ಜಿಲ್ಲೆ

ಹಳೇ ಪಿಂಚಣಿ ಯೋಜನೆ ಜಾರಿಗೆ ಆಗ್ರಹಿಸಿ ಪ್ರತಿಭಟನೆ

reportermys

ಮೈಸೂರು: ಹೊಸ ಪಿಂಚಣಿ ಯೋಜನೆ(ಎನ್‌ಪಿಎಸ್) ರದ್ದುಗೊಳಿಸಿ, ಹಳೇ ಪಿಂಚಣಿ ಯೋಜನೆ(ಒಪಿಎಸ್) ಮರು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಮಂಗಳವಾರ ರೈಲ್ವೆ ನೌಕರರು ಪ್ರತಿಭಟನೆ ನಡೆಸಿದರು

.
ಹಳೇ ಪಿಂಚಣಿ ಯೋಜನೆ ಮರು ಸ್ಥಾಪನೆಗಾಗಿ ಜಂಟಿ ವೇದಿಕೆ ನೇತೃತ್ವದಲ್ಲಿ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ರ‌್ಯಾಲಿಯಲ್ಲಿ ಹೆಜ್ಜೆ ಹಾಕಿದ ನೌಕರರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.


ದೇಶದಲ್ಲಿ 1881ರಿಂದ ಪಿಂಚಣಿ ವ್ಯವಸ್ಥೆ ಪ್ರಾರಂಭವಾಗಿದೆ. 1935 ಮತ್ತು ಸ್ವಾತಂತ್ರೃದ ನಂತರ ಕೆಲ ನಿಬಂಧನೆ, ಮಾರ್ಪಾಡುಗಳನ್ನು ಸೇರಿಸಲಾಗಿದೆ. ಪಿಂಚಣಿಯು ನಿವೃತ್ತಿ ಜೀವನದಲ್ಲಿ ಅನಿರೀಕ್ಷಿತ ವೆಚ್ಚ ಭರಿಸಲು ಅನುಕೂಲವಾಗಲಿದೆ. ಹೀಗಾಗಿ, ಸಾರ್ವಜನಿಕ, ಖಾಸಗಿ ಪಿಂಚಣಿ ವ್ಯವಸ್ಥೆಯಾಗಲಿ ಅಥವಾ ವಿವಿಧ ನಿವೃತ್ತಿ ಆದಾಯ ವ್ಯವಸ್ಥೆಯು ಸಂಧ್ಯಾಕಾಲದ ಬದುಕಿನ ನಿರೀಕ್ಷೆಯನ್ನು ಭರಿಸುವಂತಿರಬೇಕು. ಆದರೆ, ಈ ವ್ಯವಸ್ಥೆ ಇದೀಗ ದುರ್ಬಲಗೊಳಿಸಲಾಗಿದೆ ಎಂದು ಕಿಡಿಕಾರಿದರು.


2004ರಲ್ಲಿ ಕೇಂದ್ರ, 2006ರಲ್ಲಿ ರಾಜ್ಯ ಸರ್ಕಾರದ ನೌಕರರಿಗೆ ಹೊಸ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಅಸಮಂಜಸ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿರುವುದರಿಂದ ಎನ್‌ಪಿಎಸ್‌ಯಲ್ಲಿ ಯಾವುದೇ ನಿರ್ದಿಷ್ಟ ಪಿಂಚಣಿ ಭರವಸೆ ಇಲ್ಲ. ಇದು ನಿವೃತ್ತ ನೌಕರರಿಗೆ ಮಾರಕವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.


ದಕ್ಷಿಣ ನೈಋತ್ಯ ರೈಲ್ವೆ ಯೂನಿಯನ್ ವಿಭಾಗೀಯ ಕಾರ್ಯದರ್ಶಿ ಶಿವಪ್ರಕಾಶ್, ಜಿಲ್ಲಾ ಅಧ್ಯಕ್ಷ ಸೋಮೇಗೌಡ, ವಲಯ ಕಾರ್ಯದರ್ಶಿ ಅರ್ಥೋಡ್ ಫರ್ನಾಂಡಿಸ್, ವಿಭಾಗೀಯ ಅಧ್ಯಕ್ಷ ಸೋಮಶೇಖರ್ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.