ಜಿಲ್ಲೆ

ಹಳೆ ದಾಖಲೆ ಮುರಿದ ಕರೊನಾ!

ಧಾರವಾಡ: ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷೀಲಿ ಎಂಬಂತೆ ಜಿಲ್ಲೆಯಲ್ಲಿ ತುಸು ಕಡಿಮೆಯಾಗಿದ್ದ ಕರೊನಾ ಸೋಂಕಿತರ ಸಂಖ್ಯೆ ಮತ್ತೆ ಮೇಲ್ಮುಖವಾಗಿದೆ. ಮಂಗಳವಾರ 276 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇದು ಒಂದು ದಿನದ ಅತಿ ಹೆಚ್ಚಿನದಾಗಿದೆ. ಇದುವರೆಗೆ ಒಂದೇ ದಿನದ ಗರಿಷ್ಠ ಸಂಖ್ಯೆ 266 ಆಗಿತ್ತು.

ಒಟ್ಟು ಪ್ರಕರಣಗಳ ಸಂಖ್ಯೆ 6399ಕ್ಕೇರಿದೆ. ಈವರೆಗೆ 3953 ಜನ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2240 ಪ್ರಕರಣಗಳು ಸಕ್ರಿಯವಾಗಿವೆ. 38 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

9 ಜನ ಮೃತಪಟ್ಟಿರುವುದಾಗಿ ಮಂಗಳವಾರ ತಿಳಿಸಲಾಗಿದ್ದು, ಒಟ್ಟು ಸಾವಿನ ಸಂಖ್ಯೆ 206ಕ್ಕೇರಿದೆ.

ಮಂಗಳವಾರ ಪ್ರಕಟವಾದ ಪ್ರಯೋಗಾಲಯ ವರದಿಯಲ್ಲಿ ನಿತ್ಯದಂತೆ ಹುಬ್ಬಳ್ಳಿಯಲ್ಲೇ ಹೆಚ್ಚಿನ ಪ್ರಕರಣಗಳು ಪತ್ತೆಯಾಗಿವೆ. ಹುಬ್ಬಳ್ಳಿ ಶಹರ ಹಾಗೂ ತಾಲೂಕಿನ ಗ್ರಾಮಾಂತರ ಸೇರಿ ಸುಮಾರು 80 ಪ್ರದೇಶಗಳಲ್ಲಿ ಸೋಂಕಿತರು ಕಂಡುಬಂದಿದ್ದಾರೆ.

ಧಾರವಾಡ ಹಾಗೂ ತಾಲೂಕಿನ ಗ್ರಾಮಾಂತರ ಸೇರಿ 40 ಪ್ರದೇಶಗಳಲ್ಲಿ ಪ್ರಕರಣಗಳು ದೃಢಪಟ್ಟಿವೆ. ಕೆಲ ಪ್ರದೇಶಗಳಲ್ಲಿ ನಿತ್ಯವೂ ಒಂದಕ್ಕಿಂತ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿರುವುದು ಜನರಲ್ಲಿ ಭಯ ಮೂಡಿಸಿದೆ.

ಕಲಘಟಗಿ ತಾಲೂಕಿನ ಮಿಶ್ರಿಕೋಟಿ, ನಾಗನೂರ ಹೂಗಾರ ಓಣಿ, ಬಿಸರಳ್ಳಿ, ಗಳಗಿ ಹುಲಕೊಪ್ಪ, ಬೇಗೂರ; ನವಲಗುಂದ ತಾಲೂಕಿನ ನಾಶಿಪುಡಿ ಓಣಿ, ಕಾಲವಾಡ, ಹೆಬ್ಬಾಳ; ಕುಂದಗೋಳ ತಾಲೂಕಿನ ರೊಟ್ಟಿಗವಾಡದ ಪಟ್ಟೇದ ಓಣಿ, ಯರಗುಪ್ಪಿಯ ಕುಸುಗಲ್ ಓಣಿ, ಕಮಡೊಳ್ಳಿ, ತರ್ಲಘಟ್ಟ, ಬು.ಕೊಪ್ಪ, ಕಮಲೇಶ್ವರ ಓಣಿ, ಕಳಸ, ರೇವಣಸಿದ್ದೇಶ್ವರ ಪಾರ್ಕ್, ಅಲ್ತಾಫ ನಗರ, ಸಾದಗೇರ ಓಣಿ; ಅಣ್ಣಿಗೇರಿಯ ಎಸ್​ಬಿಐ ಬ್ಯಾಂಕ್, ಅಮೃತೇಶ್ವರ ನಗರ, ಬಂಗಾರಪ್ಪ ನಗರದಲ್ಲಿ ಸೋಂಕು ದೃಢಪಟ್ಟಿವೆ.

ಅನ್ಯ ಜಿಲ್ಲೆಗಳ ಏಳೆಂಟು ಪ್ರಕರಣಗಳು ಧಾರವಾಡ ಜಿಲ್ಲೆಯ ಆಸ್ಪತ್ರೆಗಳಿಗೆ ಬಂದಿವೆ.

