ಜಿಲ್ಲೆ

ಹೆಗ್ಗರಣಿ ಕೋಡನಮನೆ ಸಮೀಪ ಹಳ್ಳಕ್ಕೆ ಬಿದ್ದ ಕಾರಿನಲ್ಲಿದ್ದವರು ಹುಬ್ಬಳ್ಳಿಯವರು

ಸಿದ್ದಾಪುರ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಹೊಳೆಗೆ ಬಿದ್ದ ಪರಿಣಾಮ ಅದರಲ್ಲಿದ್ದ ಹುಬ್ಬಳ್ಳಿ ಮೂಲದ ಮೂವರು ಮೃತಪಟ್ಟ ಘಟನೆ ತಾಲೂಕಿನ ಹೆಗ್ಗರಣಿ ಕೋಡನಮನೆ ಸಮೀಪ ನಡೆದಿದೆ. ಕಾರಿನಲ್ಲಿದ್ದ ಇನ್ನೊಬ್ಬ ಯುವತಿ ನೀರಿನಲ್ಲಿ ತೇಲಿ ಹೋಗಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಹುಬ್ಬಳ್ಳಿ ರಾಯನಾಳ ನಿವಾಸಿ ನಿಶ್ಚಲ ಹಿರೇಮಠ (21), ಶಾಂತಿನಗರ ಚರ್ಚ್ ಬಳಿಯ ನಿವಾಸಿ ರೋಶನ್ (19), ಹೊಸೂರಿನ ಸುಷ್ಮಿತಾ (19) ಮೃತಪಟ್ಟವರು. ಈ ಮೂವರ ಶವ ಕಾರಿನಲ್ಲಿಯೇ ಪತ್ತೆಯಾಗಿದೆ. ಇವರ ಜತೆಗೆ ಇದ್ದ, ಹಾಲಿ ಬೆಂಗಳೂರು ನಿವಾಸಿ ಅಕ್ಷತಾ ಹಿರೇಮಠ (21) ಎಂಬುವವರು ನೀರಿನಲ್ಲಿ ಕೊಚ್ಚಿ ಹೋದ ಶಂಕೆ ಇದ್ದು, ಶೋಧ ಕಾರ್ಯ ಮುಂದುವರಿದಿದೆ.

ಈ ನಾಲ್ವರೂ ಹೆಗ್ಗರಣಿ ಗ್ರಾಪಂ ವ್ಯಾಪ್ತಿಯ ಉಂಚಳ್ಳಿ ಜಲಪಾತ ನೋಡಿಕೊಂಡು ಬುಧವಾರ ಮಧ್ಯಾಹ್ನ ವಾಪಸಾಗುತ್ತಿದ್ದ ಸಂದರ್ಭದಲ್ಲಿ ಭಾರಿ ಮಳೆ ಇದ್ದ ಕಾರಣ ಕಾರು ಚಾಲಕನ ನಿಯಂತ್ರಣ ತಪ್ಪಿ ಸೇತುವೆ ಪಕ್ಕದಲ್ಲಿ ಕೋಡನಮನೆ ಹೊಳೆಗೆ ಬಿದ್ದಿರಬಹುದು ಎಂದು ಅಂದಾಜಿಸಲಾಗಿದೆ. ಗುರುವಾರ ಮಧ್ಯಾಹ್ನದ ಹೊತ್ತಿಗೆ ಕೋಡನಮನೆ ಗ್ರಾಮಸ್ಥರು ಕಾರನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಾರು ಸೇತುವೆಯಿಂದ ಅಂದಾಜು 75 ಮೀಟರ್ ದೂರ ಕೊಚ್ಚಿ ಹೋಗಿ ಗಿಡಕ್ಕೆ ಸಿಕ್ಕಿ ಹಾಕಿಕೊಂಡಿದ್ದು, ಅದರ ಒಂದು ಬಾಗಿಲು ತೆರೆದುಕೊಂಡಿತ್ತು.

ಎಸ್​ಪಿ ಶಿವಪ್ರಕಾಶ ದೇವರಾಜು, ಶಿರಸಿ ಡಿವೈಎಸ್​ಪಿ ಗೋಪಾಲಕೃಷ್ಣ ನಾಯಕ, ಸಿದ್ದಾಪುರ ಇನ್ಸ್​ಪೆಕ್ಟರ್ ಪ್ರಕಾಶ, ಪಿಎಸ್​ಐ ಮಂಜುನಾಥ ಸ್ಥಳಕ್ಕೆ ತೆರಳಿ ಅಗ್ನಿಶಾಮಕ ಠಾಣೆ ಹಾಗೂ ಸ್ಥಳೀಯರ ಸಹಕಾರದೊಂದಿಗೆ ಕಾರನ್ನು ಮೇಲೆತ್ತಿದ್ದಾರೆ. ಸಿದ್ದಾಪುರಕ್ಕೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಹುಬ್ಬಳ್ಳಿ ವರದಿ: ಅಪಘಾತಕ್ಕೀಡಾದ ವಾಹನವು ಇಲ್ಲಿನ ಕೇಶ್ವಾಪುರದ ಕಾರ್ ವಾಶಿಂಗ್ ಸೆಂಟರ್​ವೊಂದರ ಮಾಲೀಕ ಮಹಾವೀರ ದೇವಕ್ಕಿ ಎಂಬುವವರಿಗೆ ಸೇರಿದ ಮಾರುತಿ ಸುಜುಕಿ ಎಸ್ ಕ್ರಾಸ್ (ಕೆಎ63 ಎಂ2651) ಕಾರ್ ಆಗಿದೆ.

‘ಪರಿಚಯಸ್ಥ ಹುಡುಗ ನಿಶ್ಚಲ ತನ್ನ ಕುಟುಂಬದೊಂದಿಗೆ ಯಲ್ಲಾಪುರ ಕಡೆಗೆ ಪ್ರವಾಸಕ್ಕೆ ಹೋಗುವುದಾಗಿ ಹೇಳಿ ಬುಧವಾರ ಬೆಳಗ್ಗೆ 8.25ಕ್ಕೆ ನನ್ನ ಕಾರು ತೆಗೆದುಕೊಂಡು ಹೋಗಿದ್ದ. ನಿಮ್ಮ ಕಾರು ಹಳ್ಳಕ್ಕೆ ಬಿದ್ದಿದೆ ಎಂದು ಉತ್ತರ ಕನ್ನಡ ಪೊಲೀಸರು ಗುರುವಾರ ಸಂಜೆ ಕರೆ ಮಾಡಿದಾಗ ವಿಷಯ ಗೊತ್ತಾಗಿದೆ’ ಎಂದು ಮಹಾವೀರ ಅವರು ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಕುಟುಂಬಸ್ಥರ ಆಕ್ರಂದನ : ವಿಷಯ ತಿಳಿಯುತ್ತಿದ್ದಂತೆ ಯುವಕ- ಯುವತಿಯರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಮೃತದೇಹಗಳನ್ನು ಹುಬ್ಬಳ್ಳಿಗೆ ತರಲು ಸ್ಥಳೀಯ ಪೊಲೀಸರು ಉತ್ತರ ಕನ್ನಡ ಪೊಲೀಸರೊಂದಿಗೆ ಮಾತುಕತೆ ನಡೆಸಿದ್ದಾರೆ.