ಹಳೇಬೀಡು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಎಚ್.ವಿ.ರಘು, ಎಚ್.ಎನ್.ಮನೋಹರ, ಮೋಹನ್, ಪ್ರತಾಪ್, ಸಂತೋಷ ನಾಯಕ್, ಗಣೇಶ್ ಇತರರು ಇದ್ದರು. 
ಜಿಲ್ಲೆ

ಹಳೇಬೀಡಿನಲ್ಲಿ ಗುರುವಂದನಾ ಕಾರ್ಯಕ್ರಮ ನಾಳೆ

ಹಳೇಬೀಡು: ಸರ್ಕಾರಿ ಪದವಿಪೂರ್ವ ಕಾಲೇಜು ಹಳೆಯ ವಿದ್ಯಾರ್ಥಿಗಳ ಸಂಘದಿಂದ 2005-07ನೇ ಸಾಲಿನ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಆ.19ರಂದು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಸಂಘದ ಸಂಚಾಲಕ ಎಚ್.ವಿ. ರಘು ಹೇಳಿದರು.


ಕಾಲೇಜಿನ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಹಳೇಬೀಡಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಸನ ಜಿಲ್ಲೆಯಲ್ಲಿ ಉತ್ತಮ ಹೆಸರು ಪಡೆದಿದೆ. ಇಲ್ಲಿ ವ್ಯಾಸಂಗ ಮಾಡಿರುವ ನೂರಾರು ವಿದ್ಯಾರ್ಥಿಗಳು ವಿವಿಧ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ವಂತ ಉದ್ಯಮವನ್ನು ಕಟ್ಟಿಕೊಂಡು ಯಶಸ್ವಿಯಾಗಿದ್ದಾರೆ. ಇದಕ್ಕೆ ಸಮರ್ಪಣಾ ಭಾವದಿಂದ ಪಾಠ ಕಲಿಸಿಕೊಟ್ಟ ಶಿಕ್ಷಕರೇ ಕಾರಣರಾಗಿದ್ದಾರೆ. ಹಾಗಾಗಿ 2005-07ನೇ ಸಾಲಿನಲ್ಲಿ ಓದಿರುವ ವಿದ್ಯಾರ್ಥಿಗಳೆಲ್ಲ ಸೇರಿ ಗುರುವಂದನಾ ಕಾರ್ಯಕ್ರಮ ಆಯೋಜಿಸಿದ್ದೇವೆ. ಇದರ ಜತೆಗೆ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಸಮಾರಂಭವನ್ನೂ ಹಮ್ಮಿಕೊಳ್ಳಲಾಗಿದೆ ಎಂದರು.


ಅಂದು ಬೆಳಗ್ಗೆ 8.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಪ್ರಾಂಶುಪಾಲೆ ಬಿ.ಎಸ್.ವಿನುತಾ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ಪಬ್ಲಿಕ್ ಶಾಲೆಯ ಉಪ ಪ್ರಾಂಶುಪಾಲ ಮುಳ್ಳಯ್ಯ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.


ವಿದ್ಯಾರ್ಥಿ ಸಂಘದ ಎಚ್.ಎನ್.ಮನೋಹರ, ಮೋಹನ್, ಪ್ರತಾಪ್, ಸಂತೋಷ ನಾಯಕ್, ಗಣೇಶ್ ಇತರರು ಇದ್ದರು.