ಜಿಲ್ಲೆ

ಹಳ್ಳಿ ಮಂದಿಯಿಂದ ಹೈಟೆಕ್ ಪ್ರಚಾರ

ಸ.ದಾ. ಜೋಶಿ ಬೀದರ್

22ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುಕ್ರವಾರ ಕೊನೆಗೊಂಡಂತೆ ಗ್ರಾಪಂ ಚುನಾವಣೆ ಪ್ರಚಾರ ಮತ್ತಷ್ಟು ಬಿಗಿ ಹಿಡಿದಿದ್ದು, ಹಳ್ಳಿ ಸಮರ ರಂಗೇರಿದೆ. ರಾಜ್ಯದ ಬೀದರ್ ಜಿಲ್ಲೆಯಲ್ಲಿ ಮಾತ್ರ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರ (ಇವಿಎಂ) ಬಳಕೆ ಮಾಡುತ್ತಿರುವುದರಿಂದ ಹಳ್ಳಿ ಪ್ರಚಾರಕ್ಕೂ ಹೈಟೆಕ್ ಸ್ಪರ್ಶ ದೊರಕಿದೆ.

ಚುನಾವಣಾ ಆಯೋಗ ಪೈಲಟ್ ಯೋಜನೆಯಡಿ ಜಿಲ್ಲೆಯಲ್ಲಿ ಈ ಸಲವೂ (2015ರಲ್ಲೂ ಮಾಡಿತ್ತು) ಇವಿಎಂ ಬಳಕೆ ಮಾಡುತ್ತಿದೆ. 22, 27ರಂದು ಹೀಗೆ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಗ್ರಾಪಂನಲ್ಲೂ ಇವಿಎಂ ಬಳಕೆ ಮಾಡುತ್ತಿದ್ದರಿಂದ ಜನರಲ್ಲಿ ಸಹಜವೇ ಒಂದಿಷ್ಟು ಕುತೂಹಲ ಜತೆಗೆ ಗೊಂದಲ ಮೂಡಿದೆ. ಇವಿಎಂ ಬಳಕೆ ಹಿನ್ನೆಲೆಯಲ್ಲಿ ಅಖಾಡದಲ್ಲಿರುವ ಅಭ್ಯರ್ಥಿಗಳು ಮತ ಹೇಗೆ ಹಾಕಬೇಕೆಂಬ ಬಗ್ಗೆ ಮತದಾರರಿಗೆ ಮಾಹಿತಿ ನೀಡಲು ಕೈಯಲ್ಲಿ ಡೆಮೊ ಯಂತ್ರ ಹಿಡಿದು ಸುತ್ತಾಡುತ್ತಿದ್ದಾರೆ.

ಚುನಾವಣೆಗೆ ದಿನ ಹತ್ತಿರವಾಗುತ್ತಿದ್ದಂತೆ ಅಖಾಡ ಕಾವೇರತೊಡಗಿದೆ. ಬಹುತೇಕ ಅಭ್ಯರ್ಥಿಗಳು ಮತದಾರರ ಮನವೊಲಿಕೆಗಾಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಪಕ್ಷಾತೀತವಾಗಿ ಈ ಚುನಾವಣೆ ನಡೆದರೂ ವಿವಿಧ ಪಕ್ಷಗಳ ಮುಖಂಡರು ಚುನಾವಣೆಯನ್ನು ಗಂಭೀರ ಪರಿಗಣಿಸಿ ತಮ್ಮವರನ್ನು ಗೆಲ್ಲಿಸಲು ಹವಣಿಸುತ್ತಿದ್ದಾರೆ. ಈ ಮಧ್ಯೆ ಇವಿಎಂ ಬಳಕೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಪ್ರಚಾರಕ್ಕಾಗಿ ಪ್ರತ್ಯೇಕ ಡೆಮೊ ಇವಿಎಂ ಸಿದ್ಧಗೊಂಡಿವೆ. ಅಭ್ಯರ್ಥಿಗಳು ಡೆಮೊ ಇವಿಎಂ ಹಿಡಿದು ಜನರ ಮನೆ ಬಾಗಿಲಿಗೆ ಹೋಗಿ ಪ್ರಚಾರ ನಡೆಸುತ್ತಿದ್ದಾರೆ. ಮತದಾನ ದಿವಸ ಇಂಥದ್ದೇ ಯಂತ್ರಗಳು ಇರುತ್ತವೆ. ಇದರಲ್ಲಿ ಹೇಗೆ ಬಟನ್ ಒತ್ತಬೇಕೆಂದು ಮನವರಿಕೆ ಮಾಡಿಕೊಡುತ್ತಿದ್ದಾರೆ. ಕಳೆದ ಎರಡ್ಮೂರು ದಿನಗಳಿಂದ ಇಲ್ಲಿ ಡೆಮೊ ಇವಿಎಂಗಳ ಭರ್ಜರಿ ಮಾರಾಟ ನಡೆದಿದೆ.

