ವಿಜಯವಾಣಿ ವಿಶೇಷ ಔರಾದ್
ಗ್ರಾಮೀಣ ಪ್ರದೇಶದಲ್ಲೂ ಅಂತರ್ಜಾಲದ ಬಳಕೆ ಸುಲಭ, ಪರಿಣಾಮಕಾರಿ ಆಗಿಸಲು ಹಾಗೂ ಪುಸ್ತಕ ಸಂಸ್ಕೃತಿ ಉಳಿಸುವುದಕ್ಕೆ ಪೂರಕವಾಗಿ ಸರ್ಕಾರ ಇ-ಲೈಬ್ರರಿ ಸ್ಥಾಪನೆಗೆ ಮುಂದಾಗಿದೆ.
ಮಾಹಿತಿ ತಂತ್ರಜ್ಞಾನದ ಓಟದಲ್ಲಿ ಪುಸ್ತಕ ಓದುಗರಿಗೆ ಆಧುನಿಕ ಸ್ಪರ್ಶ ಸಿಗದಿದ್ದರೆ ಓದುಗರ ಕೊರತೆ ಗ್ರಂಥಾಲಯಕ್ಕೆ ಮಾತ್ರವಲ್ಲದೆ ಸಾಹಿತಿಗಳು, ಪುಸ್ತಕ ಪ್ರೇಮಿಗಳಿಗೂ ತಟ್ಟಲಿದೆ. ಹೀಗಾಗಿ ಸರ್ಕಾರ ಡಿಜಿಟಲ್ ಲೈಬ್ರರಿಯಲ್ಲಿ ವಿಶೇಷ ಕ್ರಾಂತಿ ಮಾಡುವ ನಿಟ್ಟಿನಲ್ಲಿ ಇ-ಲೈಬ್ರರಿ ಆರಂಭಿಸಿದೆ. ಈ ಮೂಲಕ ಮಕ್ಕಳು, ವಿದ್ಯಾರ್ಥಿಗಳಲ್ಲೂ ಪುಸ್ತಕ ಓದುವ ಅಭಿರುಚಿ ಬೆಳೆಸುವ ಪ್ರಯತ್ನ ನಡೆದಿದೆ.
ಕರೊನಾ ಲಾಕ್ ಡೌನ್ ನಿಂದಾಗಿ ಹಳ್ಳಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದನ್ನು ತಪ್ಪಿಸಲು ಗ್ರಾಪಂಗಳಲ್ಲಿ ಇ-ಲೈಬ್ರರಿ ವ್ಯವಸ್ಥೆ ಸ್ಥಾಪಿಸಲಾಗುತ್ತಿದೆ. ಈಗಾಗಲೇ ಬಹುತೇಕ ಗ್ರಾಪಂಗಳಲ್ಲಿ ಓದುವ ಬೆಳಕು ಕಾರ್ಯಕ್ರಮ ಜಾರಿ ಮಾಡಲಾಗಿದೆ. ಹೆಸರು ನೋಂದಾಯಿಸಿಕೊಂಡ ವಿದ್ಯಾರ್ಥಿಗಳಿಗೆ ಓದಲು ವ್ಯವಸ್ಥೆ ಮತ್ತು ಅಗತ್ಯ ಪುಸ್ತಕ ಕೊಂಡುಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಈ ಕಾರ್ಯಕ್ರಮದ ಮುಂದುವರಿದ ಭಾಗವಾಗಿ ಸ್ವಂತ ಕಟ್ಟಡ ಹಾಗೂ ಅಂತರ್ಜಾಲ ಸೌಲಭ್ಯ ಹೊಂದಿದ ಗ್ರಾಪಂಗಳಲ್ಲಿ ಇ-ಲೈಬ್ರರಿ ಆರಂಭಿಸಲು ಸರ್ಕಾರ ಸೂಚಿಸಿದೆ.
ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಇತ್ತೀಚೆಗೆ ವಡಗಾಂವ್ ಗ್ರಾಪಂನಲ್ಲಿ ಇ-ಗ್ರಂಥಾಲಯಕ್ಕೆ ಚಾಲನೆ ನೀಡಿದ್ದಾರೆ. ಇಲ್ಲಿ ಕಂಪ್ಯೂಟರ್ ಮತ್ತು ಅಂತರ್ಜಾಲ ಸೌಲಭ್ಯವಿದ್ದು, ಬೇಕಾದ ವಿಷಯ, ಪುಸ್ತಕ ಮಾಹಿತಿ ಪಡೆಯುವುದರ ಜತೆಗೆ ಡೌನ್ಲೋಡ್ ಗೂ ಅವಕಾಶ ಕಲ್ಪಿಸಲಾಗಿದೆ.
ವಡಗಾಂವ್ ನಲ್ಲಿ ಹೊಸದಾಗಿ ಕಟ್ಟಿರುವ ರಾಜೀವ್ ಗಾಂಧಿ ಸೇವಾ ಕೇಂದ್ರದಲ್ಲಿ ಗ್ರಂಥಾಲಯ ವ್ಯವಸ್ಥೆ ಮಾಡಲಾಗಿದೆ. ಲಭ್ಯವಿರುವ ಪುಸ್ತಕ ಓದುವ ಜತೆಗೆ ಹೊಸ ಹೊಸ ವಿಷಯ ತಿಳಿದುಕೊಳ್ಳಲು ಮತ್ತು ಸಂಗ್ರಹಿಸಲು ಕಂಪ್ಯೂಟರ್ ಅಳವಡಿಸಲಾಗಿದೆ. ಈ ಕುರಿತು ಗ್ರಂಥಪಾಲಕರಿಗೆ ಸೂಕ್ತ ತರಬೇತಿ ನೀಡಲಾಗಿದ್ದು, ಅವರು ವಿದ್ಯಾರ್ಥಿಗಳಿಗೆ ಅಗತ್ಯ ಸಲಹೆ ನೀಡುತ್ತಿದ್ದಾರೆ ಎನ್ನುತ್ತಾರೆ ಗ್ರಾಪಂ ಅಧಿಕಾರಿಗಳು.
