ಆನೇಕಲ್: ಹಳ್ಳಿಕಾರ್ ತಳಿಯ ಹಸುಗಳ ಸಗಣಿ ಗೊಬ್ಬರ ತುಂಬಾ ಶ್ರೇಷ್ಠವಾದದ್ದು. ಇದನ್ನು ಬಳಸುವುದರಿಂದ ಮಣ್ಣಿನ ಲವತ್ತತೆ ಹೆಚ್ಚಾಗಿ ಆರೋಗ್ಯವೂ ಸುಧಾರಿಸುತ್ತದೆ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ರೈತ ಮುರುಗೇಶ್ ಹೇಳಿದರು.
ತಾಲೂಕಿನ ಮಾಯಸಂದ್ರ ಗ್ರಾಮದಲ್ಲಿ ಸಂಕ್ರಾಂತಿ ಪ್ರಯುಕ್ತ ಸ್ಥಳೀಯ ರೈತರು ಏರ್ಪಡಿಸಿದ್ದ ಹಳ್ಳಿಕಾರ್ ತಳಿಯ ಎತ್ತುಗಳ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಇತ್ತೀಚೆಗೆ ಎಲ್ಲವೂ ವಿಷಯಮಯವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಹಳ್ಳಿಕಾರ್ ಹಸುಗಳ ಸಗಣಿ ಗೊಬ್ಬರವನ್ನು ಹೆಚ್ಚಾಗಿ ಬಳಕೆ ಮಾಡುವುದು ಒಳ್ಳೆಯದು ಎಂದು ಸಲಹೆ ನೀಡಿದರು.
ಇತ್ತೀಚೆಗೆ ನಾಟಿ ತಳಿಯ ಹೋರಿಗಳು ಮತ್ತು ಎತ್ತುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಮುಂದಿನ ಪೀಳಿಗೆಗಾದರೂ ಇವುಗಳ ಸಂಖ್ಯೆ ಹೆಚ್ಚಿಸಬೇಕು ಎಂಬ ಉದ್ದೇಶದಿಂದ, ಹಳ್ಳಿಕಾರ್ ತಳಿಯ ಹಸು, ಎತ್ತುಗಳ ಮೆರವಣಿಗೆ ಆಯೋಜಿಸಲಾಗಿದೆ ಎಂದರು.
ರಾಜಾಪುರ ಸಂಸ್ಥಾನ ಮಠದ ಶ್ರೀ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಗ್ರಾಮೀಣ ಭಾಗದ ಸೊಗಡುಗಳು ಉಳಿಯಬೇಕು. ಹಳ್ಳಿಕಾರ್ ಹಸುಗಳು ಅಳಿವಿನಂಚಿನಲ್ಲಿವೆ. ಇವುಗಳ ಸಂತತಿಯ ಉಳಿವಿಗಾಗಿ ಜಾಗೃತಿ ಮೂಡಿಸಲು ರೈತರು ಮುಂದಾಗಿರುವುದು ಶ್ಲಾಘನಾರ್ಹ ಎಂದರು.
ಶಾಸಕ ಬಿ. ಶಿವಣ್ಣ ಮಾತನಾಡಿ, ಆನೇಕಲ್ ತಾಲೂಕಿನಲ್ಲಿ ಇತ್ತೀಚೆಗೆ ಸಾವಯವ ಕೃಷಿಕರು ಹೆಚ್ಚಾಗುತ್ತಿರುವುದು ಮುಂದಿನ ಪೀಳಿಗೆಯ ಆರೋಗ್ಯ ದೃಷ್ಟಿಯಿಂದ ಸಂತಸದ ಸಂಗತಿ ಎಂದು ಹೇಳಿದರು.
ಎತ್ತುಗಳನ್ನು ಕಿಚ್ಚ ಹಾಯಿಸಲಾಯಿತು. ಹೊಸೂರು ಶಾಸಕ ವೈ. ಪ್ರಕಾಶ್, ಪ್ರಗತಿಪರ ರೈತರಾದ ಮಹೇಶ್, ವೇಣು, ಕೊಡಲಿಪುರ ಮುನೇಶ್, ಕೃಷ್ಣಯ್ಯ, ಮಾಯಸಂದ್ರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರವೀಣ್ ಗೌಡ ಮತ್ತಿತರರಿದ್ದರು.