ಜಿಲ್ಲೆ

ಹಳ್ಳಿ ಹಳ್ಳಿಗಳಿಗೆ ನರೇಗಾ ಲಾಭ ತಲುಪಿಸಲಿ

ಮೈಸೂರು: ಗ್ರಾಮಾಂತರ ಪ್ರದೇಶದ ಜನರಿಗೆ ಉದ್ಯೋಗ ಕಲ್ಪಿಸುವ ನರೇಗಾ ಯೋಜನೆಯ ಲಾಭವನ್ನು ಹಳ್ಳಿಗಳಿಗೆ ತಲುಪಿಸಬೇಕಿದೆ ಎಂದು ಗ್ರಾಮ ಸ್ವರಾಜ್ ಅಭಿಯಾನದ ರಾಜ್ಯ ಸಂಚಾಲಕಿ ಕೆ. ಚಿತ್ರಾವತಿ ಹೇಳಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ, ನಾಗರಿಕ ಸಮಾಜ ಸೇವಾ ಸಂಸ್ಥೆಗಳ ಒಕ್ಕೂಟವಾದ ಗ್ರಾಮ ಸ್ವರಾಜ್ ಅಭಿಯಾನ- ಕರ್ನಾಟಕ ಸಹಯೋಗದಲ್ಲಿ ನಗರದ ಬನ್ನಿಮಂಟಪದ ಒಡಿಪಿ ಸಂಸ್ಥೆಯಲ್ಲಿ ಗುರುವಾರ ಆಯೋಜಿಸಿದ್ದ ವಿಭಾಗ ಮಟ್ಟದ ಕಾಯಕ ಬಂಧುಗಳ ತರಬೇತುದಾರರ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎಂ-ನರೇಗಾ ಯೋಜನೆಯನ್ನು ಮನೆ ಮನೆಗೆ ತಲುಪಿಸಬೇಕಿದೆ. ಇದರಿಂದ ಗ್ರಾಮಾಭಿವೃದ್ಧಿಗೆ ನೆರವಾಗಲಿದೆ ಎಂದರು.

ಆರ್‌ಎಲ್‌ಎಚ್‌ಪಿ ಅಧ್ಯಕ್ಷೆ ಸರಸ್ವತಿ ಮಾತನಾಡಿ, ಪ್ರತಿಯೊಬ್ಬರಿಗೂ ಬದುಕುವ ಹಕ್ಕು ಇರುವುದರಿಂದ ಜನ ಕೆಲಸಕ್ಕಾಗಿ ವಲಸೆ ಹೋಗದೆ ಇರುವ ಕಡೆಯೇ ಕೆಲಸ ಮಾಡುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ.

ಯೋಜನೆಯ ಲಾಭವನ್ನು ಮನೆಮನೆಗೆ ತಲುಪಿಸಿ, ಜನರ ಮನವೊಲಿಸಬೇಕಿದೆ. ಆದರೆ, ಇದು ಆರಂಭವಾಗಿ 19 ವರ್ಷಗಳು ಕಳೆದಿದ್ದರೂ ಎಷ್ಟೋ ಜನರಿಗೆ ಸರಿಯಾದ ಮಾಹಿತಿಯೇ ಇಲ್ಲ ಎಂದರು.

ಮೈಸೂರು ಪ್ರತಿಭೆ ಸಂಸ್ಥೆಯ ನಿರ್ದೇಶಕ ಜಿ.ಪ್ರಸನ್ನಮೂರ್ತಿ, ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿದರು. ಎಚ್.ಡಿ. ಕೋಟೆ ನಿಸರ್ಗ ಸಂಸ್ಥೆಯ ನಿರ್ದೇಶಕ ಪ್ರಭು, ಮಳವಳ್ಳಿ ಜನರಕ್ಷ ಸಂಸ್ಥೆಯ ನಿರ್ದೇಶಕ ಕೃಷ್ಣೇಗೌಡ, ಗುಂಡ್ಲುಪೇಟೆ ಟಾರ್ಡೋ ಸಂಸ್ಥೆಯ ನಿರ್ದೇಶಕ ಡಾ. ಮೋಹನ್ ಕೋಟೆಕೆರೆ, ಮೈಸೂರು ಜನಜಾಗೃತಿ ಸಂಸ್ಥೆಯ ವಿ.ಎನ್. ಮೂರ್ತಿ, ಪ್ರತಿಭೆ ಸಂಸ್ಥೆಯ ಕೆ.ಎಂ. ಶಿವರಾಜು ಇದ್ದರು. ಹತ್ತು ದಿನಗಳ ಈ ತರಬೇತಿಯಲ್ಲಿ ಮೈಸೂರು, ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಯ ಪ್ರತಿನಿಧಿಗಳು ಭಾಗವಹಿಸಿದ್ದಾರೆ.