ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಮಿಕ, ರೈತ ವಿರೋಧಿ ನೀತಿ ಖಂಡಿಸಿ ಜಂಟಿ ಕಾರ್ಮಿಕ ಸಂಘಟನೆಗಳ ಸಮಿತಿ (ಜೆಸಿಟಿಯು) ಜಿಲ್ಲಾಧಿಕಾರಿ ಕಚೇರಿ ಎದುರು ಒಂದು ದಿನ ಸಾಂಕೇತಿಕ ಧರಣಿ ನಡೆಸಿತು. 
ಜಿಲ್ಲೆ

ಹಳೆ ಪಿಂಚಣಿ ಪದ್ಧತಿ ಜಾರಿಗೊಳಿಸಿ

ವಿಜಯಪುರ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಮಿಕ, ರೈತ ವಿರೋಧಿ ನೀತಿ ಖಂಡಿಸಿ ಜಂಟಿ ಕಾರ್ಮಿಕ ಸಂಘಟನೆಗಳ ಸಮಿತಿ (ಜೆಸಿಟಿಯು) ಬುಧವಾರ ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಎದುರು ಒಂದು ದಿನ ಸಾಂಕೇತಿಕ ಧರಣಿ ನಡೆಸಿತು.

ಸರ್ಕಾರಿ ಸಂಸ್ಥೆ ಮಾರಾಟ ಮಾಡುವುದನ್ನು ನಿಲ್ಲಿಸಿ, ಗುತ್ತಿಗೆ ನೌಕರರು ಮತ್ತು ಸ್ಕೀಮ್ ವರ್ಕ್ಸ್‌ಗಳನ್ನು ಖಾಯಂ ಮಾಡಿ ಕೆಲಸದ ಅವಧಿ 12 ಗಂಟೆ ಮಾಡಿದ ಆದೇಶ ಹಿಂಪಡೆಯಬೇಕು. ಹಳೆಯ ಪಿಂಚಣಿ ಪದ್ಧತಿ ಜಾರಿಗೊಳಿಸಿ ಎಂದು ಘೋಷಣೆ ಕೂಗಿದರು.

ಕಾರ್ಮಿಕ ರೈತ ಮುಖಂಡ ಭೀಮಶಿ ಕಲಾದಗಿ ಮಾತನಾಡಿ, ಕೇಂದ್ರದಲ್ಲಿ ಕಳೆದ 9 ವರ್ಷಗಳಿಂದ ಬಿಜೆಪಿ ಅಧಿಕಾರ ನಡೆಸುತ್ತಿದೆ. ಸಾರ್ವಜನಿಕರ ಹಿತ ಕಾಪಾಡುವ ಬದಲು ಅವರನ್ನು ಷೋಷಣೆ ಮಾಡುತ್ತಿದೆ. ಈ ಕುರಿತು ನಮ್ಮ ಹೋರಾಟ ಮುಂದುವರಿಸಲಾಗುವುದು ಎಂದರು.

ಎಐಯುಟಿಯುಸಿ ಜಿಲ್ಲಾ ಸಂಘಟನಾಕಾರ ಎಚ್.ಟಿ. ಭರತಕುಮಾರ ಮಾತನಾಡಿ, ನಿರುದ್ಯೋಗ ದೇಶದ ಯುವ ಜನತೆಯನ್ನು ಕಾಡುತ್ತಿದೆ. ನೋಟ್ ಅಮಾನ್ಯೀಕರಣದ ನಂತರ ಜನ ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ವಿದೇಶಿ ಹಣ ತರುವುದಾಗಿ ಭರವಸೆ ನೀಡಿದ್ದ ಕೇಂದ್ರ ಸರ್ಕಾರ ಅದನ್ನು ತರಲು ವಿಫಲವಾಯಿತು. ಕೇವಲ ಶ್ರೀಮಂತರ ಅನುಕೂಲಕ್ಕಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ಈ ಕುರಿತು ಕೇಂದ್ರ ಸರ್ಕಾರ ಶ್ವೇತ ಪತ್ರ ಹೊರಡಿಸಬೇಕು ಎಂದರು.

ಜೆಸಿಟಿಯು ಜಿಲ್ಲಾ ಸಂಚಾಲಕ ಪ್ರಭುಗೌಡ ಪಾಟೀಲ ಮಾತನಾಡಿ, ಕೇಂದ್ರ ಸರ್ಕಾರದ ಅಧೀನದಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಬಿದ್ದಿವೆ. ಸಾರ್ವಜನಿಕ ಉದ್ದಿಮೆಗಳನ್ನು ಬಿಡಿಗಾಸಿಗೆ ಖಾಸಗಿಯವರಿಗೆ ಮಾಡಲಾಗುತ್ತಿದ್ದು, ಅವರು ದೊಡ್ಡ ಸಂಖ್ಯೆಯಲ್ಲಿ ನೌಕರರನ್ನು ವಜಾಗೊಳಿಸುತ್ತಿದ್ದಾರೆ. ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಂಡು ಪಿಎ್, ಇಎಸ್‌ಐ ಮತ್ತು ಕನಿಷ್ಠ ವೇತನ ನೀಡದೆ ಕಾರ್ಮಿಕರನ್ನು ವಂಚಿಸಲಾಗುತ್ತಿದೆ. ಕೋವಿಡ್ ಸಾಂಕ್ರಾಮಿಕ ಪಿಡುಗಿನ ನಂತರ ಬಡವರ ಜೀವನ ಸಂಕಷ್ಟದಲ್ಲಿರುವಾಗ ಮತ್ತೆ ಬಡವರ ಜೀವನ ಮಟ್ಟ ಸುಧಾರಿಸಲು ಕೇಂದ್ರ ಸರ್ಕಾರ ಪ್ರಯತ್ನ ಮಾಡಿಲ್ಲ ಎಂದರು.

ಅಣ್ಣಾರಾಯ ಈಳಗೇರ, ಸಿಐಟಿಯು ಪ್ರಧಾನ ಕಾರ್ಯದರ್ಶಿ, ಜೆಸಿಟಿಯು ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಎಚ್.ಟಿ. ಸುರೇಖಾ ರಜಪೂತ, ದ್ಯಾಮಣ್ಣ ಬಿರಾದಾರ, ಮಹಾದೇವ ಧರ್ಮಶೆಟ್ಟಿ, ಗಂಗು ಹಲಗಿ, ಹಣಮಂತ ಮಮದಾಪೂರ, ಅನುಸೂಯಾ ಬಾಗೇವಾಡಿ, ಬಾಳಾಬಾಯಿ ಹೂಗಾರ, ಭಾರತಿ ವಾಲಿ, ಸುನಂದಾ ನಾಯಕ, ಅಶ್ವಿನಿ ತಳವಾರ, ಸುವರ್ಣಾ ಹಲಗಣಿ, ಅನಸೂಯಾ ಹಜೇರಿ, ಜಯಶ್ರೀ ಪೂಜಾರಿ, ಸುರೇಖಾ ವಾಗಮೊರೆ, ರೇಣುಕಾ ದಂದರಗಿ, ರಾಜಮಾ ನದಾಫ್, ಸುಲೋಚನಾ ಮನಗೂಳಿ, ಶಶಿಕಲಾ ಮ್ಯಾಗೇರಿ ಉಪಸ್ಥಿತರಿದ್ದರು.