ಸಂಸದ, ಶಾಸಕರ ಚುನಾವಣೆಯಲ್ಲಿ ಕೇವಲ ಒಬ್ಬಿಬ್ಬರಿಗೆ ಮತ ಹಾಕುತ್ತಿದ್ದರಿಂದ ಗೊಂದಲ ಇರಲಿಲ್ಲ. ಆದರೆ ಗ್ರಾಪಂನಲ್ಲಿ ಹಲವು ಅಭ್ಯರ್ಥಿಗಳಿಗೆ ಮತ ಹಾಕಬೇಕಿದೆ. ಎಷ್ಟು ಅಭ್ಯರ್ಥಿಗಳಿಗೆ ಯಾವ ರೀತಿ ಮತ ಹಾಕಬೇಕು? ಬಟನ್ ಹೇಗೆ ಒತ್ತಬೇಕು? ಎಂಡ್ ಬಟನ್ ಏನು ಕೆಲಸ ಮಾಡುತ್ತದೆ ಎಂಬಿತ್ಯಾದಿ ಬಗ್ಗೆ ಡೆಮೊ ಇವಿಎಂ ಮೂಲಕ ತಿಳಿಸುವ ಕೆಲಸ ನಡೆದಿದ್ದು, ಹಳ್ಳಿಗಳಲ್ಲೂ ಹೈಟೆಕ್ ಪ್ರಚಾರಕ್ಕೆ ನಾಂದಿ ಹಾಡಿದೆ. `ಐದ್ ಸೀಟಿಗಿ ಹತ್ ಮಂದಿ ನಿಂತಾರ್. ನೀವ್ ಐದೇ ಮಂದಿಗೆ ಓಟ್ ಹಾಕ್ಬೇಕ್. ಐದೇ ಬಟನ್ಗೊಳ್ ದಬಾಸ್ಬೇಕ್. ನಿಮುಗ್ ಯಾನ್ಬಿ ತಿಳೇಲ್ ಹೊಂಟುರ್ ನನ್ ಚಿನ್ ಮ್ಯಾಲ್ ಬಟನ್ ಒತ್ತಿ, ಲಾಸ್ಟುಕ್ ಕಂಪಲ್ಸರಿ ಎಂಡ್ ಬಟನ್ ಒತ್ಬೇಕು ನೋಡ್ರಿ' ಎಂದು ಹೇಳುತ್ತ ಮತದಾರರ ಗಮನ ಸೆಳೆಯುತ್ತಿರುವುದು ಸಾಮಾನ್ಯವಾಗಿದೆ.

