ಜಿಲ್ಲೆ

ಹಳೇ ವೈಷಮ್ಯ ಹಿನ್ನೆಲೆಯಲ್ಲಿ ಮಾರಣಾಂತಿಕ ಹಲ್ಲೆ

ಕೊಳ್ಳೇಗಾಲ: ತಾಲೂಕಿನ ಕುಣಗಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಹಳೇ ವೈಷಮ್ಯ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನ ಮೇಲೆ ಐವರು ಮಾರಣಾಂತಿಕ ಹಲ್ಲೆ ನಡೆಸಿರುವ ಸಂಬಂಧ ಅಗರ ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಣಗಳ್ಳಿ ಗ್ರಾಮದ ನಿವಾಸಿ ಚನ್ನಯ್ಯ (35) ಹಲ್ಲೆಗೊಳಗಾದ ವ್ಯಕ್ತಿ. ಗ್ರಾಮದಲ್ಲಿ ಚನ್ನಯ್ಯ ಸಂಬಂಧಿ ಲೋಕೇಶ್ ಹಾಗೂ ಶಿವಕುಮಾರ್ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಚನ್ನಯ್ಯ ಜಗಳ ಬಿಡಿಸಲು ಹೋಗಿದ್ದಾನೆ. ಶಿವಕುಮಾರ್, ಕಾಶಿ ಚಿಕ್ಕಮಾದು, ಗುಂಡೂರಾವ್, ದೊಡ್ಡಮಾದ ಎಂಬುವರು ಚನ್ನಯ್ಯನಿಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಚನ್ನಯ್ಯನ ತಲೆಗೆ ತೀವ್ರ ಪೆಟ್ಟಾಗಿದ್ದು ರಕ್ತಸ್ರಾವವಾಗಿದೆ. ಮರದ ತುಂಡು, ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸುತ್ತಿದಂತೆ ಹಲ್ಲೆ ಮಾಡಿದವರು ಪರಾರಿಯಾಗಿದ್ದಾರೆ. ಸ್ಥಳೀಯರು ಗಾಯಗೊಂಡಿದ್ದ ಚನ್ನಯ್ಯನನ್ನು ಕೊಳ್ಳೇಗಾಲ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಅಗರ ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.