ಜಿಲ್ಲೆ

ಹಳೇ ವಿದ್ಯಾರ್ಥಿಗಳಿಂದ ಗುರುಗಳಿಗೆ ಸನ್ಮಾನ

ಮಳವಳ್ಳಿ: ತಾಲೂಕಿನ ರಾಗಿಬೊಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳು ತಾವು ವ್ಯಾಸಂಗ ಮಾಡುವ ಅವಧಿಯಲ್ಲಿ ಶಿಕ್ಷಣ ಕಲಿಸಿದ, ಪ್ರಸ್ತುತ ಪಟ್ಟಣದಲ್ಲಿ ವಿಶ್ರಾಂತಿ ಜೀವನ ಕಳೆಯುತ್ತಿರುವ ಹಲವು ಶಿಕ್ಷಕರ ಮನೆಗಳಿಗೆ ಬುಧವಾರ ತೆರಳಿ ಅಭಿನಂದಿಸಿ ಗುರುವಂದನೆ ಸಲ್ಲಿಸಿದರು.


1980ರಿಂದ ಎರಡು ದಶಕಗಳ ಕಾಲ ರಾಗಿಬೊಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಬಿ.ಎಂ.ಮಹದೇವಪ್ಪ (ಬಿಎಂಎಂ), ರಾವ್ ಸೋಮಶೇಖರ್(ಆರ್‌ಎಸ್‌ಎಸ್) ಹಾಗೂ ನಾಗರಾಜು ಎಂಬ ನಿವೃತ್ತ ಶಿಕ್ಷಕರ ನಿವಾಸಗಳಿಗೆ 1987-88ನೇ ಸಾಲಿನ 25ಕ್ಕೂ ಹೆಚ್ಚು ಹಿರಿಯ ವಿದ್ಯಾರ್ಥಿಗಳು ತೆರಳಿ ಆಶೀರ್ವಾದ ಪಡೆದರು.


ಶಿಷ್ಯರಿಂದ ಗೌರವ ಸ್ವೀಕರಿ ನಿವೃತ್ತ ಶಿಕ್ಷಕ ರಾವ್ ಸೋಮಶೇಖರ್ ಮಾತನಾಡಿ, ಇಂದಿನ ಯಾಂತ್ರಿಕ ಬದುಕಿನ ಹಾಗೂ ಬಿಡುವಿಲ್ಲದ ಕೆಲಸದ ಒತ್ತಡದ ನಡುವೆಯೂ ವಿಶ್ರಾಂತಿ ಬದುಕು ಸಾಗಿಸುತ್ತಿರುವ ನಮ್ಮ ಕ್ಷೇಮ ವಿಚಾರಿಸುವುದರ ಜತೆಗೆ ಗೌರವಿಸಿದ ಶಿಷ್ಯಂದಿರನ್ನು ಪಡೆದಿರುವ ನಾವೇ ಧನ್ಯರು ಎಂದರಲ್ಲದೆ, ಒಬ್ಬ ಶಿಕ್ಷಕನಿಗೆ ಇದಕ್ಕಿಂತ ದೊಡ್ಡ ಸೌಭಾಗ್ಯ ಮತ್ತೊಂದಿಲ್ಲ ಎಂದು ಭಾವುಕರಾದರು.


ಮತ್ತೊಬ್ಬ ನಿವೃತ್ತ ಶಿಕ್ಷಕ ಬಿ.ಎಂ.ಮಹದೇವಪ್ಪ ಮಾತನಾಡಿ, ಮೂರು ದಶಕಗಳ ನಂತರವೂ ಅಕ್ಷರ ಜ್ಞಾನ ನೀಡಿದ ಗುರುವನ್ನು ನೆನೆದು ಬಂದಿರುವುದು ಸಂಭ್ರಮದ ಕ್ಷಣವಾಗಿದೆ. ಎಷ್ಟೇ ಕಾಲಘಟ್ಟಗಳು ಕಳೆದರೂ ಗುರುವೆಂಬ ಸ್ಥಾನಕ್ಕೆ ಮಾಸದ ಗೌರವ ಇರುತ್ತದೆ ಎಂಬುದಕ್ಕೆ ಇಂದಿನ ಕ್ಷಣವೇ ಸಾಕ್ಷಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.


ಇದೇ ವೇಳೆ ವೃದ್ಧಾಪ್ಯದ ದಿನಗಳಲ್ಲಿರುವ ಶಿಕ್ಷಕರು ಆಗಮಿಸಿದ್ದ ಹಿರಿಯ ವಿದ್ಯಾರ್ಥಿಗಳನ್ನು ಒಬ್ಬೊಬ್ಬರಾಗಿ ಗುರುತಿಸಿ ತಮ್ಮ ವೃತ್ತಿ ಜೀವನದ ದಿನಗಳಲ್ಲಿ ಕಲಿಸಿದ ಕ್ಷಣಗಳನ್ನು ನೆನೆದು ಕೆಲ ಸಮಯ ಸಂತಸದ ಕ್ಷಣಗಳನ್ನು ಮೆಲುಕು ಹಾಕಿದರು.


ಹಿರಿಯ ವಿದ್ಯಾರ್ಥಿಗಳಾದ ಸುಂದ್ರೇಶ್, ಶಿವಪ್ರಸಾದ್, ಮಹದೇವಸ್ವಾಮಿ, ಅಂದಾನಿ, ಜಿ.ಮಹೇಶ್, ಪ್ರಭುಸ್ವಾಮಿ, ರೇಣುಕಾಂಬ, ಸರ್ವಮಂಗಳಾ, ಗೌರಮ್ಮ, ನಾಗರತ್ನ, ಹಂಗ್ರಾಪುರ ಪ್ರಭು, ಜಯಶಂಕರ್, ಮಹಲಿಂಗಸ್ವಾಮಿ, ಜಗದೀಶ್, ಸುರೇಶ್, ಅಂದಾನಿ ಮತ್ತಿತರರಿದ್ದರು.