ಜಿಲ್ಲೆ

ಹಳ್ಳಿ ರಸ್ತೆ ಅಭಿವೃದ್ಧಿಗೆ ಪ್ರಥಮ ಆದ್ಯತೆ

ಅಫಜಲಪುರ: ರಸ್ತೆಗಳು ಅಭಿವೃದ್ಧಿ ಆದಾಗಲೇ ದೇಶದ ಬೆಳವಣಿಗೆಯಾಗಲಿದೆ. ಕ್ಷೇತ್ರದಲ್ಲಿ ಪ್ರಮುಖವಾಗಿ ಹಳ್ಳಿ ರಸ್ತೆಗಳ ಅಭಿವೃದ್ಧಿಗೆ ಮೊಲದ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಎಂ.ವೈ. ಪಾಟೀಲ್ ಹೇಳಿದರು.
ಬಿದನೂರ ಗ್ರಾಮದಲ್ಲಿ 4.93 ಕೋಟಿ ರೂ. ವೆಚ್ಚದಲ್ಲಿ 2019-2020ನೇ ಸಾಲಿನ ವಿಶೇಷ ಅಭಿವೃದ್ಧಿ ಯೋಜನೆಯಡಿ ಬಿದನೂರ - ಹೂವಿನಹಳ್ಳಿವರೆಗೆ 7.87 ಕಿ.ಮೀ ರಸ್ತೆ ಸುಧಾರಣೆ ಹಾಗೂ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಜನರು ನಗರ ಪ್ರದೇಶಗಳಿಗೆ ಹೋಗುವುದನ್ನು ತಪ್ಪಿಸಲು ಹಳ್ಳಿಗಳಿಗೆ ಅಗತ್ಯ ಸೌಕರ್ಯ ಒದಗಿಸಲಾಗುತ್ತಿದೆ. ಪ್ರತಿಯೊಬ್ಬರೂ ಶೌಚಗೃಹ ನಿರ್ಮಾಣ ಮಾಡಿಕೊಂಡು, ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಸಹಕರಿಸಬೇಕು ಎಂದು ತಿಳಿಸಿದರು.
ತಾಲೂಕಿನಲ್ಲಿ 18 ಕೆರೆಗಳನ್ನು ತುಂಬಿಸಲು 500 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಕೆರೆ ಕಟ್ಟೆಗಳನ್ನು ತುಂಬಿಸುವುದರಿಂದ ಜನರಿಗೆ ಕುಡಿವ ನೀರು ಸಿಗುವುದರ ಜತೆಗೆ ಅಂತರ್ಜಲ ಮಟ್ಟ ವೃದ್ಧಿಯಾಗಲಿದೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಡೆಸುವ ಮೂಲಕ ಜನತೆಗೆ ಅನುಕೂಲ ಕಲ್ಪಿಸಬೇಕು. ಅಲ್ಲದೆ ಗ್ರಾಮ ಪಂಚಾಯಿತಿ ಆಡಳಿತಧಿಕಾರಿ ಹಾಗೂ ಪಿಡಿಒಗಳು ನರೇಗಾ ಯೋಜನೆಯಡಿಯಲ್ಲಿ ಕೆಲಸ ಮಾಡಿದ ಕಾರ್ಮಿಕರಿಗೆ ಶೀಘ್ರ ವೇತನ ನೀಡಬೇಕು ಎಂದು ತಾಕೀತು ಮಾಡಿದರು.
ಜಿಪಂ ಉಪಾಧ್ಯಕ್ಷೆ ಶೋಭಾ ಸಿರಸಗಿ, ತಾಪಂ ಉಪಾಧ್ಯಕ್ಷ ಭೀಮಾಶಂಕರ ಹೊನ್ನಕೇರಿ ಮಾತನಾಡಿದರು.
ಪ್ರಮುಖರಾದ ಕೃಷ್ಣಾಬಾಯಿ ಡೊಂಗರಿ, ರಾಜುಗೌಡ ಮಾಲಿಪಾಟೀಲ್, ಜಗನ್ನಾಥ ಅವರಳ್ಳಿ, ತಿಪ್ಪಣ್ಣ ತಳಕೇರಿ, ಶಿವು ಬಳಗುಂಪಿ, ಮಲಕಣ್ಣ ಪೂಜಾರಿ, ಮಾಂತಪ್ಪ ನಡಗಟ್ಟಿ, ಸೂರ್ಯಕಾಂತ ದೊಡ್ಡಮನಿ, ರಾಜೇಂದ್ರ ಚಿಕಲಗಿ, ಸಚಿನ್ ಲಿಂಗಶೆಟ್ಟಿ, ಮೈಬೂಬ್ಸಾಬ್ ಬಿದನೂರ, ಮಕ್ತುಮ್ಸಾಬ್ ಶೇಖ್, ಮಲ್ಲಿಕಾರ್ಜುನ ಅಚಲೇರಿ ಇದ್ದರು.