ಪ್ರಚಾರದ ಬಳಕೆಗಾಗಿ ಡೆಮೊ ಇವಿಎಂ ಖರೀದಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ನಗರ ಸೇರಿ ತಾಲೂಕು ಕೇಂದ್ರದ ವಿವಿಧೆಡೆ ಇವುಗಳ ಮಾರಾಟ ಭರ್ಜರಿ ನಡೆದಿದೆ. ಅಭ್ಯರ್ಥಿಗಳು ಖರೀದಿಗೆ ನಾಮುಂದು, ತಾಮುಂದು ಎನ್ನುತ್ತಿದ್ದಾರೆ. ದಿನವೂ ಬೇಡಿಕೆ ಹೆಚ್ಚುತ್ತಿದ್ದು, 400-500 ರೂ.ಗೆ ಒಂದರಂತೆ ಬಿಕ್ರಿ ನಡೆದಿದೆ. ಬೇಡಿಕೆಗನುಗುಣ ಡೆಮೊ ಇವಿಎಂಗಳು ಪುಣೆಯಿಂದ ಖರೀದಿಸಿ ತರಲಾಗುತ್ತಿದೆ. ಚುನಾವಣಾ ಆಯೋಗದ ಇವಿಎಂನಂತೆ ಡೆಮೊ ಇವಿಎಂಗಳಿವೆ. ಇವುಗಳ ಮೂಲಕ ಮತದಾರರಿಗೆ ಪ್ರಾಯೋಗಿಕ ಮಾಹಿತಿ ನೀಡಬಹುದು. ಬಟನ್ ಒತ್ತಿದರೆ ಕೆಂಪು ಲೈಟ್ ಬೀಳುವ ವ್ಯವಸ್ಥೆಯಿದೆ. ಶೆಲ್ಗಳಿಂದ ಇವು ನಡೆಯುತ್ತವೆ. ಚುನಾವಣೆವರೆಗೆ ಈ ಶೆಲ್ ಕೆಲಸ ಮಾಡಲಿವೆ ಎನ್ನುತ್ತಾರೆ ಡೆಮೊ ಇವಿಎಂ ವಿತರಕರು.

ನೋಟಾ ತರಹ ಕಾರ್ಯ
ಮಾಡಲಿದೆ ಎಂಡ್ ಬಟನ್
ಇವಿಎಂನಲ್ಲಿರುವ ಎಂಡ್ ಬಟನ್ ಒತ್ತುವ ವಿಷಯದಲ್ಲಿ ಮತದಾರರು ಒಂದಿಷ್ಟು ಗೊಂದಲದಲ್ಲಿದ್ದಂತೆ ಕಾಣುತ್ತಿದೆ. ಒಂದು ಮತಕೇಂದ್ರದಲ್ಲಿ 5 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದಲ್ಲಿ, ಒಬ್ಬ ಮತದಾರ ಐವರಿಗೆ ಮತ ಹಾಕಬಹುದು. ಆದರೆ ಮತದಾರ ಒಬ್ಬ ಅಭ್ಯರ್ಥಿಗೆ ಮಾತ್ರ ಮತ ನೀಡಲು ಬಯಸಿದ್ದರೆ, ಆಗ ಆತ ತನಗೆ ಬೇಕಾದವರಿಗೆ ಮತ ಹಾಕಿದ ನಂತರ ಎಂಡ್ ಬಟನ್ ಒತ್ತಬೇಕು. ಇಂಥ ಸ್ಥಿತಿಯಲ್ಲಿ ಎಂಡ್ ಬಟನ್ ಒತ್ತುವುದು ಅತಿ ಮುಖ್ಯ. ಒಂದು ವೇಳೆ ಒಬ್ಬ ಅಭ್ಯರ್ಥಿಗೆ ಮತ ಹಾಕಿ ಎಂಡ್ ಬಟನ್ ಒತ್ತದೆ ಹಾಗೆ ಹೋದರೆ ಮತ್ತೊಬ್ಬರಿಗೆ ಮತದಾನ ಮಾಡಲು ತಕ್ಷಣ ಆಗಲ್ಲ. ಆಗ ಸಿಬ್ಬಂದಿ ಕಂಟ್ರೋಲ್ ಯುನಿಟ್ ಒಮ್ಮೆ ಬಂದ್ ಮಾಡಿ ಸ್ಟಾಟ್೯ ಮಾಡಿದಾಗಲೇ ಇವಿಎಂ ಪುನರಾರಂಭಗೊಳ್ಳುತ್ತದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಇವಿಎಂನಲ್ಲಿ ಅಭ್ಯರ್ಥಿಗಳ ಕೆಳಗೆ ನೋಟಾ (ಯಾರಿಗೂ ಮತ ಇಲ್ಲ) ಬಟನ್ ಒತ್ತಲು ಅವಕಾಶವಿತ್ತು. ಆದರೆ ಈ ಚುನಾವಣೆಯಲ್ಲಿ ನೋಟಾ ಬದಲು ಎಂಡ್ ಬಟನ್ ಒತ್ತಲು ಅವಕಾಶವಿದೆ. ಯಾವ ಅಭ್ಯರ್ಥಿಗೂ ಮತದಾನ ಮಾಡಬೇಕಿಲ್ಲ ಎಂದಾದರೆ ನೇರ ಎಂಡ್ ಬಟನ್ ಒತ್ತಬೇಕು. ಇದು ಸಹ ಒಂದು ರೀತಿ ನೋಟಾ ಬಟನ್ನಿನಂತೆ ಕೆಲಸ ಮಾಡುತ್ತದೆ. ಎಂಡ್ ಬಟನ್ ಸೂಕ್ತ ಬಳಕೆ ವಿಷಯದಲ್ಲಿ ಮತಗಟ್ಟೆ ಸಿಬ್ಬಂದಿ ಮೇಲೆ ಹೆಚ್ಚಿನ ಜಿಮ್ಮೇದಾರಿ ಇದೆ. ಮತದಾರರಿಗೂ ಈ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸುವ ಅಗತ್ಯವೆನಿಸಿದೆ.

