ಜಿಲ್ಲೆ

ಹಳಿಯಾಳದಲ್ಲಿ ಗೋ ರಕ್ಷಕನಿಗೆ ಸನ್ಮಾನ

ಹಳಿಯಾಳ: ರಾಜ್ಯ ಸರ್ಕಾರ ಗೋಹತ್ಯೆ ವಿಧೇಯಕ ಜಾರಿಗೊಳಿಸಿದ್ದನ್ನು ಸ್ವಾಗತಿಸಿ ತಾಲೂಕು ಬಿಜೆಪಿ ಘಟಕದ ವತಿಯಿಂದ ಗುರುವಾರ ಪಟ್ಟಣದಲ್ಲಿ ಗೋ ಪೂಜೆ ನಡೆಸಿ ಸಂಭ್ರಮ ಆಚರಿಸಲಾಯಿತು.

ಪಟ್ಟಣದ ಮುಖ್ಯ ಮಾರುಕಟ್ಟೆ ಬೀದಿಯಲ್ಲಿನ ಪಡ್ನಿಸ್ ವೃತ್ತದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾಜಿ ಶಾಸಕ ಸುನೀಲ ಹೆಗಡೆ ದಂಪತಿ ಗೋ ಪೂಜೆ ಮಾಡುವ ಮೂಲಕ ಸಂಭ್ರಮಾಚರಣೆಗೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಮಾಜಿ ಶಾಸಕ ಸುನೀಲ ಹೆಗಡೆ, ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸುವ ಮೂಲಕ ಗೋವುಗಳ ಪ್ರಾಣವನ್ನು ಸರ್ಕಾರ ರಕ್ಷಿಸಿದೆ ಎಂದರು. ಗೋ ಹತ್ಯೆ ಕಾಯ್ದೆ ಬಂದಿದ್ದರಿಂದ ಪಟ್ಟಣದಲ್ಲಿನ ಕಸಾಯಿ ಖಾನೆಯನ್ನು ತಕ್ಷಣ ನಿಲ್ಲಿಸಬೇಕು. ಇಲ್ಲವಾದಲ್ಲಿ ಪುರಸಭೆಯ ಮೇಲೆ ಗೋ ಹತ್ಯೆ ನಿಷೇಧ ಕಾಯ್ದೆಯಡಿ ಕೇಸ್ ಹಾಕುತ್ತೇವೆ ಎಂದು ಎಚ್ಚರಿಸಿದರು.

ಗೋ ಸಂರಕ್ಷಕರಿಗೆ ಸನ್ಮಾನ: ಸಮಾರಂಭದಲ್ಲಿ ಹಲವಾರು ವರ್ಷಗಳಿಂದ ಗೋ ಶಾಲೆ ತೆರೆದು ಗೋ ರಕ್ಷಣೆ ಮಾಡುತ್ತಿರುವ ಶಂಕರ ನಾರಾಯಣ ಐತಾಳ ಅವರನ್ನು ಮಾಜಿ ಶಾಸಕ ಸುನೀಲ ಹೆಗಡೆ ದಂಪತಿ ಸನ್ಮಾನಿಸಿ, ಗೋಶಾಲೆಗೆ ದೇಣಿಗೆ ನೀಡಿದರು. ಬಿಜೆಪಿ ಘಟಕದ ಅಧ್ಯಕ್ಷ ಗಣಪತಿ ಕರಂಜೇಕರ, ಪ್ರಮುಖರಾದ ಶಿವಾಜಿ ನರಸಾನಿ, ಅನಿಲ ಮುತ್ನಾಳೆ, ವಾಸುದೇವ ಪೂಜಾರಿ, ಸಂತಾನ ಸಾವಂತ, ಪ್ರದೀಪ ಹಿರೇಕರ, ಉಲ್ಲಾಸ ಬಿಡಿಕರ, ತಾನಾಜಿ ಪಟ್ಟೇಕರ, ವಿಲಾಸ ಯಡವಿ, ಯಲ್ಲಪ್ಪ ಹೊನ್ನೋಜಿ. ಜಯಲಕ್ಷ್ಮೀ ಚವ್ಹಾಣ, ಪುರಸಭಾ ಸದಸ್ಯ ಉದಯ ಹೂಲಿ, ಚಂದ್ರು ಕಮ್ಮಾರ, ಸಂತೋಷ ಘಟಕಾಂಬ್ಲೆ, ಶಾಂತಾ ಹಿರೇಕರ, ರೂಪಾ ಗಿರಿ, ಸಂಗೀತಾ ಜಾಧವ, ವರ್ತಕರಾದ ಶಿವು ಶೆಟ್ಟರ, ಅನಿಲ ಗಿರಿ, ಉದಯ ವಾಣಿ, ಸುಹಾಸ ಕೊಡಲಮಠ ಇದ್ದರು.