ಪಟ್ಟಣದ ವನಶ್ರೀ ವೃತ್ತದ ಬಳಿಯ ಗ್ರಾಮದೇವಿ ಗದ್ದುಗೆ ಮೈದಾನದಲ್ಲಿ ಪುರಸಭೆಯಿಂದ ಲಾನ್(ಕೃತಕ ಹುಲ್ಲುಹಾಸು) ಅಳವಡಿಸುವ ಕಾಮಗಾರಿ ಹಾಗೂ ಪಟ್ಟಣದ ಮರಡಿಗುಡ್ಡ ಪ್ರದೇಶದಲ್ಲಿಯ ಈದ್ಗಾ ಎದುರಿನ ಬನ್ನಿ ಮಂಟಪದಲ್ಲಿ ದೇವಸ್ಕಥಾನ ಸಮಿತಿಯ ಗಮನಕ್ಕೆ ತರದೇ ಇಂಟರ್‌ಲಾಕ್ ಅಳವಡಿಸುವ ಕಾಮಗಾರಿಯನ್ನು ನಡೆಸಿರುವುದು ವಿವಾದಕ್ಕೆ ಕಾರಣವಾಗಿತ್ತು. ಕಾಮಗಾರಿ ನಿಲ್ಲಿಸುವಂತೆ ಗ್ರಾಮದೇವಿ ಟ್ರಸ್ಟ್ ಕಮಿಟಿ ಮನವಿ ಮಾಡಿದರೂ ಪುರಸಭೆ ಕಾಮಗಾರಿ ಮುಂದುವರಿಸಿರುವುದು ವಿವಾದಕ್ಕೆ ಕಾರಣವಾಗಿತ್ತು.
ಶ್ರೀ ಗ್ರಾಮದೇವಿ ಟ್ರಸ್ಟ್ ಕಮೀಟಿ, ಇನ್ನಿತರ ಹಿಂದುಪರ ಸಂಘಟನೆಗಳು ಶುಕ್ರವಾರ ಕರೆ ನೀಡಿದ್ದ ಹಳಿಯಾಳ ಬಂದ್ ಗೆ ಉತ್ತಮ ಪ್ರತಿಕ್ರಿಯೇ ವ್ಯಕ್ತವಾಗಿದ್ದು, ಪಟ್ಟಣದಲ್ಲಿಯ ಎಲ್ಲ ಹೋಟೆಲ್, ಸಿನಿಮಾ ಥಿಯೇಟರ್, ಅಂಗಡಿ ಮುಗ್ಗಟ್ಟುಗಳು, ಬಾರ್ ರೆಸ್ಟೋರೆಂಟ್ ಸೇರಿದಂತೆ ಎಲ್ಲರೂ ತಮ್ಮ ವ್ಯವಹಾರಗಳನ್ನು ಸ್ಥಗೀತಗೊಳಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿ ಸಹಕಾರ ನೀಡಿದ್ದು ವಿಶೇಷವಾಗಿತ್ತು.
ಇನ್ನು ಪ್ರತಿಭಟನಾ ನಿರತರೇ ಪುರಸಭೆ ಅಳವಡಿಸಿದ್ದ ಇಂಟರ್‌ಲಾಕ್ ತೆಗೆಯಲು ಮುಂದಾದರು. ನಂತರ ಪುರಸಭೆ ಜೆಸಿಬಿ ಮೂಲಕ ಇಂಟರ್‌ಲಾಕ್‌ಗಳನ್ನು ತೆರವು ಮಾಡಿತು. ಮಾಜಿ ಶಾಸಕ ಸುನೀಲ ಹೆಗಡೆ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಪ್ರತಿಭಟನೆಯಲ್ಲಿ ಅನಿಲ ಮುತ್ನಾಳೆ, ಚೂಡಪ್ಪ ಬೊಬಾಟಿ,ಸುರೇಶ ದೇಸಾಯಿ, ಪುರಸಭೆ ಸದಸ್ಯರಾದ ಸಂತೋಷ ಘಟಕಾಂಬಳೆ, ಉದಯ ಹೂಲಿ, ಶಾಂತಾ ಹಿರೇಕರ, ಸಂಗೀತಾ ಜಾಧವ, ಪ್ರಮುಖರಾದ ಶಿವಾಜಿ ನರಸಾನಿ, ಮೋಹನ್ ಮಾವಳಂಗಿ, ವಿಲಾಸ ಯಡವಿ, ಆನಂದ ಕಂಚನಾಳಕರ, ಶಿವು ಶೆಟ್ಟರ್, ಬಸವರಾಜ ಬೆಂಡಿಗೇರಿಮಠ, ವಿಲಾಸ ಕಣಗಲಿ, ಸಂತಾನ ಸಾವಂತ, ವಿಷ್ಣು ಅಂತ್ರೋಳ್ಕರ ಅನೇಕರು ಇದ್ದರು.
ಗ್ರಾಮ ದೇವಿ ದೇವಸ್ಥಾನದಿಂದ ಪ್ರಾರಂಭವಾದ ಮೆರವಣಿಗೆ ಬ್ರಾಹ್ಮಣ ಗಲ್ಲಿ, ವೀರ ಸಂಗೋಳ್ಳಿ ರಾಯಣ್ಣ ವೃತ್ತ, ಮುಖ್ಯ ಮಾರುಕಟ್ಟೆ ರಸ್ತೆ, ಶಿವಾಜಿ ವೃತ್ತ, ಬಸವೇಶ್ವರ ಸರ್ಕಲ್ ಮೂಲಕ ಸಾಗಿ ಈದ್ಗಾ ಎದುರಿನ ಬನ್ನಿ ಮಂಟಪ ಪ್ರದೇಶವನ್ನು ತಲುಪಿತು. ಅಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ತಡೆದಾಗ ಉದ್ವಿಗ್ನ ವಾತಾವರಣ ಸೃಷ್ಟಿಯಾಯಿತು. ಈ ಘಟನೆ ಕೋಮು ಗಲಭೆಗೆ ತಿರುಗಬಾರದು ಎಂಬ ಮುನ್ನೆಚ್ಚರಿಕೆಯಾಗಿ ಹಳಿಯಾಳದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ನಿಯೋಜಿಸಿ ಕಟ್ಟೇಚ್ಚರ ವಹಿಸಲಾಗಿದೆ ಅಲ್ಲದೇ ಹಳಿಯಾಳ ತಹಸೀಲ್ದಾರ್ ಅವರು ಮರಡಿಗುಡ್ಡದ ಸುತ್ತಲು 1 ಕೀಮಿ ವ್ಯಾಪ್ತಿಯಲ್ಲಿ ಕಲಂ 144 ನಿಷೇದಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.