ವಿದ್ಯಾರ್ಥಿಗಳಿಗೆ ಏನೇನಿವೆ ಅವಕಾಶ?
ಇ-ಲೈಬ್ರರಿಯು ಕಾಲೇಜು ಮತ್ತು ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ವರದಾನವಾಗಿದೆ. ವಿದ್ಯಾರ್ಥಿಗಳಿಗೆ ಬೇಕಾದ ಅಸೈನ್ಮೆಂಟ್, ಪ್ರಾಜೆಕ್ಟ್ ವಕ್೯ ಇತ್ಯಾದಿ ವಿಷಯ ಸಂಪನ್ಮೂಲಗಳನ್ನು ಇ-ಲೈಬ್ರರಿಯಲ್ಲಿ ಬಟನ್ ಮೇಲೆ ಕ್ಲಿಕ್ ಮಾಡಿದರೆ ಕ್ಷಣದಲ್ಲಿ ನೋಡಬಹುದು. ಇ-ಲೈಬ್ರರಿಯಲ್ಲಿ ಪಡೆದ ಮಾಹಿತಿ ನಿಖರವಾಗಿದ್ದು, ಮಕ್ಕಳಿಗೆ ನೈಜ ಸಂಗತಿ ಕಲೆ ಹಾಕಲು ಸಹಾಯವಾಗುತ್ತದೆ. ಗ್ರಾಮೀಣ ಭಾಗದ ಎಲ್ಲ ವಿದ್ಯಾರ್ಥಿಗಳ ಮನೆಯಲ್ಲಿ ಕಂಪ್ಯೂಟರ್, ಇಂಟರ್ನೆಟ್ ಸೌಲಭ್ಯ ಬಳಕೆ ಇರುವುದಿಲ್ಲ. ಹೀಗಾಗಿ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಇ-ಲೈಬ್ರರಿ ಸೌಲಭ್ಯ ಅತ್ಯಂತ ಪ್ರಯೋಜನಕಾರಿ ಎನಿಸಿದೆ.
ಗ್ರಾಮೀಣ ಭಾಗದಲ್ಲಿ ಇ-ಗ್ರಂಥಾಲಯ ಸೌಲಭ್ಯ ಅಳವಡಿಸಿದ್ದರಿಂದ ವಿದ್ಯಾರ್ಥಿಗಳ ಜತೆಗೆ ಎಲ್ಲ ವಯೋಮಾನದ ಜನರಿಗೆ ಅತ್ಯಂತ ಪ್ರಯೋಜನಕಾರಿ ಆಗಿದೆ. ಪ್ರತಿ ಹಳ್ಳಿಯಲ್ಲಿ ಇಂಥ ಸೌಲಭ್ಯ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು.| ಹಣಮಂತ ನೇಳಗೆ ಪುಸ್ತಕ ಪ್ರೇಮಿ ವಡಗಾಂವ
ಗ್ರಾಮ ಪಂಚಾಯಿತಿಗಳಲ್ಲಿ ಇ-ಗ್ರಂಥಾಲಯ ಆರಂಭಿಸಲು ಮೇಲಧಿಕಾರಿಗಳು ಆದೇಶಿಸಿದ್ದಾರೆ. ಪ್ರಥಮ ಹಂತದಲ್ಲಿ ಆಯ್ದ ಗ್ರಾಪಂಗಳಲ್ಲಿ ಈ ವ್ಯವಸ್ಥೆ ಜಾರಿ ಮಾಡಲಾಗಿದೆ. ಬರುವ ದಿನಗಳಲ್ಲಿ ಎಲ್ಲ ಗ್ರಾಮಗಳ ವಿದ್ಯಾರ್ಥಿಗಳಿಗೆ ಸೌಲಭ್ಯ ದೊರೆಯುಂತೆ ನೋಡಿಕೊಳ್ಳಲಾಗುವುದು.| ಶಿವಕುಮಾರ ಘಾಟೆಔರಾದ್ ತಾಪಂ ಸಹಾಯಕ ನಿರ್ದೇಶಕ
ಲಾಕ್ ಡೌನ್ ವೇಳೆ ಪಂಚಾಯಿತಿಯಲ್ಲಿ ಓದುವ ಬೆಳಕು ಕಾರ್ಯಕ್ರಮ ಪರಿಣಾಮಕಾರಿಯಾಗಿ ನಡೆದಿದೆ. ಕೇಂದ್ರ ಗ್ರಂಥಾಲಯ ಸೇರಿ ವಿವಿಧೆಡೆಯಿಂದ 9000ಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಲಾಗಿದೆ. 100 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದು, ಅವರೆಲ್ಲರಿಗೂ ಬೇಕಾದ ಪುಸ್ತಕ ಮನೆಗೆ ಕೊಂಡೊಯ್ಯಲು ಅವಕಾಶ ನೀಡಲಾಗಿದೆ.| ಅನೀಲಕುಮಾರಪಿಡಿಒ ವಡಗಾಂವ್