ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪ ರಾಷ್ಟ್ರೀಯ ಹೆದ್ದಾರಿ ಪಕ್ಕದ ಹಳ್ಳಕ್ಕೆ ಕಾರು ಬಿದ್ದಿರುವುದು.  
ಜಿಲ್ಲೆ

ಹಳ್ಳಕ್ಕೆ ಬಿದ್ದ ಕಾರುಗಳು, 8 ಕಿಮೀವರೆಗೆ ನಿಂತ ವಾಹನಗಳು

ಮೂಡಿಗೆರೆ: ಬಿರುಗಾಳಿಯೊಂದಿಗೆ ಮಳೆ ಆರ್ಭಟ ಭಾನುವಾರವೂ ಮುಂದುವರಿದು ಅಲ್ಲಲ್ಲಿ ಮರಗಳು, ವಿದ್ಯುತ್ ಕಂಬಗಳು ಬಿದ್ದು ಅನಾಹುತ ಉಂಟಾಯಿತು. ತುಮಕೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಮೂರು ಕಾರುಗಳು ಹಳ್ಳಕ್ಕೆ ಉರುಳಿದ್ದು, ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.

ಮಂಗಳೂರಿನಿಂದ ಮೂಡಿಗೆರೆಗೆ ಸಾಗುತ್ತಿದ್ದ ಪಟ್ಟಣದ ಖಲೀಲ್ ಎಂಬುವವರ ಕಾರು ಬಣಕಲ್-ಕೊಟ್ಟಿಗೆಹಾರ ಮಧ್ಯದ ರಾಮಣ್ಣನಗಂಡಿಯಲ್ಲಿ ರಸ್ತೆ ಪಕ್ಕದ ಹಳ್ಳಕ್ಕೆ ಉರುಳಿ ಬಿದ್ದಿದೆ. ಖಲೀಲ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಖಲೀಲ್ ಅವರ ಕಾರನ್ನು ಟ್ರ್ಯಾಕ್ಟರ್‌ನಿಂದ ಸ್ಥಳೀಯರು ಎಳೆದು ರಸ್ತೆಗೆ ತರುತ್ತಿದ್ದಂತೆ, ಧರ್ಮಸ್ಥಳದಿಂದ ಬರುತ್ತಿದ್ದ ಆಂಧ್ರಪ್ರದೇಶದ ಕಾರೊಂದು ಅದೇ ಹಳ್ಳಕ್ಕೆ ಉರುಳಿತು. ಕಾರು ಹಳ್ಳದಲ್ಲಿ ಸಂಪೂರ್ಣವಾಗಿ ಮುಳುಗಿದೆ. ಸ್ಥಳದಲ್ಲಿದ್ದ ಸಮಾಜ ಸೇವಕ ಬಣಕಲ್ ಆರಿಫ್ ಅವರು ಹಗ್ಗದ ಸಹಾಯದಿಂದ ಹಳ್ಳಕ್ಕೆ ಇಳಿದು ಕಾರಿನಲ್ಲಿದ್ದ ನಾಲ್ವರನ್ನು ದಡಕ್ಕೆ ಕರೆತಂದರು. ಗಾಯಗೊಂಡಿದ್ದ ಪ್ರಯಾಣಿಕರನ್ನು ಬಣಕಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಧರ್ಮಸ್ಥಳದಿಂದ ಮೂಡಿಗೆರೆಯತ್ತ ಸಾಗುತ್ತಿದ್ದ ತುಮಕೂರಿನ ಕಾರೊಂದು ಬಣಕಲ್ ಬಳಿ ಹಳ್ಳಕ್ಕೆ ಉರುಳಿದೆ. ಹಳ್ಳದಲ್ಲಿ ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಕಾರು ಸಂಪೂರ್ಣವಾಗಿ ಮುಳುಗಿದೆ. ಕಾರಿನಲ್ಲಿದ್ದ ಮಹಿಳೆ ಸೇರಿದಂತೆ ನಾಲ್ವರನ್ನು ಸ್ಥಳೀಯರು ಹಗ್ಗದ ಸಹಾಯದಿಂದ ಸುರಕ್ಷಿತವಾಗಿ ದಡಕ್ಕೆ ಕರೆತಂದರು. ಅವರೆಲ್ಲರಿಗೂ ಸಣ್ಣ ಪುಟ್ಟ ಗಾಯವಾಗಿವೆ.

