ಜಿಲ್ಲೆ

ಹಳೇ ಕೆಂಪಯ್ಯನಹುಂಡಿಯಲ್ಲಿ ಚಿರತೆ ಪ್ರತ್ಯಕ್ಷ

ರಾಜಣ್ಣ

ತಿ.ನರಸೀಪುರ: ಕೆಲವು ತಿಂಗಳಿನಿಂದ ತಾಲೂಕಿನಲ್ಲಿ ಕಣ್ಮರೆಯಾಗಿದ್ದ ಚಿರತೆಗಳು ಮತ್ತೆ ಕಾಣಿಸಿಕೊಂಡಿದ್ದು, ಹಳೇ ಕೆಂಪಯ್ಯನಹುಂಡಿ ಗ್ರಾಮದ ತೋಟದ ಮನೆಯೊಂದರಲ್ಲಿ ಬುಧವಾರ ರಾತ್ರಿ ಚಿರತೆ ಪ್ರತ್ಯಕ್ಷವಾಗಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ತಾಲೂಕಿನ ಹಳೇ ಕೆಂಪಯ್ಯನಹುಂಡಿ ಗ್ರಾಮದ ಜೋಡಿ ತುಂಬಲ ರಸ್ತೆಯಲ್ಲಿರುವ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ಮಹದೇವಣ್ಣ ಅವರ ತೋಟದ ಮನೆಯ ಮುಂದೆ ಕಳೆದ ರಾತ್ರಿ ಚಿರತೆ ಓಡಾಡಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದ್ದು, ಚಿರತೆ ಓಡಾಟದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕೆಲ ತಿಂಗಳ ಹಿಂದೆ ತಾಲೂಕಿನಾದ್ಯಂತ ಚಿರತೆ ದಾಳಿಗೆ 10ಕ್ಕಿಂತಲೂ ಹೆಚ್ಚು ಮಂದಿ ಬಲಿಯಾಗಿದ್ದರು. ತದ ನಂತರ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಚಿರತೆಗಳನ್ನು ಸೆರೆಹಿಡಿದ ಹಿನ್ನೆಲೆಯಲ್ಲಿ ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಈಗ ಮತ್ತೆ ಚಿರತೆಗಳು ಕಾಣಿಸಿಕೊಳ್ಳುತ್ತಿರುವುದರಿಂದ ಗ್ರಾಮಸ್ಥರ ನಿದ್ದೆಗೆಡಿಸಿದೆ.

ಕೆಂಪಯ್ಯನಹುಂಡಿ ಮಹದೇವಣ್ಣ ಅವರ ತೋಟದ ಮನೆಯಲ್ಲಿ ಭಾರಿ ಗಾತ್ರದ ಚಿರತೆಯೊಂದು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅದನ್ನು ಸೆರೆಹಿಡಿಯಲು ಬೋನು ಇರಿಸಿತ್ತಾದರೂ ಬೋನಿಗೆ ಬೀಳದ ಚಿರತೆ ಮತ್ತೆ ಓಡಾಟ ನಡೆಸುತ್ತಿದ್ದು, ನಾಯಿಗಳ ಬೇಟೆಗೆ ಹೊಂಚು ಹಾಕುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಹಾಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಗ್ರಾಮದಲ್ಲಿ ಓಡಾಡುತ್ತಿರುವ ಚಿರತೆಯನ್ನು ಸೆರೆಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.