ಹರಪನಹಳ್ಳಿ: ಕೇಂದ್ರ ಸರ್ಕಾರ ಅಭಿವೃದ್ಧಿ ಹೆಸರಿನಲ್ಲಿ ಕಾರ್ಮಿಕರನ್ನು ಕಾರ್ಪೋರೇಟ್ ಕಂಪನಿಗಳ ಸೇವಕರನ್ನಾಗಿ ಮಾಡಲು ಹೊರಟಿದೆ ಎಂದು ಎಐಟಿಯುಸಿ ರಾಜ್ಯ ಸಮಿತಿ ಸದಸ್ಯ ಗುಡಿಹಳ್ಳಿ ಹಾಲೇಶ್ ಆರೋಪಿಸಿದರು.
ಪಟ್ಟಣದಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ನಡೆದ ಸಾರ್ವತ್ರಿಕ ಮುಷ್ಕರದಲ್ಲಿ ಬುಧವಾರ ಮಾತನಾಡಿದರು. ವೇತನ ಸಂಹಿತೆ, ಕೈಗಾರಿಕಾ ಸಂಹಿತೆ, ಕಾನೂನು ಔದ್ಯೋಗಿಕ ಸುರಕ್ಷತೆ, ಮತ್ತು ಕೈಗಾರಿಕಾ ಭಾಂದವ್ಯ ಸಂಹಿತೆ ಸೇರಿ 29 ಕಾನೂನುಗಳನ್ನು ರೂಪಿಸಿರುವುದು ಖಂಡನೀಯ ಎಂದರು.
ಜಿಲ್ಲಾಧ್ಯಕ್ಷ ಸಂದೇರ ಪರಶುರಾಮ್ ಮಾತನಾಡಿ. ತೆರಿಗೆಗಳ ಭಾರ ಮತ್ತು ಬೆಲೆ ಏರಿಕೆಯಿಂದ ದೇಶದ ಜನತೆ ತೀವ್ರ ಸಂಕಷ್ಟದ ಸ್ಥಿತಿಗೆ ತಲುಪುವಂತಾಗಿದೆ. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಎನ್‌ಪಿಎಸ್ ರದ್ದುಗೊಳಿಸಿ ಹಳೆಯ ಪಿಂಚಣಿ ಪದ್ಧತಿ ಜಾರಿಗೊಳಿಸಬೇಕು. ಅರ್ಜಿ ಸಲ್ಲಿಸಿದ 45 ದಿನಗಳ ಒಳಗೆ ಕಾರ್ಮಿಕ ಸಂಘಗಳಿಗೆ ಮಾನ್ಯತೆ ನೀಡಬೇಕು.ಅಗತ್ಯ ವಸ್ತುಗಳ ಮೇಲೆ ವಿಧಿಸಿರುವ ಜಿಎಸ್‌ಟಿ ರದ್ದುಗೊಳಿಸಬೇಕೆಂದು ಆಗ್ರಹಿಸಿದರು.
ಸಿಪಿಐ ತಾಲೂಕು ಕಾರ್ಯದರ್ಶಿ ಸಂತೋಷ್ ಎಚ್ ಎಂ ಮಾತನಾಡಿ. ವಿದ್ಯುತ್ ತಿದ್ದುಪಡಿ ಮಸೂದೆ ಹಿಂಪಡೆಯಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ 200 ದಿನ ಕೆಲಸ ನೀಡಿ ದಿನಕ್ಕೆ 600 ರೂ. ಕೂಲಿ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು. ಬಳಿಗನೂರು ಕೊಟ್ರೇಶ್, ಪೂಜಾರ್ ಬಸವರಾಜ್, ಎಚ್.ವೆಂಕಟೇಶ್, ಪುಷ್ಪಾ, ಅರುಣ್ ಕುಮಾರ್, ಎಸ್.ಪರುಶುರಾಮ್, ಗೌರಿಹಳ್ಳಿ ಹನುಮಂತ, ಕುಂಚೂರು ಶಫಿವುಲ್ಲಾ, ನಟರಾಜಪ್ಪ, ಬಿ.ಭಾಗ್ಯಮ್ಮ ಇತರರಿದ್ದರು.