ಭಾನುವಾರ ಭಾರಿ ಪ್ರಮಾಣದಲ್ಲಿ ಮಳೆ ನೀರು ಹರಿದಿದ್ದರಿಂದ ಲೋಕವಳ್ಳಿ ಕಾಲನಿ ರಸ್ತೆ ಜಲಾವೃತವಾಗಿ ಕಾಲನಿ ಸಂಪರ್ಕ ಕಡಿತಗೊಂಡಿದೆ. ಮೂಡಿಗೆರೆ, ಜನ್ನಾಪುರ, ಗೋಣಿಬೀಡು, ಬಣಕಲ್, ಕೊಟ್ಟಿಗೆಹಾರ ಪಟ್ಟಣಗಳಲ್ಲಿ ಜನರಿಲ್ಲದೆ ಬಿಕೋ ಎನ್ನುತ್ತಿತ್ತು. ಪ್ರತಿದಿನ ಮನೆ ಮನೆಗೆ ದಿನಸಿ, ತರಕಾರಿ, ಮೀನು, ಹಣ್ಣುಗಳನ್ನು ವಾಹನಗಳಲ್ಲಿ ತಂದು ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳು, ಭಾರಿ ಗಾಳಿ, ಮಳೆ ಹಾಗೂ ರಸ್ತೆಗಳು ಜಲಾವೃತವಾಗಿದ್ದರಿಂದ ಭಯಗೊಂಡು ಭಾನುವಾರ ವ್ಯಾಪಾರದಲ್ಲಿ ತೊಡಗದೆ ವಾಪಸ್ ತೆರಳಿದರು. ಹೇಮಾವತಿ, ಜಪಾವತಿ ಸೇರಿದಂತೆ 8 ನದಿಗಳು ತುಂಬಿ ಹರಿಯುತ್ತಿವೆ. ವಿದ್ಯುತ್ ಪೂರೈಕೆಯಿಲ್ಲದೆ ಗ್ರಾಮೀಣ ಭಾಗದ ಎಲ್ಲ ಮೊಬೈಲ್ ಟವರ್‌ಗಳು ಸ್ಥಗಿತಗೊಂಡಿವೆ. ಗ್ರಾಮೀಣ ಭಾಗದಲ್ಲಿ ಬಿರುಗಾಳಿ ಮಳೆಯಿಂದ ಅನಾಹುತ ಸಂಭವಿಸಿದರೆ ತುರ್ತು ಕರೆ ಮಾಡಲೂ ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

ಗೋಣಿಬೀಡು ಸಮೀಪದ ಜಿ.ಹೊಸಳ್ಳಿ ಪಡಿಯ ಕಾಲನಿ ಎಂಬಲ್ಲಿ ರಾಜು ಎಂಬುವವರ ಮನೆ ಮೇಲೆ ಮರ ಬಿದ್ದು ಮನೆ ಜಖಂಗೊಂಡಿದೆ. ತುಮಕೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಕಸ್ಕೇಬೈಲ್ ಎಂಬಲ್ಲಿ ದೊಡ್ಡ ಮರ ಶನಿವಾರ ರಾತ್ರಿ ಬಿದ್ದಿದ್ದು, ಹೆದ್ದಾರಿ ಸಂಚಾರ ಕಡಿತಗೊಂಡಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸ್ಥಳೀಯರು ಮರವನ್ನು ತೆರವುಗೊಳಿಸಿದರು. ಎರಡು ಗಂಟೆಗಳ ಕಾಲ ಹೆದ್ದಾರಿಯ ಎರಡೂ ಬದಿಯಲ್ಲಿ ಏಳೆಂಟು ಕಿ.ಮೀ ಉದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಅದೇ ಹೆದ್ದಾರಿಗೆ ಮುದ್ರೆಮನೆ ಗ್ರಾಮದಲ್ಲಿ ಮರ ಬಿದ್ದು ಭಾನುವಾರ ಮಧ್ಯಾಹ್ನ ಸಂಚಾರ ಸ್ಥಗಿತಗೊಂಡಿತ್ತು. ಪಕ್ಕದ ಸಾಮಿಲ್‌ವೊಂದರ ಸಿಬ್ಬಂದಿ ಮರವನ್ನು ತೆರವುಗೊಳಿಸಿದ ನಂತರ ಸಂಚಾರ ಸುಗಮವಾಯಿತು. ತರುವೆ ಗ್ರಾಪಂ ಕಚೇರಿಯ ಹಳೇ ಕಟ್ಟಡದ ಛಾವಣಿಗೆ ಹಾನಿಯಾಗಿದೆ. ಕೊಟ್ಟಿಗೆಹಾರದ ಬಳಿ ರಾಷ್ಟ್ರೀಯ ಹೆದ್ದಾರಿಗೆ ಮರ ಬಿದ್ದಿದೆ. ಅದನ್ನು ಸ್ಥಳೀಯರು ತೆರವುಗೊಳಿಸಿದ್ದಾರೆ. ಕನ್ನಾಪುರದಿಂದ ಹಾಂದಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಗೆ ಬೃಹತ್ ಗಾತ್ರದ ಮರ ಉರುಳಿದ್ದರಿಂದ 6 ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತವಾಗಿತ್ತು. ಮೂಡಿಗೆರೆಯಿಂದ ಎಸ್‌ಡಿಪಿಐ ಕಾರ್ಯಕರ್ತರು ತೆರಳಿ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ತಾಲೂಕಿನಲ್ಲಿ ಬುಧವಾರದಿಂದ ಶನಿವಾರದವರೆಗೆ 25 ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಭಾನುವಾರ ಒಂದೇ ದಿನ 35 ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ. ಬುಧವಾರದಿಂದ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ. ಪಟ್ಟಣದಲ್ಲಿ ಆಗಾಗ ವಿದ್ಯುತ್ ಕಡಿತಗೊಳ್ಳುತ್ತಿದ್ದು, ಜನ ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ.