ಕರೊನಾ ಶಂಕೆ, ಅಂತ್ಯಕ್ರಿಯೆಗೆ ಅಡ್ಡಿ

ಹುಬ್ಬಳ್ಳಿ: ಇಲ್ಲಿನ ಗದಗ ರಸ್ತೆಯ ರೇಲ್ವೆ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಮೃತಪಟ್ಟ ಕ್ರೖೆಸ್ತಧರ್ಮದ ಹಿರಿಯ ವ್ಯಕ್ತಿಯೊಬ್ಬರಿಗೆ ಕರೊನಾ ಇರಬಹುದು ಎಂದು ಶಂಕಿಸಿದ ಸಮಾಜದ ಕೆಲವರು ಅಂತ್ಯಕ್ರಿಯೆಗೆ ವಿರೋಧ ವ್ಯಕ್ತಪಡಿಸಿದ ಘಟನೆ ಮಂಗಳವಾರ ನಡೆದಿದೆ.

ಮಂಟೂರ ರಸ್ತೆಯ ಕ್ರಿಸ್ಟನ್ ಬ್ರದರನ್ ಅಸೆಂಬ್ಲಿಯ ಕ್ರೖೆಸ್ತ ಧರ್ಮದ ಮುಖಂಡ ನೀರೆಲ್ಲಾ ಸುಲೋಮನ್ (85) ಅನಾರೋಗ್ಯದಿಂದ ಬೆಳಗ್ಗೆ 4 ಗಂಟೆಗೆ ಮೃತಪಟ್ಟಿದ್ದರು. ಕುಟುಂಬದವರು ಹಾಗೂ ಸ್ನೇಹಿತರು ಮಂಟೂರ ರಸ್ತೆಯ ಕ್ರೖೆಸ್ತ ಸಮಾಜದ ಸ್ಮಶಾನದಲ್ಲಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದರು.

ಅವರಿಗೆ ಕರೊನಾ ಇರಬಹುದು ಎಂದು ಶಂಕಿಸಿದ್ದ ಕೆಲವರು ಸಮಾಜದ ಸ್ಮಶಾನದಲ್ಲಿ ಅಂತ್ಯಕ್ರಿಯೆಗೆ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದಾಗಿ ಮೃತದೇಹ ಮಧ್ಯಾಹ್ನದವರೆಗೆ ಆಸ್ಪತ್ರೆಯಲ್ಲೇ ಉಳಿದಿತ್ತು. ಮಧ್ಯ ಪ್ರವೇಶಿಸಿದ ಸಮಾಜದ ಮುಖಂಡರು ಸಭೆ ನಡೆಸಿ ಅನುಮತಿ ನೀಡಿದರು. ಬಳಿಕ ಮಂಟೂರ ರಸ್ತೆಯ ಕ್ರೖೆಸ್ತ ಸಮಾಜದ ಸ್ಮಶಾನದಲ್ಲಿ ಕ್ರೖೆಸ್ತ ಸಮುದಾಯದ ನಿಯಮದಂತೆ ಮಧ್ಯಾಹ್ನ 3 ಗಂಟೆಗೆ ಅಂತ್ಯಕ್ರಿಯೆ ನಡೆಸಲಾಯಿತು ಎಂದು ನೀರೆಲ್ಲಾ ಮೊಮ್ಮಗ ದೇವಸಹಾಯಂ ತಿಳಿಸಿದರು.

ಕೋವಿಡ್ ಕೇರ್ ಸೆಂಟರ್ ನಡೆಸಲು ಹಸ್ತಾಂತರ

ಹುಬ್ಬಳ್ಳಿ: ನಗರದ ನೆಹರು ಕಾಲೇಜಿನ ವಿದ್ಯಾರ್ಥಿನಿಯರ ವಸತಿ ಗೃಹ ಕಟ್ಟಡವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲು ಹುಬ್ಬಳ್ಳಿಯ ಅಂಜುಮನ್ ಎ ಇಸ್ಲಾಂ ಸಂಸ್ಥೆ ಮಂಗಳವಾರ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿತು.

ಸಂಸ್ಥೆಯ ಅಧ್ಯಕ್ಷ ಎಂ.ಸಿ. ಸವಣೂರ, ಉಪಾಧ್ಯಕ್ಷ ಅಲ್ತಾಫ್ ಕಿತ್ತೂರ ಹಾಗೂ ಪದಾಧಿಕಾರಿಗಳು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರಿಗೆ ಈ ಸಂಬಂಧ ಪತ್ರ ನೀಡಿದರು.

ಕಟ್ಟಡದ ಆವರಣವನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗಿದೆ. ಕಟ್ಟಡದ 33 ಕೊಠಡಿಗಳಲ್ಲಿ 100 ಮಂಚ ಹಾಗೂ 100 ಹಾಸಿಗೆ ವ್ಯವಸ್ಥೆ ಕಲ್ಪಿಸಿದ್ದೇವೆ. ಎಲ್ಲ ಕೊಠಡಿಗಳಲ್ಲಿ ಸ್ನಾನಗೃಹ, ಶೌಚಗೃಹಗಳಿವೆ. ವಿದ್ಯುತ್ ಹಾಗೂ ನೀರಿನ ಸಂಪರ್ಕವಿರುತ್ತದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ. ಸಂಸ್ಥೆಯ ಬಶೀರ್ ಹಳ್ಳೂರ, ಮುನಾಫ್ ದೇವಗಿರಿ, ಎಂ.ಎ. ಪಠಾಣ ಇದ್ದರು.