ಜಿಲ್ಲೆ

ಹಳ್ಳಿ ಹೆಣ್ಣುಮಕ್ಕಳಿಗೆ ನೃತ್ಯ ಕಲಿಕೆ  -ವೆಚ್ಚ ಭರಿಸಲು ಎಸ್ಸೆಸ್ ಸಮ್ಮತಿ

ಡಿ. ಎಂ. ಮಹೇಶ್

ದಾವಣಗೆರೆ: ಹಳ್ಳಿಯ ಆಸಕ್ತ ಹೆಣ್ಣುಮಕ್ಕಳನ್ನು ಆಯ್ಕೆ ಮಾಡಿ, ನೃತ್ಯಾಭ್ಯಾಸ ಕಲಿಸಿ, ಗ್ರಾಮಾಂತರ ಪ್ರದೇಶಗಳಲ್ಲಿ ವಚನ ನೃತ್ಯರೂಪಕ ಪ್ರದರ್ಶನ ಕೊಡಿಸಲು ತಗಲುವ ಪೂರ್ಣ ಖರ್ಚು ವೆಚ್ಚವನ್ನು ತಾವೇ ಭರಿಸುವುದಾಗಿ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.

ದಾವಣಗೆರೆಯ ಎಸ್ ಎಸ್ ಮಲ್ಲಿಕಾರ್ಜುನ ಸಾಂಸ್ಕೃತಿಕ ಕೇಂದ್ರದಲ್ಲಿ ಭಾನುವಾರ ರಾತ್ರಿ, ಶಿವಕುಮಾರ ಕಲಾ ಸಂಘದಿಂದ ಹಮ್ಮಿಕೊಂಡಿದ್ದ, ‘ನೀನಲ್ಲದೆ ಮತ್ತಾರೂ ಇಲ್ಲವಯ್ಯ’ ವಚನ ನೃತ್ಯರೂಪಕದ 48ನೇ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಪಂಡಿತಾರಾಧ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ ನಡೆಯುತ್ತಿರುವ 'ನೀನಲ್ಲದೆ ಮತ್ತಾರೂ ಇಲ್ಲವಯ್ಯ’ ವಚನ ನೃತ್ಯರೂಪಕವನ್ನು ನಾನು ಬೆಂಗಳೂರಲ್ಲಿ ವೀಕ್ಷಿಸಿದ್ದೇನೆ, ಇದರಲ್ಲಿ ಬೆಂಗಳೂರಿನ ಕಲಾವಿದರೇ ಇದ್ದಾರೆ. ಹಳ್ಳಿ ಹೆಣ್ಣುಮಕ್ಕಳಿಗೆ ಇದರ ಪ್ರಯೋಜನ ಸಿಗಬೇಕು. ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ಇದರ ನೇತೃತ್ವ ವಹಿಸಲಿ ಎಂದು ಸಲಹೆ ನೀಡಿದರು.

ನಂತರ ಕಾರ್ಯಕ್ರಮದಿಂದ ಹೊರಡಲು ಸಿದ್ದರಾದ ಎಸ್ಸೆಸ್, ಸ್ವಾಮೀಜಿ ಅವರಿಗೆ ನಮಸ್ಕರಿಸಿದರು. ಕಮಂಡಲಕ್ಕೆ ಹಣ ಹಾಕಿದರು. ಆಗ ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಅಲ್ಲಿದ್ದ ಎಸ್ಸೆಸ್ ಪುತ್ರ ಉದ್ಯಮಿ ಎಸ್.ಎಸ್.ಗಣೇಶ್ ಅವರನ್ನು ' ಈ ಹಣ ಒಬ್ಬರದ್ದೇ, ಅಥವಾ ತಂದೆ ಮಗ ಇಬ್ಬರದಿಂದಲೂ ಸೇರಿದ್ದೆ? ಎಂದು ಪ್ರಶ್ನಿಸಿದರು.

ಆಗ ಗಣೇಶ್ 'ಯಾಕೆ ಸ್ವಾಮೀಜಿ, ಹೀಗೆ ಕೇಳಿ ತಂದೆ ಮಕ್ಕಳನ್ನು ಅಗಲಿಸುತ್ತೀರಾ? ಎಂದರು. ಸ್ವಾಮೀಜಿ ಮತ್ತೆ ಕೇಳಿದಾಗ ಇಬ್ಬರದ್ದೂ ಸೇರಿದೆ ಸ್ವಾಮೀಜಿ ಎಂದರು.ಹಾಗಾದರೆ ಶಿವಶಂಕರಪ್ಪನವರು ಹೆಣ್ಣು ಮಕ್ಕಳಿಗೆ ನೃತ್ಯ ಕಲಿಸಿ, ಪ್ರದರ್ಶನ ಕೊಡಿಸಲು ಹೇಳಿದ್ದಾರೆ, ಅದರ ವೆಚ್ಚವನ್ನು ಇಬ್ಬರೂ ಭರಿಸುತ್ತೀರಾ ಎಂದು ಸ್ವಾಮೀಜಿ ಮರು ಪ್ರಶ್ನಿಸಿದರು.

ಆಗ ಥಟ್ಟನೇ ಶಾಸಕ ಎಸ್ಸೆಸ್ 'ಅದರ ಸಂಪೂರ್ಣ ವೆಚ್ಚವನ್ನು ನಾನೊಬ್ನನೇ ಭರಿಸುತ್ತೇನೆ ಸ್ವಾಮೀಜಿ' ಎಂದು ಸಮ್ಮತಿಸಿದರು. ಶಿವಶಂಕರಪ್ಪ ಅವರು ಕಾರ್ಯಕ್ರಮದಿಂದ ನಿರ್ಗಮಿಸುತ್ತಿದ್ದಂತೆ ಇದನ್ನು ವಿವರಿಸಿದ ಸ್ವಾಮೀಜಿ 'ಶಿವಶಂಕರಪ್ಪ ಅವರ ಕುಟುಂಬವನ್ನು ಉದಾರ ಗುಣದ ಕಾರಣಕ್ಕೆ ಅಭಿನಂದಿಸುತ್ತೇನೆ' ಎಂದು ಹೇಳಿ ಬೆನ್ನು ತಟ್ಟಿದರು.