ಹುಮನಾಬಾದ್: ಜಿಲ್ಲೆಯ ಅತಿ ದೊಡ್ಡ ಗ್ರಾಮ ಪಂಚಾಯಿತಿಯಾಗಿದ್ದ ತಾಲೂಕಿನ ಹಳ್ಳಿಖೇಡ್ (ಬಿ) ಪುರಸಭೆಯಾಗಿ ಮೇಲ್ದರ್ಜೆಗೇರಿದ ನಂತರ ಪ್ರಥಮ ಬಾರಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಲಿದ್ದು, ಯಾರಿಗೆ ಸಾರಥ್ಯ ಸಿಗಲಿದೆ ಎಂಬ ಕುತೂಹಲ ತೀವ್ರಗೊಳಿಸಿದೆ.
ಪುರಸಭೆ ಸದಸ್ಯ ಸ್ಥಾನಗಳಿಗೆ 2 ವರ್ಷದ ಹಿಂದೆ ಪ್ರಥಮ ಬಾರಿಗೆ ಚುನಾವಣೆ ನಡೆದಿತ್ತು. ಇದೀಗ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಹೊರಡಿಸಿದ್ದು, ಬುಧವಾರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಅಲ್ಪಸಂಖ್ಯಾತ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ. ಒಟ್ಟು 23 ಸದಸ್ಯ ಬಲದ ಪುರಸಭೆಯಲ್ಲಿ ಕಾಂಗ್ರೆಸ್ -14, ಬಿಜೆಪಿ 5, ಜೆಡಿಎಸ್ 3, ಇತರೆ 1 ಸ್ಥಾನ ಹೊಂದಿದೆ. ಕಾಂಗ್ರೆಸ್ ಪೂರ್ಣ ಬಹುಮತ ಹೊಂದಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯವಾಗಿರುವುದರಿಂದ ಸಹಜವಾಗಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ.
ಸದಸ್ಯರಾದ ಮಹಾಂತಯ್ಯಾ ತೀರ್ಥ, ನಾಗರಾಜ ಹಿಬಾರೆ, ಇಸೂಫ್ ಸೌದಗರ್ ಮತ್ತಿತರರು ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಆದರೆ ಇದರಲ್ಲಿ ತಾಪಂ ಅಧ್ಯಕ್ಷ, ಜಿಪಂ ಸದಸ್ಯರಾಗಿ ಸೇವೆ ಸಲ್ಲಿಸಿರುವ ಮಾಹಾಂತಯ್ಯಾ ತೀರ್ಥ ಸಾಮಾನ್ಯ ವರ್ಗದವರಾಗಿರುವುದರಿಂದ ಇವರ ಹೆಸರು ಅಧ್ಯಕ್ಷ ಸ್ಥಾನದ ರೇಸ್ ನಲ್ಲಿ ಮೊದಲ ಸ್ಥಾನದಲ್ಲಿ ಕೇಳಿಬರುತ್ತಿದೆ. ಪಕ್ಷದ ಸಂಘಟನೆಯೊಂದಿಗೆ ಹೈಕಮಾಂಡ್ನಲ್ಲಿ ಸಹ ಮಹಾಂತಯ್ಯ ತೀರ್ಥ ಅವರು ಛಾಪು ಮೂಡಿಸಿಕೊಂಡಿದ್ದಾರೆ. ಅದರಂತೆ ಉಪಾಧ್ಯಕ್ಷ ಸ್ಥಾನಕ್ಕೆ ನೂರಬಿ ಮೈಬೂಬಸಾಬ್, ಹುರಮತ್ ಬೇಗಂ, ನಸೀರಿಮ್ ಬೇಗಂ, ಉಷಾ ರವಿಂದ್ರ ಹೆಸರು ಕೇಳಿ ಬರುತ್ತಿವೆ. ಆದರೂ ಸಹ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಗದ್ದುಗೆ, ಸದಸ್ಯರ ಬೆಂಬಲ ಜತೆಗೆ ಹೈಕಮಾಂಡ್ ಶ್ರೀರಕ್ಷೆ ಇದ್ದವರಿಗೆ ಸ್ಥಾನ ಲಭಿಸಲಿದೆ.
ಬುಧವಾರ ಪುರಸಭೆಗೆ ಆಯ್ಕೆಗೊಳ್ಳುವವರು ಇತಿಹಾಸ ಪುಟದಲ್ಲಿ ಪ್ರಥಮ ಅಧ್ಯಕ್ಷ-ಉಪಾಧ್ಯಕ್ಷರು ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ನಿರೀಕ್ಷೆಯಂತೆ ಆಯ್ಕೆ ನಡೆಯಲಿದೆ ಎಂಬ ವಿಶ್ವಾಸವಿದ್ದರು ಸಹ ಕುತುಹಲ ಮಾತ್ರ ಕೆರಳಿಸಿದೆ.