ಒಂದು ವಾರದಿಂದ ಭಾರಿ ಪ್ರಮಾಣದಲ್ಲಿ ಬಿರುಗಾಳಿಯೊಂದಿಗೆ ಮಳೆಯಾಗುತ್ತಿರುವುದರಿಂದ ತೋಟದಲ್ಲಿ ಮರಗಳು ಬೀಳುತ್ತಿವೆ. ಇದರಿಂದಾಗಿ ರೈತರು ಮತ್ತು ಕಾರ್ಮಿಕರು ಕೂಲಿ ಕೆಲಸಕ್ಕೆ ಹೋಗಲು ಸಾಧ್ಯವಾಗಿಲ್ಲ. ಅಲ್ಲಲ್ಲಿ ಮರ ಬಿದ್ದು ಹಾನಿಯಾಗಿದ್ದರಿಂದ ನಾಲ್ಕೈದು ದಿನದಿಂದ ಗ್ರಾಮೀಣ ಭಾಗಕ್ಕೆ ವಿದ್ಯುತ್ ಪೂರೈಕೆಯಾಗಿಲ್ಲ. ಕುಡಿಯಲು ನೀರಿಲ್ಲದೆ ಮಳೆ ನೀರನ್ನು ಕುಡಿಯಬೇಕಾಗಿದೆ. ಹಿಂದೆ ನ್ಯಾಯಬೆಲೆ ಅಂಗಡಿಗಳಲ್ಲಿ ಸೀಮೆಎಣ್ಣೆ ನೀಡಲಾಗುತ್ತಿತ್ತು. ಈಗ ಸೀಮೆಎಣ್ಣೆ ನೀಡುತ್ತಿಲ್ಲ. ದಿನವೊಂದಕ್ಕೆ ಮೇಣದ ಮೇಣದ ಬತ್ತಿ ಖರೀದಿಸಲು 100 ರೂ. ಗಿಂತ ಅಧಿಕ ಹಣ ಬೇಕಾಗಿದೆ. ಕಾರ್ಮಿಕರು ಕೆಲಸವಿಲ್ಲದೆ ಮನೆಯಲ್ಲಿರುವಾಗ ಮೇಣದಬತ್ತಿ ಖರೀದಿಸಲು ಸಾಧ್ಯವಾಗುತ್ತಿಲ್ಲ. ವಿದ್ಯಾರ್ಥಿಗಳು ಓದಿಕೊಳ್ಳಲು ಕಷ್ಟವಾಗಿದೆ. ಮಳೆಗಾಲದಲ್ಲಿಯಾದರೂ ಸರ್ಕಾರ ನ್ಯಾಯಬೆಲೆ ಅಂಗಡಿ ಮೂಲಕ ಸೀಮೆಎಣ್ಣೆ ಒದಗಿಸಬೇಕು ಎಂದು ಕಿರುಗುಂದ ಗ್ರಾಪಂ ಅಧ್ಯಕ್ಷೆ ಸ್ವಾತಿಶ್ರೀ ಮನವಿ ಮಾಡಿದ್ದಾರೆ.