ಮಳವಳ್ಳಿ: ನನ್ನ ವಿವೇಚನೆಯ ಪರಿಮಿತಿಯಲ್ಲಿ ಸಿಕ್ಕ ಕಡಿಮೆ ಅವಧಿಯಲ್ಲೇ ಬಹಳಷ್ಟು ಹಳೆಯ ಪ್ರಕರಣಗಳನ್ನು ಇತ್ಯರ್ಥಪಡಿಸುವ ಮೂಲಕ ನ್ಯಾಯಾಂಗ ಸೇವೆಯ ವೃತ್ತಿ ಬದುಕಿನಲ್ಲಿ ತೃಪ್ತಿ ತಂದಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶೆ ಮಮತಾ ಶಿವಪೂಜೆ ತಿಳಿಸಿದರು.
ಪಟ್ಟಣದ ನ್ಯಾಯಾಲಯದಲ್ಲಿ ನ್ಯಾಯಾಧೀರಾಗಿ ಸೇವೆ ಸಲ್ಲಿಸಿ ಪದೋನ್ನತಿಗೊಂಡು ವರ್ಗಾಣೆಯಾದ ಹಿನ್ನೆಲೆಯಲ್ಲಿ ವಕೀಲರ ಸಂಘದ ವತಿಯಿಂದ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಟ್ಟಣದಲ್ಲಿ ಕರ್ತವ್ಯ ನಿರ್ವಹಿಸಿದ ಕಳೆದ ಹದಿನೆಂಟು ತಿಂಗಳಲ್ಲಿ 20-30 ವರ್ಷಗಳಿಂದ ಉಳಿದಿದ್ದ ಪ್ರಕರಣಗಳನ್ನು ಇತ್ಯರ್ಥ ಮಾಡುವುದರ ಜತೆಗೆ ಹೈಕೋರ್ಟ್‌ವರೆಗೂ ಕೊಂಡೊಯ್ದಿದ್ದ ಪ್ರಕರಣಕ್ಕೂ ತೀರ್ಪು ನೀಡುವಂತಹ ಉತ್ತಮ ಅವಕಾಶಗಳು ದೊರೆತವು. ಇದಕ್ಕೆ ಇಲ್ಲಿನ ಎಲ್ಲ ವಕೀಲರ ಸಹಕಾರ ಮತ್ತು ನನ್ನ ಸಹದ್ಯೋಗಿ ಹಿರಿಯ ನ್ಯಾಯಾಧೀಶರ ಮಾರ್ಗದರ್ಶನದಿಂದ ಸಾಧ್ಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ನ್ಯಾಯಾಧೀಶೆಯಾಗಿ ಇಲ್ಲಿನ ಸೇವಾವಧಿಯ ದಿನಗಳಲ್ಲಿ ನನ್ನಿಂದ ಯಾರಿಗಾದರೂ ನೋವಾಗಿದ್ದರೆ ಅದನ್ನು ಅನ್ಯತಾ ಭಾವಿಸದಿರಿ. ನೊಂದವರಿಗೆ ಸಾಕ್ಷಿ ಆಧಾರದಲ್ಲಿ ನ್ಯಾಯ ಇತ್ಯರ್ಥಪಡಿಸುವ ಉದ್ದೇಶದಿಂದ ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆಯಿಂದಷ್ಟೇ ಕ್ರಮ ವಹಿಸಬೇಕಾಗಿರುತ್ತದೆ ಎಂದರು.
ನ್ಯಾಯಾಧೀಶರಾದ ಮಾದೇಶ್, ಸಚಿನ್ ಶಿವಪೂಜೆ, ವಕೀಲರ ಸಂಘದ ಅಧ್ಯಕ್ಷ ಸುಂದರ್, ಕಾರ್ಯದರ್ಶಿ ನಟೇಶ್, ಹಿರಿಯ ವಕೀಲರಾದ ಗುರುಸ್ವಾಮಿ, ಎಚ್.ಪಿ.ನಾಗರಾಜು, ಎಚ್.ಪಿ.ರಮೇಶ್, ಮರಿಸ್ವಾಮಿ ಸೇರಿದಂತೆ ಇತರ ವಕೀಲರು ಹಾಜರಿದ್ದರು.