ಮೈಸೂರು: ಹಳೇ ದ್ವೇಷದಿಂದ ಮೈಸೂರು ತಾಲೂಕಿನ ಅನಗನಹಳ್ಳಿಯ ತೋಟದ ಮನೆಯಲ್ಲಿ ರೌಡಿಶೀಟರ್‌ಒಬ್ಬನನ್ನು ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಲಾಗಿದೆ.
ಮೈಸೂರು ತಾಲೂಕಿನ ಜಯಪುರ ಹೋಬಳಿ ಗೋಪಾಲಪುರ ನಿವಾಸಿ ಪ್ರಕಾಶ್ ಅವರ ಪುತ್ರ ದೊರೆಸ್ವಾಮಿ ಅಲಿಯಾಸ್ ಸೂರ್ಯ (30) ಹತ್ಯೆಯಾದವ. ಈತನ ವಿರುದ್ಧ ಜಯಪುರ ಪೊಲೀಸ್ ಠಾಣೆಯ ರೌಡಿಶೀಟರ್ ಪಟ್ಟಿ ತೆರೆಯಲಾಗಿದ್ದು, ಕೊಲೆ ಯತ್ನ, ಕಳವು ಪ್ರಕರಣಗಳು ದಾಖಲಾಗಿವೆ.
ಈತ ವಿವಾಹವಾಗಿದ್ದೂರು ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಮತ್ತೊಬ್ಬ ಯುವತಿಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದ. ಇದರಿಂದ ಬೇಸತ್ತ ಪತ್ನಿ ಮನೆ ಬಿಟ್ಟು ಹೋಗಿದ್ದರು. ಈ ನಡುವೆ, ಇಬ್ಬರು ಜತೆಗಿರುವ ಖಾಸಗಿ ಫೋಟೋಗಳನ್ನು ವ್ಯಾಟ್ಸ್‌ಆ್ಯಪ್ ಸ್ಟೇಟಸ್‌ಗೆ ಹಾಕಿದ್ದ. ಕೆಲ ದಿನಗಳಿಂದ ಹಣ, ಆಸ್ತಿಗಾಗಿ ಯುವತಿ ಪೀಡಿಸುತ್ತಿರುವುದಾಗಿ ಕುಟುಂಬಸ್ಥರಿಗೂ ತಿಳಿಸಿದ್ದ.
ಬುಧವಾರ ರಾತ್ರಿ ಸಹ ತೋಟದ ಮನೆಯಲ್ಲಿ ಯುವತಿಯೊಂದಿಗೆ ಇದ್ದ. ಗುರುವಾರ ಕೊಲೆಯಾಗಿರುವ ವಿಚಾರ ಗೊತ್ತಾಗಿದೆ. ರಾತ್ರಿ ಯುವತಿ ಜತೆಯಲ್ಲೇ ಇದ್ದು ಬೆಳಗ್ಗೆ ವಾಪಸ್ ಹೋಗಿರುವುದನ್ನು ಕೆಲವರು ನೋಡಿದ್ದಾರೆ. ಯುವತಿಯೇ ಕೊಲೆ ಮಾಡಿರುವುದಾಗಿ ಮೃತನ ಕುಟುಂಬಸ್ಥರು ದೂರಿದ್ದಾರೆ.
ದೂರು ದಾಖಲಿಸಿಕೊಂಡು ಜಯಪುರ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದು, ಹಳೆಯ ದ್ವೇಷದ ಹಿನ್ನೆಲೆಯಲ್ಲಿ ದೊರೆಸ್ವಾಮಿ ಕೊಲೆಯಾಗಿರುವುದನ್ನು ಪತ್ತೆ ಹಚ್ಚಿದ್ದು, ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್, ಎಎಸ್‌ಪಿ ಸಿ.ಮಲ್ಲಿಕ್, ಡಿವೈಎಸ್‌ಪಿ ಕರೀಂ ರಾವತರ್, ಸರ್ಕಲ್ ಇನ್ಸ್‌ಪೆಕ್ಟರ್ ಶಿವನಂಜಶೆಟ್ಟಿ, ಜಯಪುರ ಠಾಣೆ ಎಸ್‌ಐ ಪ್ರಕಾಶ್ ಎತ್ತಿನಮನಿ ಮತ್ತು ಸಿಬ್ಬಂದಿ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.