ಒಂದಕ್ಕಿಂತ ಹೆಚ್ಚಿನ ಅಭ್ಯಥಿಗಳಿಗೆ ಮತ ಹಾಕುವ ವೇಳೆ ಇವಿಎಂ ಬಳಕೆಯತ್ತ ಹೆಚ್ಚಿನ ಗಮನಹರಿಸುವ ಅಗತ್ಯವಿದೆ. ಎಲ್ಲರಿಗೂ ಮತ ಹಾಕಿದರೆ ಎಂಡ್ ಬಟನ್ ಒತ್ತುವ ಅಗತ್ಯವಿಲ್ಲ. ಲಾಂಗ್ ಬೀಪ್ ಬಂದರೆ ಕೋಟಾ ಮುಗಿದಂತೆ. ಒಂದೊಮ್ಮೆ ಒಬ್ಬರನ್ನೇ ಮತ ಹಾಕಿ, ಉಳಿದವರಿಗೆ ಬಿಟ್ಟರೆ ಎಂಡ್ ಬಟನ್ ಒತ್ತಲೇಬೇಕು. ಹೀಗೆ ಮಾಡದಿದ್ದರೆ ಲಾಂಗ್ ಬೀಪ್ ಬರದಿರುವುದನ್ನು ಸಿಬ್ಬಂದಿ ಗಮನಿಸಿ ಎಂಡ್ ಬಟನ್ ಒತ್ತುವಂತೆ ತಿಳಿಸುತ್ತಾರೆ. ಇವಿಎಂ ಕಾರ್ಯನಿರ್ವಹಣೆ ಬಗ್ಗೆ ಚುನಾವಣೆ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಲಾಗಿದೆ. ಜನರಲ್ಲೂ ವ್ಯಾಪಕ ಜಾಗೃತಿ ಮೂಡಿಸಲಾಗುತ್ತಿದೆ.| ಡಾ.ಗೌತಮ ಅರಳಿಇವಿಎಂ ಜಿಲ್ಲಾ ಮಾಸ್ಟರ್ ಟ್ರೇನರ್
ಗ್ರಾಪಂ ಚುನಾವಣೆಗೆ ನಿಂತಿರುವ ಅಭ್ಯರ್ಥಿಗಳಿಂದ ಡೆಮೊ ಇವಿಎಂಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪುಣೆಯಿಂದ ಡೆಮೊ ಇವಿಎಂಗಳನ್ನು ತರಿಸಲಾಗಿದೆ. ಅಭ್ಯರ್ಥಿಗಳು ಈ ಇವಿಎಂಗಳ ಪ್ರಾತ್ಯಕ್ಷಿಕೆ ಮೂಲಕ ಯಾವ ರೀತಿ ಮತದಾನ ಮಾಡಬೇಕು ಎಂಬ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸಲು ಅನುಕೂಲವಾಗುತ್ತಿದೆ.| ಸುನೀಲಕುಮಾರ ಹೊನ್ನಾಳೆಡೆಮೊ ಇವಿಎಂ ವಿತರಕ
ಗ್ರಾಪಂ ಚುನಾವಣೆಯಲ್ಲಿ ಇವಿಎಂ ಬಳಕೆ ಮಾಡುತ್ತಿದ್ದರಿಂದ ಬಹಳಷ್ಟು ಮತದಾರರಲ್ಲಿ ಗೊಂದಲ ಇದೆ. ಹೀಗಾಗಿ ಹಳ್ಳಿ ಹಳ್ಳಿಯಲ್ಲಿ ಜಾಗೃತಿ ಮೂಡಿಸುವ ಕಾರ್ಯ ವ್ಯಾಪಕವಾಗಿ ನಡೆಯಬೇಕಿದೆ. ಇಲ್ಲದಿದ್ದರೆ ಮತದಾನ ಪ್ರಮಾಣ ಕಡಿಮೆಯಾಗುವ ಅಥವಾ ಮತದಾನ ಸಂದರ್ಭದಲ್ಲಿ ಗೊಂದಲ ಸೃಷ್ಟಿಯಾಗುವ ಸಾಧ್ಯತೆಗಳಿವೆ.| ರಾಚಣ್ಣಾ ಸಾಹುಗ್ರಾಪಂ ಅಭ್ಯರ್ಥಿ ಧನ್ನೂರ (ಆರ್)
ಕಳೆದ ಸಲ ಚುನಾವಣೆಯಲ್ಲಿ ಇವಿಎಂ ಬಳಕೆ ಮಾಡಿದರೂ ಹಳ್ಳಿ ಜನರಿಗೆ ಮತ್ತೆ ಮಾಹಿತಿ ನೀಡಬೇಕಾಗುತ್ತಿದೆ. ಒಂದೇ ವಾಡ್೯ನಲ್ಲಿ ಹೆಚ್ಚಿನ ಮಂದಿ ಅಖಾಡದಲ್ಲಿ ಇರುವುದರಿಂದ ಆಯ್ಕೆ ಹೇಗೆ ಎಂಬ ಗೊಂದಲ ಸಹಜವೇ ಇರುತ್ತದೆ. ಯಾರಿಗೂ ಮತದಾನ ಮಾಡುವುದಿಲ್ಲ ಎಂದಾದರೆ ಹಿಂದೆ ನೋಟಾ ಬಟನ್ ಇತ್ತು. ಆದರೀಗ ನೋಟಾ ಬದಲು ಎಂಡ್ ಬಟನ್ ಇದೆ. ಇದು ಹೇಗೆ ಬಳಸಬೇಕು ಎಂಬುದೇ ಬಹಳ ಜನರಿಗೆ ಗೊತ್ತಿಲ್ಲ.| ವಿರೂಪಾಕ್ಷ ಗಾದಗಿಯುವ ಮುಖಂಡ