ತರೀಕೆರೆ: ಸೂಕ್ತ ಜಾಗದ ವ್ಯವಸ್ಥೆ ಇರುವ ಹಳೆಯ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಹೊಸ ಕೋರ್ಸ್‌ಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ತಿಳಿಸಿದರು.
ಬಾವಿಕೆರೆ ಗ್ರಾಮದಲ್ಲಿ ಅಂದಾಜು 8 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ನೂತನ ಸರ್ಕಾರಿ ಪಾಲಿಟೆಕ್ನಿಕ್ ಕಟ್ಟಡ ಮಂಗಳವಾರ ಉದ್ಘಾಟಿಸಿ, 2.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹೆಚ್ಚುವರಿ ಕೊಠಡಿಗಳು ಮತ್ತು ವರ್ಕ್‌ಶಾಪ್ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ರಾಜ್ಯದ 107 ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳ ಪೈಕಿ ಮೂರರಲ್ಲ್ಲಿ ಕೇವಲ ಒಂದು, 13 ಪಾಲಿಟೆಕ್ನಿಕ್‌ಗಳಲ್ಲಿ 2 ಕೋರ್ಸುಗಳು ಮಾತ್ರ ಇವೆ. ಇಲಾಖೆ ಒಂದೇ ಕೋರ್ಸ್‌ಗೆ ನೂರಾರು ಕೋಟಿ ವ್ಯಯಿಸುವ ದುಸ್ಥಿತಿ ನಿರ್ಮಾಣವಾಗಿದ್ದು, ಮುಂದಿನ ವರ್ಷದಿಂದಲೇ ಒಂದೆರಡು ಕೋರ್ಸುಗಳಿರುವ ಪಾಲಿಟೆಕ್ನಿಕ್‌ಗಳಲ್ಲಿ ಕನಿಷ್ಠ 4 ಸಮಾನಾಂತರ ಕೋರ್ಸ್‌ಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಎಲ್ಲ ಪಾಲಿಟೆಕ್ನಿಕ್‌ಗಳಲ್ಲಿ ಬೇಡಿಕೆಗೆ ಅನುಸಾರವಾದ ಕೋರ್ಸ್‌ಗಳನ್ನು ಪ್ರಾರಂಭಿಸಲು ಸಿದ್ಧತೆ ನಡೆದಿದ್ದು, ಸದ್ಯದಲ್ಲೇ ಎಐಸಿಟಿಗೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ಮಾಹಿತಿ ನೀಡಿದರು.
2023ನೇ ಸಾಲಿನ ನವೆಂಬರ್‌ನಲ್ಲಿ ತರೀಕೆರೆ ತಾಲೂಕಿನ ಬಾವಿಕೆರೆ ಹಾಗೂ ಹಾವೇರಿ ಜಿಲ್ಲೆಯ ಬ್ಯಾಡಗಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ 4 ಕೋರ್ಸ್‌ಗಳನ್ನು ಪ್ರಾರಂಭಿಸಲು ಎಐಸಿಟಿಗೆ ಪ್ರಸ್ತಾವನೆ ಸಲ್ಲಿಸಿ ಅಲ್ಲಿಂದ ಅನುಮತಿ ಸಿಕ್ಕ ಬಳಿಕ ತರಗತಿ ಆರಂಭಿಸಿದ್ದರೂ, ಕಟ್ಟಡವನ್ನು ಈಗ ಉದ್ಘಾಟಿಸಲಾಗಿದೆ. ಕಡೂರಿನಲ್ಲಿ 2023ನೇ ಸಾಲಿನಲ್ಲೇ 3 ಕೋರ್ಸ್‌ಗಳ ಪಾಲಿಟೆಕ್ನಿಕ್ ಪ್ರಾರಂಭವಾಗಿದ್ದರೂ, ಅಧಿಕೃತವಾಗಿ ಇನ್ನೂ ಉದ್ಘಾಟನೆಯಾಗಿಲ್ಲ ಎಂದು ಹೇಳಿದರು.
ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ, ಪ್ರತಿ ತಿಂಗಳೂ ರಾಜ್ಯ ಸರ್ಕಾರದಿಂದ ಕ್ಷೇತ್ರದ ಸಮಗ್ರ ಅಭಿವದ್ಧಿಗಾಗಿಯೇ 11 ಕೋಟಿಯಿಂದ 12 ಕೋಟಿ ರೂ. ಅನುದಾನ ಬರುತ್ತಿದೆ. ಈ ಅನುದಾನದಲ್ಲಿ ರಸ್ತೆ ಇತರ ಅಭಿವದ್ಧಿ ಕಾಮಗಾರಿ ಹಂತ ಹಂತವಾಗಿ ಕೈಗೆತ್ತಿಗೊಳ್ಳಲಾಗುತ್ತಿದೆ. ಬಾವಿಕೆರೆ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ತ್ವರಿತವಾಗಿ ಕಂಪ್ಯೂಟರ್ ವ್ಯವಸ್ಥೆ, ಪ್ರಯೋಗ ಶಾಲೆ ಇತರ ಸೌಲಭ್ಯಗಳ ಜತೆ ಕಾಂಪೌಂಡ್ ನಿರ್ಮಾಣಕ್ಕೆ ಆದ್ಯತೆ ನೀಡಬೇಕಾಗಿದೆ. ಈ ಬೇಡಿಕೆ ಈಡೇರಿಸಲು ಅಗತ್ಯ ಅನುದಾನದ ಅವಶ್ಯಕತೆ ಇದೆ. ಇದಕ್ಕಾಗಿ ಸಚಿವರು 10 ಕೋಟಿ ರೂ.ಒದಗಿಸಿಕೊಡಬೇಕು. ಜತೆಗೆ ಬಾವಿಕೆರೆ ಪಾಲಿಟೆಕ್ನಿಕ್‌ಅನ್ನು ಮಾದರಿಗೊಳಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ಬಾವಿಕೆರೆ ಪಾಲಿಟೆಕ್ನಿಕ್ ಆವರಣದಲ್ಲೇ ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸಲು ಸಿಎಂಗೆ ಪತ್ರ ಬರೆಯಲಾಗಿತ್ತಾದರೂ, ಮನವಿ ತಿರಸ್ಕರಿಸಲಾಗಿದೆ. ಅವಕಾಶ ಸಿಕ್ಕರೆ ಮತ್ತೊಮ್ಮೆ ಸಿಎಂ ಬಳಿ ಈ ವಿಷಯ ಪ್ರಸ್ತಾಪಿಸಿ ತಾಂತ್ರಿಕ ಕಾಲೇಜು ಸ್ಥಾಪನೆಗೆ ಒತ್ತಾಯಿಸಲಾಗುವುದು. ಬಾವಿಕೆರೆ ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ಸಲುವಾಗಿ ಸದ್ಯದಲ್ಲೇ ಬಸ್ ನಿಲ್ದಾಣ ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಬಾವಿಕೆರೆ ಪಾಲಿಟೆಕ್ನಿಕ್ ಸೇರಿ ವಿವಿಧ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಚಿವ ಡಾ. ಎಂ.ಸಿ.ಸುಧಾಕರ್ ಸಂವಾದ ನಡೆಸಿದರು. ಎಲ್ಲ ವಿವಿಯ ತಾಂತ್ರಿಕ ಕಾಲೇಜುಗಳ ಜತೆ ಪಾಲಿಟೆಕ್ನಿಕ್ ಕಾಲೇಜುಗಳ ಪರೀಕ್ಷೆ ಮತ್ತು ಪ್ರವೇಶಾತಿ ಅವಧಿ ಏಕರೂಪವಾಗಿರಬೇಕೆಂಬ ಮನವಿಗೆ ಉತ್ತರಿಸಿ, ಈವೆರೆಗೆ ಹಲವು ಗೊಂದಲದಿಂದ ಕೈಗೊಳ್ಳಲು ಆಗದಿದ್ದ ಪರೀಕ್ಷೆ ಮತ್ತು ಪ್ರವೇಶಾತಿ ಅವಧಿಯನ್ನು ಎಲ್ಲ ವಿವಿಗಳಲ್ಲಿ ಸಮಾನಾಂತರಗೊಳಿಸಲು ಯೋಜನೆ ರೂಪಿಸಲಾಗುವುದು ಎಂದರು. ಅಜ್ಜಂಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿ ಕತಿಕಾ ಮಾತನಾಡಿ, ಸರ್ಕಾರ ಉದ್ಯೋಗಸ್ಥ ಮಹಿಳೆಯರಿಗೆ ಮುಟ್ಟಿನ ರಜೆ ನೀಡಿದೆ. ಆದರೆ ಕಾಲೇಜುಗಳಲ್ಲಿ ಶೇ.75 ಹಾಜರಾತಿ ಕಡ್ಡಾಯಗೊಳಿಸಿರುವುದರಿಂದ ವಿದ್ಯಾರ್ಥಿನಿಯರಿಗೆ ಈ ಸೌಲಭ್ಯ ಸಿಗದಂತಾಗಿದೆ. ಮುಟ್ಟಿನ ರಜೆಗಾಗಿ ಹಾಜರಾತಿಯಲ್ಲಿ ವಿದ್ಯಾರ್ಥಿನಿಯರಿಗೆ ರಿಯಾಯಿತಿ ನೀಡಬೇಕು ಎಂದು ಒತ್ತಾಯಿಸಿದರು. ಶಿಕ್ಷಣ ವ್ಯವಸ್ಥೆಯಲ್ಲಿ ಈ ಸೌಲಭ್ಯ ಅಷ್ಟು ಸೂಕ್ತವಲ್ಲ. ಈ ಸಲುವಾಗಿ ಸರ್ಕಾರ ಹಣ ಖರ್ಚು ಮಾಡಿ ಸ್ಯಾನಿಟರಿ ಸೌಲಭ್ಯ ಕಲ್ಪಿಸಿದೆ. ಈ ಸಂಬಂಧ ಕೇರಳ ರಾಜ್ಯದಿಂದ ಸೂಕ್ತ ಮಾಹಿತಿ ಪಡೆದು ಪರಿಶೀಲಿಸಲಾಗುವುದು ಎಂದು ಡಾ. ಎಂ.ಸಿ.ಸುಧಾಕರ್ ಹೇಳಿದರು.
ಹಿಂದೆ ಆಡಳಿತ ನಡೆಸಿರುವ ಪ್ರಭಾವಿ ರಾಜಕಾರಣಿಗಳ ಕ್ಷೇತ್ರದಲ್ಲಿ ಎಲ್ಲ ಹೋಬಳಿಯಲ್ಲೂ ಡಿಗ್ರಿ ಕಾಲೇಜು ಮಂಜೂರು ಮಾಡಲಾಗಿದೆ. ಕೇಂದ್ರದ ನೀತಿ ಆಯೋಗದ ಅಧ್ಯಯನದ ಪ್ರಕಾರ 1 ಲಕ್ಷ ಜನಸಂಖ್ಯೆಗೆ ಸರಾಸರಿ 30 ಕಾಲೇಜು ಗಳಿರಬೇಕೆಂಬ ನಿಯಮವಿದ್ದರೂ, ಬಿಹಾರದಲ್ಲಿ 1 ಲಕ್ಷ ಜನಸಂಖ್ಯೆಗೆ ಕೇವಲ 7, ಕರ್ನಾಟಕದಲ್ಲಿ ಒಟ್ಟು 66 ಉನ್ನತ ಶಿಕ್ಷಣದ ಕಾಲೇಜುಗಳಿವೆ. ಹೋಬಳಿ ಕೇಂದ್ರದಲ್ಲಿ ಸ್ಥಾಪಿಸಿರುವ ಬಹುತೇಕ ಡಿಗ್ರಿ ಕಾಲೇಜುಗಳಲ್ಲಿ ಕೇವಲ 150 ವಿದ್ಯಾರ್ಥಿಗಳು ವ್ಯಾಸಾಂಗ ಮಾಡುವಂತಾಗಿದ್ದು, ಈ ದಿಸೆಯಲ್ಲಿ ತಾಲೂಕು ಕೇಂದ್ರದಲ್ಲಿರುವ ಡಿಗ್ರಿ ಕಾಲೇಜುಗಳ ಬಲವರ್ಧನೆಗೆ ಶ್ರಮವಹಿಸಲಾಗುವುದು ಎಂದು ಸಚಿವ ಡಾ. ಎಂ.ಸಿ.ಸುಧಾಕರ್ ಹೇಳಿದರು.
ಭದ್ರಾ ಕಾಡಾ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್, ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ ಅರವಿಂದ್, ಗ್ರಾಪಂ ಅಧ್ಯಕ್ಷೆ ಜಯಂತಿ, ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಎಚ್.ಕೇಶವ, ಜಿಲ್ಲಾ ಪಂಚ ಗ್ಯಾರಂಟಿಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ತಹಸೀಲ್ದಾರ್ ವಿಶ್ವಜೀತ ಮೆಹತಾ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಯು.ಾರೂಕ್, ಟಿ.ಎನ್.ಜಗದೀಶ್, ಸೀತಾರಾಂ, ಡಾ. ಎಲ್.ಎಸ್.ಮಂಜುನಾಥ್ ಮತ್ತಿತರರಿದ್ದರು.