ. ಹಾಗಾಗಿ ಮಂಡ್ಯ ಜಿಲ್ಲೆಯ ಯುವಜನತೆಗೆ ಉದ್ಯೋಗ ಕಲ್ಪಿಸುವ ಸಲುವಾಗಿ ಎಚ್‌ಎಂಟಿ ಕಾರ್ಖಾನೆ ಮತ್ತು ವೋಲ್ವೊ ಬಸ್‌ನ ಸಂಸ್ಥೆಯವರಿಂದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಮಾಡಿರುವವರಿಗೆ 6-7 ಸಾವಿರ ರೂ. ವೇತನದ ಜತೆಗೆ ತರಬೇತಿ ಒದಗಿಸಲಾಗುವುದು. ಇದರಿಂದ ಉದ್ಯೋಗದ ಭರವಸೆ ಮೂಡಿಸಲಾಗುವುದು ಎಂದರು.

ಭತ್ತ ಖರೀದಿಗೆ ಕ್ರಮ: ಭತ್ತ ಖರೀದಿ ಕೇಂದ್ರ ಆರಂಭಿಸುವ ಬಗ್ಗೆ ಮಾತನಾಡಿದ್ದೇನೆ. ಜ.15ರಿಂದ ಭತ್ತ ಖರೀದಿಸುವುದಾಗಿ ಹೇಳಿದ್ದಾರೆ. ರೈತರ ಸಮಸ್ಯೆಗಳ ಬಗ್ಗೆ ನನಗೆ ಚನ್ನಾಗಿ ಅರಿವಿದೆ. ರೈತರು ಪ್ರಸ್ತುತ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದು ಅಗತ್ಯವಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.

ನಾನು ರೈತರ ಒಡನಾಟದಲ್ಲಿ ಇರುವವನು. ರೈತರಿಗೆ ಏನು ಕಾರ್ಯಕ್ರಮ ಕೊಡಬೇಕೆಂಬ ಚಿಂತನೆ ನನ್ನದು. ಆ ನಿಟ್ಟಿನಲ್ಲಿ ಕ್ರಮಕೈಗೊಳ್ಳುತ್ತೇನೆ ಎಂದರು. ಇದೇ ಸಂದರ್ಭರದಲ್ಲಿ ರೈತರು, ಬೇಸಿಗೆಗೆ ಎರಡು ಕಟ್ಟು ನೀರು ಕೊಡಲು ವ್ಯವಸ್ಥೆ ಮಾಡುವಂತೆ ಕೋರಿದಾಗ, ಈ ಸಂಬಂಧ ಜಿಲ್ಲಾಧಿಕಾರಿಗಳ ಜತೆ ಚರ್ಚಿಸುತ್ತೇನೆ ಎಂದು ಭರವಸೆ ನೀಡಿದರು.

10 ಸಾವಿರ ಕೊಡುತ್ತಿದ್ದೆ: ಕಾಂಗ್ರೆಸ್ ಸರಕಾರ ಮಹಿಳೆಯರಿಗೆ 2 ಸಾವಿರ ರೂ. ಕೊಡುವುದರ ಬಗ್ಗೆ ದೊಡ್ಡದಾಗಿ ಮಾತನಾಡುತ್ತಿದೆ. ಮತ್ತೊಂದೆಡೆ ಹಾಲಿನ ದರ, ಪ್ರಯಾಣ ದರ ಸೇರಿದಂತೆ ಎಲ್ಲಾ ದರಗಳನ್ನು ಹೆಚ್ಚಳ ಮಾಡುತ್ತಿದೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.

ಜನರ ಮೇಲೆ ಸಲ್ಲದ ತೆರಿಗೆ ವಿಧಿಸಿ, ಹೊರೆ ಹೇರುವ ಮೂಲಕ 2 ಸಾವಿರ ರೂ. ಕೊಡುವುದು ದೊಡ್ಡ ಸಾಧನೆಯೇ? ನಾನು ಮುಖ್ಯಮಂತ್ರಿ ಆಗಿದ್ದು, ಈ ರೀತಿ ಬೆಲೆ ಏರಿಕೆ ಮಾಡಿದ್ದಲ್ಲಿ, ಮಾಸಿಕ ಮಹಿಳೆಯರಿಗೆ 10 ಸಾವಿರ ರೂ. ಕೊಡುತ್ತಿದ್ದೆ ಎಂದರು.

ಬೆಲೆ ಹೆಚ್ಚಳದಿಂದ ರೈತರು ಸೇರಿದಂತೆ ಎಲ್ಲ ವರ್ಗದ ಜನತೆ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದರು. ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಹಾಗಲಹಳ್ಳಿ ಚಿಕ್ಕತಿಮ್ಮೇಗೌಡ, ಮುಖಂಡರಾದ ಅಣ್ಣೂರು ನವೀನ್ ಕುಮಾರ್, ಕೆ.ಟಿ.ಸುರೇಶ್, ಗುರುದೇವರಹಳ್ಳಿ ಅರವಿಂದ್, ಅಣ್ಣೂರು ವಿನು ಹೊಂಡಾ ಸಿದ್ದೇಗೌಡ, ಎ.ಟಿ.ಶಂಕರ್ ಇತರರಿದ್ದರು.